ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪನ ಕಾಪಾಡುವನೆ ನಂಜುಡೇಶ್ವರ?

By Prasad
|
Google Oneindia Kannada News

Yeddyurappa in troubled water
ಬೆಂಗಳೂರು, ಮಾ. 23 : ಬಿಎಸ್ ಯಡಿಯೂರಪ್ಪ ನೇತೃತ್ವದ ಸರಕಾರ ಮತ್ತೊಮ್ಮೆ ಕವಲುದಾರಿಯತ್ತ ಬಂದು ನಿಂತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ, ಅರವಿಂದ ಲಿಂಬಾವಳಿ, ರಾಮದಾಸ್ ಮುಂತಾದ ನಾಯಕರು ನಾಯಕತ್ವ ಬದಲಾಗಲೇಬೇಕು ಎಂದು ಪಟ್ಟುಹಿಡಿದಿರುವ ಹಿನ್ನೆಲೆಯಲ್ಲಿ ಒಡಲಾಳದಲ್ಲಿ ತುಂಬಿಕೊಂಡಿದ್ದ ಭಿನ್ನಮತದ ಜ್ವಾಲಾಮುಖಿ ಮತ್ತೆ ಸ್ಫೋಟಗೊಂಡಿದೆ.

ಅಧಿಕಾರ ವಹಿಸಿಕೊಂಡಂದಿನಿಂದ ನಾಲ್ಕನೆಯ ಬಾರಿಗೆ ಸಂಕಷ್ಟಕ್ಕೆ ಸಿಲುಕಿರುವ ಯಡಿಯೂರಪ್ಪನವರು ಭಿನ್ನಮತ ಶಮನಕ್ಕೆ ದಾರಿ ಹುಡುಕಲೆಂದು ನಾಳೆ, ಮಾ.24ರಂದು ಗೃಹಕಚೇರಿ ಕೃಷ್ಣಾದಲ್ಲಿ ಎಲ್ಲ ಶಾಸಕರ ಸಭೆಯನ್ನು ಬೆಳಿಗ್ಗೆ 11 ಗಂಟೆಗೆ ಕರೆದಿದ್ದಾರೆ. ಸಚಿವರ ಇಲಾಖಾವಾರು ಸಾಧನೆಯ ಪರಿಶೀಲನೆ ನಡೆಸಿ ದೂರುದುಮ್ಮಾನುಗಳನ್ನು ಆಲಿಸಿ ಬಿಕ್ಕಟ್ಟಿಗೆ ಸೂಕ್ತ 'ಪರಿಹಾರ' ಕಂಡುಕೊಳ್ಳಬೇಕೆಂಬ ಲೆಕ್ಕಾಚಾರ ಯಡಿಯೂರಪ್ಪ ಹಾಕಿದ್ದಾರೆ.

ಆದರೆ, ಯಡಿಯೂರಪ್ಪ ಲೆಕ್ಕಾಚಾರವನ್ನೆಲ್ಲಾ ತಲೆಕೆಳಗು ಮಾಡಲು ಹಿರಿಯ ಶಾಸಕರು ಸೇರಿದಂತೆ ಸಚಿವರ ದಂಡು ರೆಡಿಯಾಗಿದ್ದು, ದೆಹಲಿ ದಂಡ ಯಾತ್ರೆ ಕೈಗೊಳ್ಳಲು ಸಿದ್ಧತೆ ನಡೆಸಿದೆ. ಮಾಧ್ಯಮದವರು ಕೇಳಿದಾಗಲೆಲ್ಲ ಭಿನ್ನಮತ ಇಲ್ಲವೇ ಇಲ್ಲ, ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆಂದು ರೈಲು ಬಿಡುವ ಈಶ್ವರಪ್ಪನವರ ಮುಂದಾಳತ್ವದಲ್ಲಿ ಯಡಿಯೂರಪ್ಪನವರನ್ನು ಪಲ್ಟಿ ಹೊಡೆಸಲು ತಯಾರಿ ಮಾಡಿಕೊಳ್ಳುತ್ತಿದೆ. ಈಶ್ವರಪ್ಪನವರ ಜೊತೆ ಅನಂತ್ ಕುಮಾರ್, ಜಗದೀಶ್ ಶೆಟ್ಟರ್, ಜನಾರ್ದನ ರೆಡ್ಡಿ ಮುಂತಾದವರು ಕೈಜೋಡಿಸಿದ್ದಾರೆಂಬುದು ರಹಸ್ಯವಾಗೇನೂ ಉಳಿದಿಲ್ಲ.

ಭೂ ಹಗರಣ, ಡಿನೋಟಿಫಿಕೇಶನ್ ಭಾಗಗಡಿಯ ನಂತರ ಪ್ರೇರಣಾ ಟ್ರಸ್ಟ್ ನಿಂದ ನಡೆದಿದೆಯೆನ್ನಲಾದ ಗೋಲ್ ಮಾಲ್ ಮುಖ್ಯಮಂತ್ರಿಗಳ ಕೊರಳಿಗೆ ಸುತ್ತಿಕೊಂಡಿದೆ. ಅದು ಸುಲಭವಾಗಿ ಬಿಟ್ಟುಕೊಳ್ಳುವ ಲಕ್ಷಣಗಳೂ ಕಾಣಿಸುತ್ತಿಲ್ಲ. ಸದ್ಯಕ್ಕೆ ನಾಳೆಯ ಸಭೆಗೆ ಪ್ರತಿ ಶಾಸಕನೂ ಇರಲೇಬೇಕೆಂದು ಕಟ್ಟಾಜ್ಞೆ ಹೊರಡಿಸಲಾಗಿದೆ. ಆದರೆ, ಎಷ್ಟು ಜನ ಬರಲಿದ್ದಾರೆ ಎಂಬುದೇ ಸದ್ಯದ ಪ್ರಶ್ನೆ. ಯಡಿಯೂರಪ್ಪನವರನ್ನು ಯಾವುದೇ ಕಾರಣಕ್ಕೂ ಬೆಂಬಲಿಸುತ್ತಿದ್ದ ಕಾನೂನು ಸಚಿವ ಸುರೇಶ್ ಕುಮಾರ್ ಮತ್ತು ಗೃಹ ಸಚಿವ ಅಶೋಕ್ ಕೂಡ ಮುನಿಸಿಕೊಂಡಿರುವುದು ತಲೆನೋವಾಗಿ ಪರಿಣಮಿಸಿದೆ.

ಏಪ್ರಿಲ್ 9ರಂದು ಚನ್ನಪಟ್ಟಣ, ಜಗಳೂರು, ಬಂಗಾರಪೇಟೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿರುವುದರಿಂದ ಭಿನ್ನಮತದ ಹೊಗೆ ಎಬ್ಬಿಸುವುದು ಸೂಕ್ತವಲ್ಲ ಎಂಬುದು ಯಡಿಯೂರಪ್ಪನವರ ಅಭಿಮತ. ಪ್ರೇರಣಾ ಟ್ರಸ್ಟ್ ಹಗರಣವನ್ನು ಕೆದಕುವುದು ಕೂಡ ಸೂಕ್ತವಲ್ಲ ಎಂದು ವರಿಷ್ಠರ ಬಳಿ ಯಡಿಯೂರಪ್ಪನವರು ಸಾರಿ ಬಂದಿದ್ದಾರೆ. ಭಿನ್ನಮತವನ್ನು ಹುಟ್ಟುಹಾಕಿದ್ದವರ ವಿರುದ್ಧವೂ ದೂರು ನೀಡಿ ಬಂದಿದ್ದಾರೆ ಎನ್ನಲಾಗಿದೆ.

ಆಂತರ್ಯದಲ್ಲಿ ನೋವು, ಆತಂಕ ಮಡುಗಟ್ಟಿದ್ದರೂ ಬಹಿರಂಗದಲ್ಲಿ ನಗುಮೊಗದಿಂದಲೇ ಇರುವ ಯಡಿಯೂರಪ್ಪನವರು ಮೈಸೂರಿನ ನಂಜುಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಅಡ್ಡಬಿದ್ದು ಬಂದಿದ್ದಾರೆ. ದೇವ್ರೆ ತಪ್ಪಾಗಿದ್ರೆ ಕ್ಷಮಿಸು ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ರಾಜ್ಯದ ರಾಜಕೀಯದಲ್ಲಿ ಉದ್ಭವವಾಗಿರುವ ಸಂಕಷ್ಟ ಪರಿಹಾರಕ್ಕೆಂದು ಪೂಜೆ ಸಲ್ಲಿಸಿದ್ದಾಗಿ ಹೇಳಿದ್ದಾರೆ. ಕಾಪಾಡುವನೆ ನಂಜುಡೇಶ್ವರ?

English summary
Karnataka Chief Minister BS Yeddyurappa is in toubled water again. BSY has called for all legislators meet in Bangalore to solve the problem. But, many legislators are hell bent on change in leadership.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X