ಸುನಾಮಿಗೆ ಜಪಾನ್ ಕರಾವಳಿ ಅಲ್ಲೋಲ ಕಲ್ಲೋಲ

japan-tsunami
ಟೋಕಿಯೊ, ಮಾ. 11: ಜಪಾನಿಗೆ ಭಾರಿ ಸುನಾಮಿ ಅಪ್ಪಳಿಸಿದೆ. ಇದು ಈಶಾನ್ಯ ಕರಾವಳಿಯಲ್ಲಿ ಶುಕ್ರವಾರ (ಮಾರ್ಚ್ 11) ಮಧ್ಯಾಹ್ನ ಸ್ಥಳೀಯ ಕಾಲಮಾನ 2.45ರಲ್ಲಿ ಸಂಭವಿಸಿದೆ. ಮೊದಲು 8.9 ಪ್ರಮಾಣದ ತೀವ್ರ ಭೂಕಂಪ ಸಂಭಿಸಿದೆ. ಬಳಿಕ 13 ಅಡಿ ಎತ್ತರದ ಸುನಾಮಿ ಅಲೆಗಳು ರುದ್ರನರ್ತನ ಮಾಡಲಾರಂಭಿಸಿವೆ. ಅನೇಕ ಕಟ್ಟಡಗಳು ಧರಾಶಾಹಿಯಾಗಿದ್ದು, ರಸ್ತೆಗಳಲ್ಲಿ ವಾಹನಗಳು ಕೊಚ್ಚಿಹೋಗುವ ದೃಶ್ಯಗಳು ಕಂಡುಬರುತ್ತಿವೆ. ತಕ್ಷಣಕ್ಕೆ ಯಾವುದೇ ಸಾವು ನೋವಿನ ಬಗ್ಗೆ ವರದಿಗಳು ಬಂದಿಲ್ಲವಾದರೂ ಟೋಕಿಯೊದಲ್ಲಿ ಅನೇಕ ಮಂದಿ ಗಾಯಗೊಂಡ ವರದಿಗಳು ಬರಲಾರಂಭಿಸಿವೆ. ಈ ಮಧ್ಯೆ, ಭಾರತಕ್ಕೆ ಯಾವುದೇ ರೀತಿಯ ಸುನಾಮಿ ಭೀತಿ ಇಲ್ಲ ಎಂದು ಅಧಿಕೃತ ಮೂಲಗಳು ಸ್ಪಷ್ಟಪಡಿಸಿವೆ. ಆದರೂ ಕರ್ನಾಟಕದ ಕರಾವಳಿಯಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ.

ಟೋಕಿಯೊದ ಈಶಾನ್ಯ ಭಾಗದಲ್ಲಿ ಅಂದರೆ ಟೋಕಿಯೋದಿಂದ 240 ಮೈಲು ದೂರದಲ್ಲಿ ಆರು ಮೈಲು ಆಳದಲ್ಲಿ ಈ ಭೂಕಂಪ ಸಂಭವಿಸಿದೆ. ಗಮನಾರ್ಹವೆಂದರೆ ಬುಧವಾರವಷ್ಟೇ ಇಲ್ಲಿ 7.2 ಪ್ರಮಾಣದ ಭೂಕಂಪ ಸಂಭವಿಸಿತ್ತು. ಆದ್ದರಿಂದ ಈ ಹಿಂದೆಯೇ ಜಪಾನ್, ರಷ್ಯಾ, ಮರ್ಕಸ್ ದ್ವೀಪ ಮತ್ತು ಉತ್ತರ ಮರಿಯಾನಾ ಭಾಗಗಳಲ್ಲಿ ಸುನಾಮಿ ಎಚ್ಚರಿಕೆ ಜಾರಿಯಲ್ಲಿತ್ತು. ಅಮೆರಿಕದ ಹವಾಯಿ, ಮಿಕ್ಸಿಕೊ, ಚಿಲಿ, ಪೆರು, ಫಿಲಿಫ್ಫೀನ್ಸ್, ಇಂಡೋನೇಷ್ಯಾ ಮತ್ತು ಗೌಮ್, ತೈವಾನ್ ಭಾಗಗಳಲ್ಲೂ ಸುನಾಮಿ ಎಚ್ಚರಿಕೆ ಘೋಷಿಸಲಾಗಿದೆ.

ಜಪಾನಿನ ಕರಾವಳಿ ಉದ್ದಕ್ಕೂ ಅನೇಕ ಕಡೆಗಳಲ್ಲಿ ಸುನಾಮಿ ರೌದ್ರಾವತಾರ ತಾಳಿರುವುದು ಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. ತಟದಲ್ಲಿ ಹಡಗುಗಳು, ರಸ್ತೆಗಳಲ್ಲಿ ವಾಹನಗಳು, ಇಡೀ ಮನೆಗಳೇ ಕೊಚ್ಚಿ ಹೋಗಿವೆ. ದೊಡ್ಡ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೃಹತ್ ಬೆಂಕಿಯುಂಡೆಯಾಗಿ ಜ್ವಲಿಸುತ್ತಿದೆ. ರೈಲು ಸಂಚಾರ ಸ್ಥಗಿತಗೊಂಡಿದೆ. ಟೋಕಿಯೋದ ಕುಡಾನ್ ಕೈಕನ್-ನಲ್ಲಿ ಬೃಹತ್ ಸಭಾಭವನವೊಂದು ಧರೆಗುರುಳಿದೆ. ಇದರಡಿ ಅಸಂಖ್ಯಾತ ಮಂದಿ ಸಿಲುಕಿದ್ದಾರೆ. ಅನೇಕ ಹಳ್ಳಿಗಳು ಕೊಚ್ಚಿ ಹೋಗಿವೆ.

ಇನ್ನು, ಕೆಸೆನ್ನುಮಾ ನಗರದ ಬಳಿ ದೊಡ್ಡ ಹಡಗೊಂದು ಸಮುದ್ರದಿಂದ ಮನೆಗಳತ್ತ ನುಗ್ಗಿ ಭಾರಿ ಅನಾಹುತ ಸೃಷ್ಟಿಸಿದೆ ಎಂದು ಸರಕಾರಿ ಟಿವಿ ಎನ್ ಎಚ್ ಕೆ ಹೇಳಿದೆ. ಟಿವಿ ಕಚೇರಿಯೂ ಥರಗುಟ್ಟಿದೆ. ಉದ್ಯೋಗಿಗಳು ದಿಕ್ಕಾಪಾಲಾಗಿ ಓಡುತ್ತಿರುವುದನ್ನು ಟಿವಿ ಬಿತ್ತರಿಸಿದೆ. ಅಧಿಕಾರಿಗಳು ಪರಿಹಾರ ಕಾರ್ಯ ಕೈಗೊಳ್ಳಲು ಮತ್ತು ಅನಾಹುತದ ಪ್ರಮಾಣವನ್ನು ಅಂದಾಜು ಮಾಡಲು ಪರದಾಡುತ್ತಿದ್ದಾರೆ.

ಮಧ್ಯಾಹ್ನ ಭೀಕರ ಭೂಕಂಪ ಸಂಭವಿಸಿದ ಬಳಿಕ ಬಲಶಾಲಿ ಪಶ್ಚಾತ್ ಕಂಪನಗಳೂ ಕಂಡುಬಂದಿವೆ. ಅಮೆರಿಕದ ಭೂಗರ್ಭ ಸರ್ವೆ ವಿಭಾಗ ಮೊದಲ ಭೂಕಂಪದ ಪ್ರಮಾಣವನ್ನು 8.9 ಎಂದು ಅಳೆದಿದ್ದರೆ ಜಪಾನಿನ ಹವಾಮಾನ ಇಲಾಖೆಯು ಭೂಕಂಪದ ತೀವ್ರತೆ 7.9 ರಷ್ಟಿತ್ತು ಎಂದು ತಿಳಿಸಿದೆ. ಜತೆಗೆ ಜಪಾನಿನ ಪೆಸಿಫಿಕ್ ತಟದಲ್ಲಿ ಇದೇ ಸಂದರ್ಭದಲ್ಲಿ ಮತ್ತೆ ಸುನಾಮಿ ಅಪ್ಪಳಿಸುವ ಭೀತಿಯನ್ನೂ ವ್ಯಕ್ತಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+