ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗೆ ಮಿನರಲ್ ವಾಟರ್ ಅನಿವಾರ್ಯ ಕರ್ಮ!

By Srinath
|
Google Oneindia Kannada News

Bangalore No Cauvery Water
ಬೆಂಗಳೂರು, ಮಾ. 21: ಕ್ಲಿಯೊಪಾತ್ರ ಗೊತ್ತಲ್ಲ. ಈಜಿಪ್ಟಿನ ಯುವ ರಾಣಿ. ರೋಮ್ ಸಾಮ್ರಾಜ್ಯದ ವಿರುದ್ಧ ದಂಗೆಯೆದ್ದ ಪಾತ್ರಧಾರಿ. ಅವಳು ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಒಳಗೊಳಗೇ ಏನು ಮಾಡುತ್ತಿದ್ದಳೆಂದರೆ ಕತ್ತೆ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದಳು. ಅದ್ಯಾಕಪ್ಪಾ ಈವಾಗ ಆ ವಿಚಾರ ಎಂದು ಮೂಗುಮುರಿಯಬೇಡಿ. ವಿಷಯ ಏನೆಂದರೆ ಬೆಂಗಳೂರಿನಲ್ಲಿ ಅನೇಕ ಭಾಗಗಳಲ್ಲಿ ಜನ ಎಲ್ಲದಕ್ಕೂ ಮಿನರಲ್ ವಾಟರ್ ಅನ್ನೇ ಬಳಸುತ್ತಿದ್ದಾರೆ. ಏನು ನಮ್ಮ ಬೆಂಗಳೂರಿಗರು ಅಷ್ಟೊಂದು ಶ್ರೀಮಂತರಾದರೆ ಅಥವಾ ಸೌಂದರ್ಯಪ್ರಜ್ಞೆ ವಸಿ ಜಾಸ್ತಿಯಾಯಿತೇ ಎಂದು ಗೊಣಗಬೇಡಿ. ಏಕೆಂದರೆ ಅವರಿಗಿದು ಅನಿವಾರ್ಯ ಕರ್ಮವಾಗಿದೆ. ಥ್ಯಾಂಕ್ಸ್ ಟು ಬಿಎಸ್ ಎಸ್ ಡಬ್ಲ್ಯು ಉರುಫ್ ಬೆಂಗಳೂರು ಜಲಮಂಡಳಿ!

ಬೃಹತ್ ನಗರದಲ್ಲಿ ಅಪಾರ್ಟ್ ಮೆಂಟ್ ಗಳು ನಾಯಿಕೊಡೆಗಳಂತೆ ತಲೆಯೆತ್ತಿದ್ದೇ ಬಂತು, ಜಲ ಕ್ಷಾಮ ವಿಪರೀತವಾಗಿದೆ. ಅಪಾರ್ಟ್ ಮೆಂಟ್ ವಾಸಿಗಳು ಎಲ್ಲದಕ್ಕೂ ಅಂದರೆ ಕುಡಿಯಲಷ್ಟೇ ಅಲ್ಲ ಸ್ನಾನ, ಅಡುಗೆ, ಬಟ್ಟೆ, ಪಾತ್ರ ತೊಳೆಯುವುದಕ್ಕೂ ಅನಿವಾರ್ಯ ಕರ್ಮವೆಂಬಂತೆ ಮಿನರಲ್ ವಾಟರ್-ಗೆ ಒಗ್ಗಿಹೋಗಿದ್ದಾರೆ. ಇವರಿಗೆ ಜಲಮಂಡಳಿಯ ಕಾವೇರಿ ನೀರು ಸಂಪರ್ಕವೇ ಲಭ್ಯವಾಗಿಲ್ಲ. ಕೆಲವೆಡೆ ಬೋರ್ ವೆಲ್ ಮತ್ತು ಟ್ಯಾಂಕರ್ ನೀರನ್ನೇ ಅವಲಂಬಿಸಿದ್ದಾರೆ.

'ಟ್ಯಾಂಕರ್ ನೀರಿನಲ್ಲಿ ಕ್ಲೋರಿನ್ ಅಧಿಕವಾಗಿರುತ್ತದೆ. ಕುಡಿಯುವುದಕ್ಕಂತೂ ಬಳಸಲಾಗದು. ಅದಕ್ಕೆಂದೇ ಪ್ರತ್ಯೇಕ ನೀರು ಖರೀದಿಸುತ್ತೇವೆ. ಇನ್ನು, ಬೋರ್ ವೆಲ್ ನೀರು ಗಡಸು. ಅದನ್ನು ಬಳಸಿದರೆ ಮೈಯೆಲ್ಲ ಉರಿ ಕಿತ್ತುಕೊಳ್ಳುತ್ತದೆ' ಎಂದು ಪೇಚಾಡುತ್ತಾರೆ ಸರ್ಜಾಪುರ ನಿವಾಸಿಗಳು. ಇಂತಹ ಪ್ರಕರಣಗಳು ನೂರೆಂಟು. ನಗರದ ಹೊರ ವಲಯದಲ್ಲಿರುವವರ ಸಾಮಾನ್ಯ ಗೋಳಿದು. ಬೇಸಿಗೆ ಬಂದರಂತೂ ನರಕಸದೃಶ.
ಇದರಿಂದ ಮಿನರಲ್ ವಾಟರ್ ಕಂಪನಿಗಳಿಗೆ ಸುಗ್ಗಿಯೋ ಸುಗ್ಗಿ. ಈ ಹಿಂದೆ ಕುಡಿಯುವುದಕ್ಕಾಗಿ ಮಾತ್ರ 20 ಲೀಟರ್ ವಾಟರ್ ಕ್ಯಾನ್ ಖರೀದಿಸುತ್ತಿದ್ದವರು ಈಗ ಎಲ್ಲ ಬಳಕೆಗೂ 7-8 ಕ್ಯಾನ್ ಖರೀದಿಸುತ್ತಿದ್ದಾರೆ. ಇದು ಸಾವಿರ, ಎರಡು ಸಾವಿರ ರುಪಾಯಿಯನ್ನು ಗುಳುಂ ಮಾಡುತ್ತಿದೆ. ಹಾಗೆಂದು ಕಾವೇರಿ ಸಂಪರ್ಕವಿರುವ ಬಡಾವಣೆಗಳಲ್ಲಿ ಜನ ಅದೃಷ್ಟವಂತರು ಎಂದು ತಪ್ಪಾಗಿ ಭಾವಿಸಬೇಡಿ. ಏಕೆಂದರೆ ಅನೇಕ ಕಡೆ ಎರಡು ವಾರಕ್ಕೊಮ್ಮೆ (ಎರಡು ದಿನಕ್ಕಲ್ಲ!) ಕಾವೇರಿ ಹರಿಯುತ್ತಾಳೆ.

English summary
Residents in Bangalore outskirts are facing water shortage, to be specific cauvery water supplied by BWSSB. As such they are depending on mineral water for daily chorous usage. It seems Water Board is helpless.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X