ಪ್ರಿಯಕರನನ್ನು ನಂಬಿ ಬಂದವಳು ಹೆಣವಾದಳು

Nanjangud Rathnamma
ನಂಜನಗೂಡು, ಮಾ. 19 : ಬೆಳೆದ ನಾಲ್ಕು ಮಕ್ಕಳಿದ್ದರೂ ಮೋಹದ ಬಲೆಗೆ ಬಿದ್ದ 45ರ ಪ್ರಾಯದ ವಿಧವೆ ರತ್ನಮ್ಮ ಎಂಬಾಕೆ ಇಬ್ಬರು ಹೆಣ್ಣು ಮಕ್ಕಳಿರುವ ಅಷ್ಟೇ ವಯಸ್ಸಿನ ಪ್ರಿಯಕರನಿಂದಲೇ ವಂಚನೆಗೊಳಗಾಗಿ ಹತ್ಯೆಗೀಡಾದ ಘಟನೆ ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ಬಳಿಯಿರುವ ಪ್ರಶಾಂತ್ ಲಾಡ್ಜ್‌ನಲ್ಲಿ ಜರುಗಿದೆ.

ಕಳೆದ ಫೆಬ್ರವರಿ 13ರಂದು ಬೆಳಿಗ್ಗೆ ಪ್ರಶಾಂತ್ ಲಾಡ್ಜ್‌ನ ರೂಂ ನಂ. 104ರಲ್ಲಿ ಮಹಿಳೆಯೊಬ್ಬಳ ಮರ್ಡರ್ ಆಗಿದೆ ಎಂಬ ಮಾಹಿತಿ ಪಟ್ಟಣ ಪೊಲೀಸ್ ಠಾಣೆಗೆ ಬಂದಿತ್ತು. ತಕ್ಷಣ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಮೋದ್‌ಕುಮಾರ್, ಎಸ್‌ಐ ಕೆ.ಎಂ.ರಫೀಕ್, ಕ್ರೈಂ ಎಸ್‌ಐ ಸಿದ್ದರಾಜು, ಎಎಸ್‌ಐ ತಿಮ್ಮನಾಯಕ ಹಾಗೂ ಸಿಬ್ಬಂದಿಗಳು ಲಾಡ್ಜ್‌ಗೆ ತೆರಳಿ ನೋಡಿದಾಗ ಕೊಠಡಿಯೊಳಗೆ ಅಂದಾಜು 45ವರ್ಷ ಪ್ರಾಯದ ಅಪರಿಚಿತ ಮಹಿಳೆ ಶವವಾಗಿ ಮಂಚದ ಕೆಳಗೆ ಮಕ್ಕಡೆ ಮಲಗಿದ್ದಳು.

ಪ್ರಿಯಕರನಿಂದಲೇ ಹತ್ಯೆ : ಆಕೆಯನ್ನು ಲಾಡ್ಜ್‌ಗೆ ಕರೆತಂದಿದ್ದ ವ್ಯಕ್ತಿಯೇ ಹತ್ಯೆಗೈದು ಪರಾರಿಯಾಗಿದ್ದಾನೆ ಎಂಬುವುದನ್ನು ಅರಿಯಲು ಪೊಲೀಸರಿಗೆ ಹೆಚ್ಚು ಸಮಯ ಬೇಕಾಗಿರಲಿಲ್ಲ. ಲಾಡ್ಜ್‌ನಲ್ಲಿ ರೂಂ ಪಡೆಯುವ ಸಂದರ್ಭ ಅವರು ರಿಜಿಸ್ಟರ್‌ನಲ್ಲಿ ನೀಡಿದ್ದ ವಿಳಾಸವನ್ನು ಪರಿಶೀಲಿಸಿದಾಗ 'ಗುರುಮೂರ್ತಿ, ಕಾಳಮ್ಮನಗುಡಿ ಸರ್ಕಲ್, 4ನೇ ಕ್ರಾಸ್, ಅರಸೀಕೆರೆ' ಎಂದು ನಮೂದಿಸಲಾಗಿತ್ತು. ವಿಳಾಸವನ್ನು ಬೆನ್ನತ್ತಿ ಹೋದವರಿಗೆ ಅದು ಬೋಗಸ್ ವಿಳಾಸ ಎಂಬುವುದು ಗೊತ್ತಾಗಿತ್ತು. ಆದರೆ ಮಹಿಳೆಯ ಹತ್ಯೆ ಮಾಡಿದ ಹಂತಕನನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.

ಸುಳಿವು ಬಿಟ್ಟು ಹೋದ ಹಂತಕ : ಹಂತಕ ಯಾವುದೇ ರೀತಿಯ ಸುಳಿವು ಸಿಗದಂತೆ ತನ್ನ ಚಾಣಕ್ಷ್ಯತನ ಮೆರೆದಿದ್ದ. ಆದರೆ ಫೋನ್ ನಂಬರ್ ಬರೆಯುವಾಗ ಎಡವಿಬಿದ್ದಿದ್ದನು. ಮೊಬೈಲ್ ನಂ.95381 21945 ಎಂದು ಬರೆದಿದ್ದನು. ಆ ನಂಬರ್‌ಗೆ ಫೋನ್ ಮಾಡಿದಾಗ ಅದು ಸ್ವಿಚ್ ಆಫ್ ಆಗಿತ್ತು. ಆ ನಂಬರ್‌ನ ಲೊಕೇಶನ್ ಹುಡುಕಿದಾಗ ಅದು ಶಿಡ್ಲಘಟ್ಟ ಕಡೆಯದು ಎಂಬುವುದು ಗೊತ್ತಾಗಿತ್ತು. ಮೊಬೈಲ್ ನಂಬರ್ ಬಗ್ಗೆ ವಿಚಾರಿಸಿದಾಗ ಅದು ಶಿಡ್ಲಘಟ್ಟ ರೇಷ್ಮೆ ಡೀಲರ್ ವೆಂಕಟೇಶ್ ಎಂಬಾತನದ್ದು ಎಂಬುವುದು ಗೊತ್ತಾಗಿತ್ತು. ಆತನನ್ನು ಬಂಧಿಸಿ ನಂಜನಗೂಡಿಗೆ ಕರೆತಂದು ವಿಚಾರಿಸಿದಾಗ ಆತ ಕೊಲೆಯಾದ ಮಹಿಳೆ ಯಾರು? ಆಕೆಯನ್ನು ಏಕೆ ಕೊಲೆ ಮಾಡಿದೆ ಎಂಬ ಬಗ್ಗೆ ಆತ ಬಾಯಿಬಿಟ್ಟಿದ್ದನು.

ಪ್ರಿಯಕರನ ಬಲೆಯಲ್ಲಿ : ಅವಳು ರತ್ನಮ್ಮ ಸುಮಾರು ನಲ್ವತೈದರ ಪ್ರಾಯದ ಈಕೆಗೆ ನಾಲ್ಕು ಮಕ್ಕಳಿದ್ದಾರೆ. ಅವರಲ್ಲಿ ಮೂವರು ಗಂಡು ಒಬ್ಬಳು ಹೆಣ್ಣು ಮಗಳು. ಶಿಡ್ಲಘಟ್ಟದ ನಿವಾಸಿಯಾದ ಈಕೆಯ ಗಂಡ ಕೆಲವು ವರ್ಷಗಳ ಹಿಂದೆ ಸತ್ತುಹೋಗಿದ್ದನು. ಹಾಗಾಗಿ ವಿಧವೆ ರತ್ನಮ್ಮ ರೇಷ್ಮೆ ಫ್ಯಾಕ್ಟರಿಯಲ್ಲಿ ರೀಲಿಂಗ್ ಕೆಲಸ ಮಾಡುತ್ತಾ ಮಕ್ಕಳನ್ನು ಸಾಕಿ ಸಲಹುತ್ತಿದ್ದಳು.

ರತ್ನಮ್ಮಳನ್ನು ಹತ್ತಿರದಿಂದ ನೋಡುತ್ತಿದ್ದ, ಅದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ನಲವತೈದು ವರ್ಷ ಪ್ರಾಯದ ವೆಂಕಟೇಶ್‌ಗೆ ಅವಳ ಮೇಲೆ ವ್ಯಾಮೋಹ ಹುಟ್ಟಿತ್ತು. ತನಗೆ ಹೆಂಡತಿ ಹಾಗೂ ವಯಸ್ಸಿಗೆ ಬಂದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎಂಬ ಪ್ರಜ್ಞೆಯೂ ಆತನಿಗಿರಲಿಲ್ಲ. ರತ್ನಮ್ಮಳನ್ನು ತನ್ನ ಬುಟ್ಟಿಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದನು. ಊರಿನಲ್ಲಿ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ ವೆಂಕಟೇಶ ಸಾಲಗಾರರಿಂದ ಮುಕ್ತಿ ಹೊಂದಲು ರತ್ನಮ್ಮನ ಮೈಮೇಲಿದ್ದ ಒಡವೆಗಳನ್ನು ಹೇಗಾದರು ಮಾಡಿ ಎಗರಿಸಲು ಸಂಚು ರೂಪಿಸಿದ್ದನು.

ಹೊಟೇಲಿಗೆ ಆಕೆಯೊಂದಿಗೆ ಬಂದ ವೆಂಕಟೇಶ ಊಟವಾದನಂತರ ತಾನೂ ಕುಡಿದು, ಆಕೆಗೂ ಬಲವಂತವಾಗಿ ಕುಡಿಸಿ ಬೆಳಗಿನ ಜಾವ 3 ಗಂಟೆಗೆ ಎಚ್ಚರವಾದಾಗ ಆಕೆಯ ಬಾಯಿಗೆ ಬಟ್ಟೆ ತುರುಕಿ ಕತ್ತಿಗೆ ಚಾಕು ಹಾಕಿ ಹತ್ಯೆಗೈದಿದ್ದಾನೆ. ಕೆಲವೇ ಸಮಯದಲ್ಲಿ ಕಮಕ್ ಕಿಮಕ್ ಎನ್ನದೆ ಅವಳು ಪ್ರಾಣಬಿಟ್ಟಿದ್ದಾಳೆ. ಆಕೆಯ ಮೈಮೇಲಿದ್ದ 13 ಗ್ರಾಂ ಚಿನ್ನವನ್ನು ಲಪಟಾಯಿಸಿ ಪರಾರಿಯಾಗಿದ್ದಾನೆ. ಹಾಗೆ ಹೋಗುವಾಗ ಚಾಮರಾಜನಗರ ರಸ್ತೆಯಲ್ಲಿರುವ ರಾಣಪ್ಪಛತ್ರದ ಹಿಂಭಾಗದ ಚರಂಡಿಗೆ ಚೂರಿಯನ್ನು ಎಸೆದು ಶಿಡ್ಲಘಟ್ಟಕ್ಕೆ ಹಿಂತಿರುಗಿದ ಈತ ಏನು ಗೊತ್ತೇ ಇಲ್ಲವೆಂಬಂತೆ ಇದ್ದುಬಿಟ್ಟಿದ್ದನು. ಆದರೆ ನಂಜನಗೂಡು ಪೊಲೀಸರು ಮೊಬೈಲ್ ನಂಬರ್ ಹಿಡಿದುಕೊಂಡು ಶಿಡ್ಲಘಟ್ಟಕ್ಕೆ ಯಾವಾಗ ಹೋದರೋ ಸುಲಭವಾಗಿ ಹಂತಕ ವೆಂಕಟೇಶ್ ಸಿಕ್ಕಿಬಿದ್ದಿದ್ದನು. ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಡೆದ ಘಟನೆಯ ಬಗ್ಗೆ ಬಾಯಿಬಿಟ್ಟಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+