ಪಿಯು ಪರೀಕ್ಷೆ: ಫಿಸಿಕ್ಸ್ ಪೇಪರ್ ಲೀಕ್

ಪ್ರಕರಣದ ಸಂಬಂಧ ಶಿಕ್ಷಣಾಧಿಕಾರಿಗಳ ಜತೆ ತಕ್ಷಣ ಸಭೆ ನಡೆಸಿದ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಧ್ಯಾಹ್ನ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಷಡ್ಯಂತರದ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆಗೆ ಆದೇಶಿಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಉಗ್ರ ಕ್ರಮ ಕೈಗೊಳ್ಳಲಾಗುವುದು. ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣ ರಾಜ್ಯದಲ್ಲಿ ಬೇರೆಲ್ಲೂ ನಡೆದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು. ಪ್ರಶ್ನೆ ಪತ್ರಿಕೆ ಎಲ್ಲ ವಿದ್ಯಾರ್ಥಿಗಳ ಕೈಗೆ ಸಿಕ್ಕಿಲ್ಲ. ಆದ್ದರಿಂದ ಈ ಹಂತದಲ್ಲಿ ಮರುಪರೀಕ್ಷೆ ಕೈಗೊಳ್ಳುವ ಅಗತ್ಯ ಇಲ್ಲ ಎಂದು ಸಚಿವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
ತಾಜಾ ವರದಿಗಳ ಪ್ರಕಾರ ಬಹಿರಂಗಗೊಂಡಿರುವ ಈ ಪ್ರಶ್ನೆ ಪತ್ರಿಕೆಯು ಕೈಬರಹದಲ್ಲಿದೆ. ಕ್ವೆಶ್ಚನ್ ಪೇಪರ್ ಜತೆಗೆ ಉತ್ತರ ಪತ್ರಿಕೆಯನ್ನೂ ಮಾರಾಟ ಮಾಡಿದ್ದಾರೆ. ಆತಂಕದ ವಿಷಯವೆಂದರೆ ಈ ಪೇಪರ್-ನಲ್ಲಿರುವ ಪ್ರಶ್ನೆಗಳು ಶೇ. 95ರಷ್ಟು ಅಸಲಿಯದ್ದಾಗಿದೆ. ಆದರೆ ಫಿಸಿಕ್ಸ್ ಪೇಪರ್ ಲೀಕ್ ಪ್ರಕರಣ ಅಸಲಿಯೋ, ನಕಲಿಯೋ ಎಂಬುದನ್ನು ಕರ್ನಾಟಕ ಪದವಿ ಪೂರ್ವ ಪರೀಕ್ಷಾ ಮಂಡಳಿ ಇನ್ನೂ ಸ್ಪಷ್ಟಪಡಿಸಿಲ್ಲ.
ಲೆಕ್ಚರರ್ ಶಿವಣ್ಣ, ಕುಮಾರ್ ಎಂಬ ಏಜೆಂಟಿನ ಜತೆಗೂಡಿ ಪ್ರಶ್ನೆ ಪತ್ರಿಕೆ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ವಂಚಕರಿಬ್ಬರೂ ಫಿಸಿಕ್ಸ್ ಪೇಪರ್ಅನ್ನು ತಲಾ ಒಂದು ಲಕ್ಷ ರುಪಾಯಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಗುಬ್ಬಿ ಕಾಲೇಜಿ ಬಳಿ ಸೇರಿದ್ದ ಪೋಷಕರು ಮತ್ತು ಸಾರ್ವಜನಿಕರು ವಂಚಕರ ತಂಡವನ್ನು ಚೆನ್ನಾಗಿ ಥಳಿಸಿರುವ ಘಟನೆಯೂ ನಡೆದಿದೆ. ಇಬ್ಬರನ್ನೂ ಗುಬ್ಬಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.












Click it and Unblock the Notifications