ಜನ ಲೋಕಪಾಲ ಮಸೂದೆಯಲ್ಲಿ ಏನಿದೆ?

ಕರ್ನಾಟಕದ ಲೋಕಾಯುಕ್ತ, ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಮೂರ್ತಿ ಸಂತೋಷ ಹೆಗಡೆ, ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಮತ್ತು ಆರ್ಟಿಐ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್ ಅವರು ರೂಪಿಸಿರುವ ಹೊಸ ಜನ ಲೋಕಪಾಲ ಮಸೂದೆಯ ಮಂಡನೆ ಆಗಲೇಬೇಕು, ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತುಹಾಕಲೇಬೇಕು ಎಂದು ಹಜಾರೆ ಆಗ್ರಹಿಸುತ್ತಿದ್ದಾರೆ.
ಹಳೆ ಭ್ರಷ್ಟಾಚಾರ ವಿರೋಧಿ ಕಾಯ್ದೆಯನ್ನು ಕಿತ್ತುಹಾಕಿ ಈಗ ರಚಿತವಾಗಿರುವ ಹೊಸ ಮಸೂದೆಯನ್ನು ಜಾರಿಗೆ ತಂದರೆ, ದೂರುಬಂದ ಒಂದು ವರ್ಷದಲ್ಲಿ ತನಿಖೆ ಪೂರ್ಣಗೊಂಡು, ಮುಂದಿನ ವರ್ಷದಲ್ಲಿ ವಿಚಾರಣೆ ಮುಗಿದು ಆರೋಪಿ ಜೈಲು ಸೇರಬೇಕಾಗುತ್ತದೆ. ರಾಜಕಾರಣಿ ಮತ್ತು ಸರಕಾರಿ ಅಧಿಕಾರಿಗಳನ್ನು ಕೂಡ ಇದರ ವ್ಯಾಪ್ತಿಯಲ್ಲಿ ತರಬೇಕೆಂದು ಆಗ್ರಹಿಸಲಾಗುತ್ತಿದೆ.
ಅಣ್ಣಾ ಹಜಾರೆ ಜೊತೆಗೆ ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ, ಸ್ವಾಮಿ ಅಗ್ನಿವೇಶ್, ಆರ್ಟ್ ಆಪ್ ಲಿವಿಂಗ್ ನ ರವಿ ಶಂಕರ್ ಗುರೂಜಿ, ನೃತ್ಯಗಾರ್ತಿ ಮಲ್ಲಿಕಾ ಸಾರಾಭಾಯ್ ಮುಂತಾದವರು ಭ್ರಷ್ಟಾಚಾರ ವಿರೋಧಿ ಆಂದೋಳನವನ್ನು ಹುಟ್ಟುಹಾಕಿದ್ದಾರೆ. ಇದಕ್ಕೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮುಂತಾದವರು ಬೆಂಬಲ ಸೂಚಿಸಿದ್ದಾರೆ. ಆನ್ ಲೈನ್ ನಲ್ಲಿ ಈ ಚಳವಳಿಗೆ 5 ಲಕ್ಷ 70 ಸಾವಿರ ಜನ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇಷ್ಟೆಲ್ಲ ಜನಾಗ್ರಹಕ್ಕೆ ಕಾರಣವಾಗಿರುವ ಈ ಜನ ಲೋಕಪಾಲ್ ಕಾಯ್ದೆಯಲ್ಲಿ ಏನಿದೆ?
* ಕೇಂದ್ರದಲ್ಲಿ ಲೋಕಪಾಲ ಮತ್ತು ಪ್ರತಿರಾಜ್ಯದಲ್ಲಿ ಲೋಕಾಯುಕ್ತ ನೇಮಕ.
* ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗದಂತೆ ಲೋಕಪಾಲ ಸಂಸ್ಥೆ ಕೂಡ ಸ್ವತಂತ್ರವಾಗಿರುತ್ತದೆ.
* ಭ್ರಷ್ಟ ವ್ಯಕ್ತಿ ರಾಜಕಾರಣಿ, ಅಧಿಕಾರಿ, ನ್ಯಾಯಮೂರ್ತಿ ಯಾರೇ ಆಗಿರಲಿ, ಆರೋಪ ಸಾಬೀತಾದರೆ ಎರಡು ವರ್ಷದಲ್ಲಿ ಜೈಲು ಸೇರಬೇಕು.
* ಭ್ರಷ್ಟ ವ್ಯಕ್ತಿಯಿಂದ ಸರಕಾರಕ್ಕೆ ಆದ ನಷ್ಟವನ್ನು ಶಿಕ್ಷೆ ಆಗುವ ದಿನ ಮರುಪಾವತಿಸಬೇಕು.
* ಸರಿಯಾದ ಸಮಯದಲ್ಲಿ ಯಾವುದೇ ವ್ಯಕ್ತಿಗೆ ಸಂಬಂಧಿಸಿದ ಕೆಲಸ ನೆರವೇರದಿದ್ದರೆ ಕರ್ತವ್ಯಚ್ಯುತಿ ಮಾಡಿದ ಅಧಿಕಾರಿಗೆ ದಂಡ ವಿಧಿಸಿ, ಅದನ್ನು ಸಂಬಂಧಪಟ್ಟ ವ್ಯಕ್ತಿಗೆ ನೀಡಲಾಗುವುದು.
* ಪಂಚಾಯತ್ ನಲ್ಲಿ ಹಣ ದುರುಪಯೋಗವಾದರೆ, ರೇಶನ್ ಕಾರ್ಡ್ ನಲ್ಲಿ ಗೋಲ್ ಮಾಲ್ ನಡೆದರೆ, ಪೊಲೀಸ್ ಲಂಚ ಕೇಳಿದರು, ರಸ್ತೆ ಸರಿಯಾಗಿ ಹಾಕದಿದ್ದರೆ, ಪಾಸ್ ಪೋರ್ಟ್ ಸೂಕ್ತ ಸಮಯದಲ್ಲಿ ದೊರಯದಿದ್ದರೆ, ಲೈಸೆನ್ಸ್ ನೀಡುವ ಅಧಿಕಾರಿ ಕಿರಿಕ್ ಮಾಡಿದರೆ, ಸಬ್ ರಿಜಿಸ್ಟ್ರಾರ್ ಟೇಬಲ್ ಕೆಳಗೆ ಕೈ ಚಾಚಿದರೆ ಲೋಕಪಾಲನಿಗೆ ದೂರು ನೀಡಬಹುದು.
* ಲೋಕಪಾಲ ರಾಜಕಾರಣಿಗಳಿಂದ ನೇಮಕವಾಗದೆ, ಜನರಿಂದ, ಸಾಂವಿಧಾನಿಕ ಅಧಿಕಾರಿಯಿಂದ, ನ್ಯಾಯಮೂರ್ತಿಗಳಿಂದ ನೇಮಕವಾಗುವುದರಿಂದ ನೇಮಕವಾಗುವುದರಿಂದ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ.
* ಜನ ಲೋಕಪಾಲ ಮಸೂದೆ ಜಾರಿಗೆ ಬಂದರೆ ಮುಖ್ಯ ಜಾಗೃತ ಆಯುಕ್ತ, ವಿಚಕ್ಷುದಳ, ಸಿಬಿಐನ ಭ್ರಷ್ಟವಿರೋಧಿ ಶಾಖೆಗಳು ಲೋಕಪಾಲದಲ್ಲಿ ಸೇರಿಕೊಳ್ಳುತ್ತವೆ.
* ಭ್ರಷ್ಟಾಚಾರದ ವಿರುದ್ಧ ದನಿಯೆತ್ತುವ ವ್ಯಕ್ತಿಗೆ ಲೋಕಪಾಲರಿಂದ ಸಂಪೂರ್ಣ ಭದ್ರತೆ ದೊರೆಯುತ್ತದೆ.












Click it and Unblock the Notifications