ಜಪಾನ್ ಭೂಕಂಪ: ವ್ಯಾಪಕ ಸುನಾಮಿ ಭೀತಿ

ಈ ಮಧ್ಯೆ, ಜಪಾನಿನಲ್ಲಿ ಅಣುಶಕ್ತಿ ತುರ್ತು ಪರಿಸ್ಥಿತಿಯನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಒಂದು ಸ್ಥಾವರಕ್ಕೆ ಬೆಂಕಿ ಬಿದ್ದಿದೆ. ನಾಲ್ಕು ಸ್ಥಾವರಗಳನ್ನು ಮುನ್ನೆಚ್ಚರಿಕೆಯಾಗಿ ಸ್ಥಗಿತಗೊಳಿಸಲಾಗಿದೆ. ಒನಗಾವಾ ಅಣುಶಕ್ತಿ ಉತ್ಪಾದನಾ ಕೇಂದ್ರದ 11 ಸ್ಥಾವರಗಳನ್ನು ಸ್ವಯಂನಿಯಂತ್ರಣದಲ್ಲಿ ಮುಚ್ಚಲಾಗಿದೆ.
ಇದರ ಜತೆಗೆ ರಷ್ಯಾ, ತೈವಾನ್, ಫಿಲಪ್ಪೀನ್ಸ್, ಇಂಡೋನೇಷ್ಯಾ, ಪಪುವಾ ನ್ಯೂ ಗಿನಿ, ಫಿಜಿ, ಮೆಕ್ಸಿಕೊ, ಗ್ವಾಟೆಮಾಲ, ಎಲ್ ಸಾಲ್ವಡಾರ್, ಕೋಸ್ಟರಿಕಾ, ನಿಕರಾಗುವಾ, ಪನಾಮಾ, ಹೋಂಡುರಾಸ್, ಚಿಲಿ, ಈಕ್ವಡಾರ್, ಕೊಲಂಬಿಯಾ, ಪೆರು ಸಹ ಸುನಾಮಿಗೆ ತುತ್ತಾಗುವ ಅಪಾಯಿವಿದೆ ಎಂದು ಎಚ್ಚರಿಸಲಾಗಿದೆ. ಟೋಕಿಯೋದಲ್ಲಿನ ಎರಡೂ ಬೃಹತ್ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ.
ವಿಡಿಯೋಗಳು: ಸುನಾಮಿ ಅಲೆಗಳ ರೌದ್ರ ನರ್ತನ ಚಿತ್ರಗಳು | ಸುನಾಮಿ ಅಲೆಗಳ ದಾಳಿಗೆ ಕುಬ್ಜವಾದ ಜಪಾನ್
ಶುಕ್ರವಾರ ಜಪಾನಿನಲ್ಲಿ ಈ ಹಿಂದೆ 140 ವರ್ಷಗಳಲ್ಲಿ ಎಂದೂ ಕಂಡು ಕೇಳರಿಯದ ಭೀಕರ ಭೂಕಂಪ, ಸುನಾಮಿ ರುದ್ರನರ್ತನ ಮಾಡತೊಡಗಿದೆ. 10 ಮೀಟರ್ ಎತ್ತರದ ದೈತ್ಯ ಅಲೆಗಳು ಇದುವರೆಗೆ ತಿಳಿದುಬಂದ ಮಾಹಿತಿಯಂತೆ 50 ಮಂದಿಯನ್ನು ಆಹುತಿ ತೆಗೆದುಕೊಂಡಿದೆ. ಸಾವು ನೋವಿನ ಸಂಖ್ಯೆ ಇನ್ನೂ ಅಧಿಕವಾಗುವ ಲಕ್ಷಣಗಳಿವೆ.
2004ರಲ್ಲಿ ಸುಮಾರು 2 ಲಕ್ಷ ಜನರನ್ನು ಆಹುತಿ ತೆಗೆದುಕೊಂಡಿದ್ದ ಇಂಡೋನೇಷ್ಯಾ ಸುನಾಮಿ ಸ್ಥಳೀಯ ಕಾಲಮಾನದ ಪ್ರಕಾರ ಇಂದು (ಮಾರ್ಚ್11) ನಡು ರಾತ್ರಿ ಮತ್ತೆ ಅಪ್ಪಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹವಾಯಿ ದ್ವೀಪಗಳಲ್ಲಿ ಮಾರ್ಚ್ 12ರ ಬೆಳಗಿನ ಜಾವ 3 ಗಂಟೆಗೆ ಮೊದಲ ಸುನಾಮಿ ಅಲೆ ಅಪ್ಪಳಿಸುವ ಬೆದರಿಕೆ ಇದೆ. ಉತ್ತರ ಫಿಲಿಪ್ಪೀನ್ಸ್ ನ ಮೂರು ಪ್ರಾಂತ್ಯಗಳಲ್ಲಿ ಜನರನ್ನು ಎತ್ತರದ ಪ್ರದೇಶಗಳಿಗೆ ಕೊಂಡೊಯ್ಯಲಾಗುತ್ತಿದೆ. ಎಚ್ಚರಿಕೆಯ ಸಂದೇಶಗಳನ್ನು ಯಾರೂ ಕಡೆಗಣಿಸುವ ಸ್ಥಿತಿಯಲ್ಲಿ ಇಲ್ಲ. ಪರಿಸ್ಥತಿ ಅಷ್ಟೊಂದು ನಿಗೂಢವಾಗಿ, ಗಂಭೀರವಾಗಿದೆ. ಅನೇಕ ಪಟ್ಟ ಪುಟ್ಟ ದ್ವೀಪಗಳು ಬೆಳಗಾಗುವುದರೊಳಗಾಗಿ ಕೊಚ್ಚಿ ಹೋಗುವ ಸಾಧ್ಯತೆ ಇದೆ.











Click it and Unblock the Notifications