ದೆಹಲಿ ಕನ್ನಡಿಗರ ಸುಂದರ ಸಾಹಿತ್ಯ ಸಂಜೆ

ಸಾಹಿತ್ಯ ಸಂಜೆಯ ಮೊದಲಿಗೆ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ, ಡಾ.ವೆಂಕಟಾಚಲ ಹೆಗಡೆಯವರು ತಾವು ಇತ್ತೀಚೆಗೆ ಓದಿದ ಎರಡು ಪುಸ್ತಕಗಳ ಕುರಿತು ಮಾತನಾಡಿದರು. ವಿವೇಕ ಶಾನಭಾಗ್ ಅವರ "ಒಂದು ಬದಿಯ ಕಡಲು" ಕೃತಿ ಕುರಿತು ವಿಶ್ಲೇಷಣೆ ಮಾಡಿದರು. ಕಡಲ ಬದಿಯ ಕುಮಟಾ, ಹೊನ್ನಾವರ ಹೀಗೆ ಪ್ರಾದೇಶಿಕ ನೆಲೆಗಟ್ಟಿನಲ್ಲಿ ಎರಡು ತಲೆಮಾರಿನ ಜನಜೀವನ, ಬಡತನ, ಭಾಷೆ, ಸಂಸ್ಕೃತಿ ಇತ್ಯಾದಿ ಕುರಿತು ವಿವೇಕ್ ಶಾನಭಾಗ್ ಮನ ಮುಟ್ಟುವಂತೆ ಚಿತ್ರಿಸಿದ್ದಾರೆ. ಇದು ಶಿವರಾಂ ಕಾರಂತರ "ಮರಳಿ ಮಣ್ಣಿಗೆ" ಕಾದಂಬರಿ ನೆನಪಿಸುತ್ತದೆ. ಇಲ್ಲಿ ಎಲ್ಲವೂ ಮುಖ್ಯಪಾತ್ರಗಳೇ. ಕಥನ ತಂತ್ರವೂ ಆತ್ಮಕಥನ ಶೈಲಿಯೇನೋ ಎಂದು ಭಾಸವಾಗುತ್ತದೆ. ಇನ್ನೊಂದು ಪುಸ್ತಕ ಟರ್ಕಿಶ್ ಲೇಖಕ ಓರಾನ್ ಪಮುಕ್ ಬರೆದ ನನ್ನ ಹೆಸರು ಕೆಂಪು (my name is red) ಕೃತಿಯಲ್ಲಿ 14-15ನೇ ಶತಮಾನದಲ್ಲಿ ಯುರೋಪ್ ಮತ್ತು ಏಷ್ಯಾ ನಡುವಿನ ಆಯಕಟ್ಟಿನ ಸ್ಥಾನದಲ್ಲಿದ್ದ ಟರ್ಕಿ ಹೇಗೆ ಜಾಗತಿಕ ಚರಿತ್ರೆಯಲ್ಲಿ ಬೆಳಕಿಗೆ ಬಂದಿತು ಎಂಬ ಕುರಿತಾಗಿದೆ. ಅಲ್ಲಿನ ಚಾರಿತ್ರಿಕ ಕತೆಗಳೆಲ್ಲ ಮೊಗಲರ ಕಾಲದ ಕುಸುರಿ ಚಿತ್ರಕಲೆ ಮತ್ತು ಗದ್ಯ ಕಾವ್ಯ ಕುರಿತಾಗಿದೆ.
'ಪಂಪಭಾರತ' ಅಥವಾ 'ವಿಕ್ರಮಾರ್ಜುನ ವಿಜಯ' ಕಾವ್ಯದ ಒಂದು ಪದ್ಯದ ಸ್ವಾರಸ್ಯವನ್ನು ಡಾ.ಪುರುಷೋತ್ತಮ ಬಿಳಿಮಲೆಯವರು ವಿವರಿಸಿದರು. 'ಪಂಪನು ಮಹಾಭಾರತದ ಪಾತ್ರಗಳ ಮೂಲಕ ಮಾನವೀಯ ಸಂಘರ್ಷಗಳನ್ನು ಪರಿಶೀಲಿಸುವ ಕೆಲಸವನ್ನು ಮಾಡುತ್ತಾನೆ, ಹಾಗೆ ಮಾಡುವುದರ ಮೂಲಕ ಆತ ಕುಮಾರವ್ಯಾಸನಿಗಿಂತ ಭಿನ್ನವಾಗುತ್ತಾನೆ' ಎಂದು ವಿವರಿಸಿದ ಬಿಳಿಮಲೆಯವರು, ಪಂಪನು ತನ್ನ ಕಾವ್ಯದಲ್ಲಿ 'ಅತ್ಯುನ್ನತಿಯೊಳ ಅಮರ ಸಿಂದೂದ್ಭವಂ' ಎಂದು ಭೀಷ್ಮನನ್ನು ಕೊಂಡಾಡುತ್ತಾನೆ ಮತ್ತು ಕಾವ್ಯದುದ್ದಕ್ಕೂ ಭೀಷ್ಮನಿಗೆ ಅಂಥ ಸ್ಥಾನವನ್ನು ಒದಗಿಸಿ ಕೊಡುತ್ತಾನೆ' ಎಂದರು. ಇದನ್ನು ಇನ್ನಷ್ಟು ವಿವರಿಸಿದ ಬಿಳಿಮಲೆಯವರು, ಹಳಗನ್ನಡ ಕಾವ್ಯಭಾಗದ ಸೊಗಸನ್ನು ರಸವತ್ತಾಗಿ ವರ್ಣಿಸಿದರು.
ಆನಂತರ ಶ್ರೀನಿವಾಸ್ ಅವರು ತಾವು ತಮಿಳಿನಿಂದ ಕನ್ನಡಕ್ಕೆ ಅನುವಾದಿಸಿದ "ತಿರುಕ್ಕುರಳ್" ನ ಕೆಲವು ವಚನಗಳನ್ನು ವಾಚಿಸಿದರು. ತಿರುಕ್ಕುರಳ್ ತಮಿಳರ ಗೌರವ ಗ್ರಂಥ. ಇದರ ಲೇಖಕ ವರಕವಿ-ತಿರುವಳ್ಳುವರ್. ಶಿಲಪ್ಪದಿಕಾರಂ ಮತ್ತು ಮಣೀಮೇಖಲೈ ಗ್ರಂಥಗಳು ಎರಡನೇ ಶತಮಾನದ ಕಾವ್ಯಗಳೆಂದು ಐತಿಹಾಸಿಕರು ಒಪ್ಪಿರುವುದರಿಂದ ತಿರುಕ್ಕುರಳ್ ಎರಡನೇ ಶತಮಾನಕ್ಕಿಂತಲೂ ಹಿಂದೆ ರಚಿಸಿರಬಹುದೆಂಬ ಊಹೆ ಇದೆ ಎಂದು ವಿವರಿಸಿದರು. ತಿರುಕ್ಕುರಳ್ - ನೀತಿಬೋಧನೆಯ ದ್ವಿಪದಿಗಳು. ಕನ್ನಡದಲ್ಲಿ ಸರ್ವಜ್ಞನ ದ್ವಿಪದಿಗಳಿಗೆ ಮತ್ತು ಮಂಕುತಿಮ್ಮನ ಕಗ್ಗದ ನೀತಿಬೋಧನೆಗಳ ಮತ್ತು ತಿರುಕ್ಕುರಳ್ ಶೈಲಿಯಲ್ಲಿ ಒಂದೇ ಮಾದರಿಯಾಗಿವೆ. ತಿರುಕ್ಕುರಳ್ ಗಳಲ್ಲಿ ಒಟ್ಟು 1330 ಕುರುಳು(ದ್ವಿಪದಿ)ಗಳಿವೆ. ಇವುಗಳನ್ನು ಓದಿದಾಗ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿನ ಶಬ್ದ ಮತ್ತು ಅಕ್ಷರ ಸಾಮ್ಯವನ್ನು ಕಾಣಬಹುದು. ಹಿಂದೆ ಮೂಲ ದ್ರಾವಿಡ ಭಾಷೆಗಳು ಒಂದೇ ಆಗಿದ್ದಿರಬಹುದು ಕಾಲಾಂತರದಲ್ಲಿ ಅವು ಬೇರ್ಪಟ್ಟು ಸ್ವತಂತ್ರವಾದ ಭಾಷೆಯಾಗಿ ಬೆಳೆದಿರುವುದನ್ನು ಕಾಣಬಹುದು.
ಕವನವಾಚನದಲ್ಲಿ ಎ.ವಿ.ಚಿತ್ತರಂಜನದಾಸ್ ಅವರು ಉತ್ತರಭಾರತದಲ್ಲಿ ಸಾಮಾನ್ಯವಾಗಿ ಎಲ್ಲಾ ದೇವರ ಭಜನೆ ಹಾಡುಗಳು ಜನಪ್ರಿಯ ಸಿನೆಮಾ ಹಾಡಿನ ಧಾಟಿಯಲ್ಲೇ ಹಾಡುವುದು ರೂಡಿ. ಅದರಲ್ಲೇ ಅವರಿಗಿಷ್ಟವಾದ ಕೃಷ್ಣನ ಭೇಟಿಗೆ ಸುಧಾಮ ಬಂದಾಗಿನ ಭಜನೆಯೊಂದನ್ನು ಭಾವಪರವಶವಾಗಿ ಹಾಡಿದರು. ಡಾ.ಅಹಲ್ಯಾ ಚಿಂತಾಮಣಿ ಹಾಗೂ ಸವಿತಾ ಇನಾಂದಾರ್ ಅವರು ತಮ್ಮ ಸ್ವರಚಿತ ಕವನಗಳನ್ನು ಓದಿದರು.
ಕೊನೆಯಲ್ಲಿ ಹಿರಿಯ ಲೇಖಕ ಕೃಷ್ಣಮೂರ್ತಿ ಕಲುಮಂಗಿಯವರು ತಮ್ಮ ಅನುವಾದಿತ ತೆಲುಗು "ಕತೆ - ಮಾಡೆಲ್ " ಅನ್ನು ಓದಿದರು. ಮೂಲ ಲೇಖಕ - ವಕ್ಕುಂತಂ ಸೂರ್ಯನಾರಾಯಣರಾವ್ ಅವರ ಈ ಕತೆಯ ಅನುವಾದಕ್ಕೆ ಕಲುಮಂಗಿಯವರಿಗೆ ಶರ್ವಾಣಿ ಮೆಮೋರಿಯಲ್ " ಬೆನಕ" ಅನುವಾದಿತ ಸಾಹಿತ್ಯ ಸ್ಪರ್ಧೆ -2010 (ಪ್ರಿಯಾಂಕ ಪತ್ರಿಕೆ)ಯಲ್ಲಿ ಪ್ರಥಮ ಬಹುಮಾನ ತಂದು ಕೊಟ್ಟಿದೆ. ಕಥಾಲೋಕದಲ್ಲಿ ಕಾಲದ ಪರಿವೆಯೇ ಮರೆತುಹೋದಂತಿತ್ತು. ಈ ಮಧ್ಯೆ ಊರಿನಿಂದ ಮಗನ ಮನೆಗೆ ಬಂದ ಮತ್ತೊಬ್ಬ ಹಿರಿಯ ಲೇಖಕ ಮತ್ತು ಅನುವಾದಕ "ಶಂಸ ಐತಾಳ" ಅವರು ಕೂಡ ಸಾಹಿತ್ಯ ಸಂಜೆಯಲ್ಲಿ ನಮ್ಮೊಂದಿಗಿದ್ದರು. ಅವರಿಗೆ ಸಂಘದ ಉಪಾಧ್ಯಕ್ಷ ಬಿ.ಕೆ ಬಸವರಾಜು ಅವರು ಹೂಗುಚ್ಛ ನೀಡಿ ಗೌರವಿಸಿದರು. ವಂದನಾರ್ಪಣೆಯೊಂದಿಗೆ ಸುಂದರ ಸಂಜೆ ಇರುಳಿಗೆ ಜಾರುತ್ತಿತ್ತು.












Click it and Unblock the Notifications