Get Updates
Get notified of breaking news, exclusive insights, and must-see stories!

ಮಡಿಕೇರಿ ಗದ್ದಿಗೆಗೆ ಬೆಂಕಿಯಿಟ್ಟ ದುಷ್ಕರ್ಮಿಗಳ ಬಂಧನ

Haleri king tomb, Madikeri
ಮಡಿಕೇರಿ, ಫೆ.23: ಮಡಿಕೇರಿ ನಗರದ ಗುಡ್ಡದ ಮೇಲೆ ನೆಲೆ ನಿಂತಿರುವ ಹಾಲೇರಿ ವಂಶದ ರಾಜರ ಗದ್ದಿಗೆಗೆ ದುಷ್ಕರ್ಮಿಗಳು ಮಂಗಳವಾರ ಬೆಂಕಿ ಹಚ್ಚಿದ ಪರಿಣಾಮ ಪ್ರವೇಶ ದ್ವಾರಕ್ಕೆ ಹಾನಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಜಾದ್‌ನಗರದ ಹುಸೇನ್, ಸಿಕಂದರ್ ಮತ್ತು ಜಮೀರ್ ಎಂಬುವರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ಪ್ರವೇಶ ದ್ವಾರವು ತೇಗ ಮರದಿಂದ ಮಾಡಲಾಗಿದ್ದು, ಈ ದ್ವಾರದಲ್ಲಿ ಹೂವಿನಾಕಾರದ ಪಂಚಲೋಹದ ಮೊಳೆಗಳಿವೆ. ಇದನ್ನು ತಮ್ಮ ವಶ ಮಾಡಿಕೊಳ್ಳಲು ದುಷ್ಕರ್ಮಿಗಳು ಬಾಗಿಲಿಗೆ ಬೆಂಕಿ ಹಚ್ಚಿರಬಹುದೆಂದು ಶಂಕಿಸಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಈ ದ್ವಾರವನ್ನು ಒಡೆಯಲು ಕೆಲವರು ಪ್ರಯತ್ನಪಟ್ಟಿದ್ದರು. ಆದರೆ ದ್ವಾರಕ್ಕೆ ಯಾವುದೇ ಹಾನಿಯಾಗಿರಲಿಲ್ಲ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದೀಗ ಮತ್ತೆ ಬೆಂಕಿ ಹಚ್ಚಿರುವುದು ಗದ್ದಿಗೆಯ ಬಗ್ಗೆ ಸಂಬಂಧಿಸಿದ ಇಲಾಖೆ ನಿರ್ಲಕ್ಷ್ಯ ವಹಿಸಿರುವುದಕ್ಕೆ ಸಾಕ್ಷಿಯಾಗಿದೆ.

ಗದ್ದಿಗೆಯ ಇತಿಹಾಸ: ಕೊಡಗಿನಲ್ಲಿರುವ ಪ್ರವಾಸಿ ತಾಣಗಳ ಪೈಕಿ ಮಡಿಕೇರಿಯಲ್ಲಿರುವ ಗದ್ದಿಗೆಯೂ ಒಂದಾಗಿದೆ. ಇದು ಕೊಡಗನ್ನು ಸುಮಾರು ಎರಡು ಶತಮಾನಗಳ ಕಾಲ ಆಳಿದ ಹಾಲೇರಿ ವಂಶದ ರಾಜರ ಸಮಾಧಿಯಾಗಿದೆ. ಮಡಿಕೇರಿ ಪಟ್ಟಣದ ಎತ್ತರವಾದ ಗುಡ್ಡಪ್ರದೇಶದಲ್ಲಿ ನೆಲೆ ನಿಂತಿರುವ ಗದ್ದಿಗೆ ಒಂದು ಐತಿಹಾಸಿಕ ಸ್ಮಾರಕವಾಗಿದೆ. ಕೊಡಗನ್ನು ಆಳಿದ ಹಾಲೇರಿ ವಂಶದ ಅರಸರ ಪೈಕಿ ರಾಜ ವೀರರಾಜೇಂದ್ರ ಅವರ ಪತ್ನಿ ಮಹದೇವಮ್ಮ ಅವರ ಗದ್ದಿಗೆ ಮಧ್ಯದಲ್ಲಿದ್ದು, ಲಿಂಗರಾಜೇಂದ್ರ ಮತ್ತು ದೇವಮ್ಮಾಜಿ ದಂಪತಿಗಳ ಗದ್ದಿಗೆ ಬಲಭಾಗದಲ್ಲಿದೆ. ಇನ್ನು ಎಡಭಾಗದಲ್ಲಿ 1834 ರಲ್ಲಿ ನಿರ್ಮಿಸಿರುವ ರಾಜಪುರೋಹಿತಮುನಿಗಳ ಗದ್ದಿಗೆಯಿದೆ. ಇದಲ್ಲದೆ ಟಿಪ್ಪುಸುಲ್ತಾನ್‌ನೊಂದಿಗೆ ನಡೆದ ಯುದ್ದದಲ್ಲಿ ವೀರಮರಣವನ್ನಪ್ಪಿದ ಸೇನಾಪತಿ ಬಿದ್ದಂಡ ಬೋಪು ಹಾಗೂ ಅವರ ಪುತ್ರ ಬಿದ್ದಂಡ ಸೋಮಯ್ಯ ಅವರ ಸಮಾಧಿಗಳನ್ನು ಕೂಡ ಕಾಣಬಹುದು.

ಆಕರ್ಷಕ ವಾಸ್ತುಶಿಲ್ಪ: ಇಂಡೋಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಗದ್ದಿಗೆಗಳು ಅಪರೂಪದ ವಾಸ್ತುಶಿಲ್ಪವನ್ನು ಹೊಂದಿವೆ. ಇಲ್ಲಿ ಕೆತ್ತಲಾಗಿರುವ ಕಲ್ಲಿನ ಕೆತ್ತನೆಗಳು ಕೂಡ ಆಕರ್ಷಕವಾಗಿದೆ. ಕಟ್ಟಡವು ಪ್ರಧಾನ ಗುಮ್ಮಟ ಹಾಗೂ ನಾಲ್ಕು ಮೂಲೆಯಲ್ಲಿ ಚಿಕ್ಕದಾದ ಗುಮ್ಮಟವನ್ನು ಹೊಂದಿ ಗಮನಸೆಳೆಯುತ್ತದೆ. ಕಿಟಕಿಗೆ ಪಂಚಲೋಹದ ಸರಳುಗಳನ್ನು ಅಳವಡಿಸಲಾಗಿದೆ. ಒಟ್ಟಾರೆ ಗದ್ದಿಗೆ ಭವ್ಯ ಕಟ್ಟಡವಾಗಿದ್ದು ಅಭಿವೃದ್ಧಿಪಡಿಸಿದ್ದೇ ಆಗಿದ್ದರೆ ಇದೊಂದು ಪ್ರವಾಸಿ ತಾಣವಾಗಿ ಗಮನಸೆಳೆಯುತ್ತಿತ್ತು ಆದರೆ ಸಂಬಂಧಿಸಿದ ಇಲಾಖೆಯ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇದು ಅವನತಿಯತ್ತ ಸಾಗತೊಡಗಿತ್ತು.

ಹಾಗೆನೋಡಿದರೆ ಗದ್ದಿಗೆಗೆ ಸೇರಿರುವ ಜಾಗಗಳು ಕೂಡ ಅತಿಕ್ರಮಣವಾಗಿವೆ. ಕರ್ಣಂಗೇರಿಯ ಸರ್ವೆ ನಂ. 30/1ರಲ್ಲಿದ್ದ 19.80ಎಕರೆ ಪ್ರದೇಶದ ಪೈಕಿ 1.25ಎಕರೆ ಜಾಗವನ್ನು ಸಹಕಾರ ತರಬೇತಿ ಸಂಸ್ಥೆಗೆ ಮಾರಲಾಗಿದೆ. ಉಳಿದ 18.55 ಎಕರೆ ಪ್ರದೇಶದಲ್ಲಿ ಸುಮಾರು ನಾಲ್ಕೈದು ಎಕರೆ ಪ್ರದೇಶಗಳು ಅತಿಕ್ರಮಣವಾಗಿದ್ದು ಅಲ್ಲಿ ಮನೆಗಳು ತಲೆ ಎತ್ತಿವೆ.

ಪುರಾತತ್ವ ಇಲಾಖೆಗೆ ಹಸ್ತಾಂತರ:
ಭವಿಷ್ಯದಲ್ಲಿ ಗದ್ದಿಗೆ ಪ್ರವಾಸಿತಾಣವಾಗಿ ಗಮನಸೆಳೆಯಬೇಕು ಆ ನಿಟ್ಟಿನಲ್ಲಿ ಅಭಿವೃದ್ಧಿಗೊಳಿಸಿ ಅದಕ್ಕೆ ಯಾವುದೇ ರೀತಿಯ ಧಕ್ಕೆ ಬಾರದಂತೆ ಸಂರಕ್ಷಿಸಬೇಕೆಂಬ ಒತ್ತಾಯ ಹಾಗೂ ಹೋರಾಟ ಕಳೆದ ಕೆಲವು ದಶಕಗಳಿಂದ ನಡೆಯುತ್ತಲೇ ಬಂದಿದೆ. ಬಹುಶಃ ಹೋರಾಟದ ಫಲವಾಗಿಯೋ ಏನೋ ಕೊಡಗು ದೇವಸ್ಥಾನಗಳ ನಿಧಿ ವ್ಯವಸ್ಥಾಪನಾ ಸಮಿತಿಯ ಅಧೀನದಲ್ಲಿದ್ದ ಗದ್ದಿಗೆಯನ್ನು 25-9-1981ರಲ್ಲಿ ಸರ್ಕಾರಿ ಸುತ್ತೋಲೆ ಹೊರಡಿಸಿ ಪುರಾತತ್ವ ಇಲಾಖೆಯ ಅಧೀನಕ್ಕೊಳಪಡಿಸಲಾಯಿತು. ಪುರಾತತ್ವ ಇಲಾಖೆಗೆ ವಹಿಸಿದ ತಕ್ಷಣ ಗದ್ದಿಗೆಯನ್ನು ಅಭಿವೃದ್ಧಿಪಡಿಸಬೇಕಾದ ಇಲಾಖೆ ಅನುದಾನದ ಕೊರತೆಯ ಕಾರಣ "ಇದು ರಕ್ಷಿತ ಸ್ಮಾರಕ: ಯಾರೇ ಆಗಲಿ, ಇದನ್ನು ನಾಶಪಡಿಸಲು, ಸ್ಥಳಾಂತರಿಸಲು, ಮಾರ್ಪಡಿಸಲು, ದುರುಪಯೋಗಪಡಿಸುವುದಾಗಲಿ ಮಾಡಿದರೆ 3 ತಿಂಗಳ ಸಜೆ ಅಥವಾ 5 ಸಾವಿರ ದಂಡ ಇಲ್ಲವೆ ಈ ಎರಡು ಶಿಕ್ಷೆಯನ್ನು ವಿಧಿಸಲಾಗುವುದು." ಎಂಬ ಫಲಕ ನೇತು ಹಾಕಿ ಕೈತೊಳೆದು ಕೊಂಡಿತು.

ನಿರ್ವಹಣೆ ಕೊರತೆ: ಸಮರ್ಪಕ ನಿರ್ವಹಣೆಯ ಕೊರತೆಯಿಂದಾಗಿ ಗದ್ದಿಗೆಯಲ್ಲಿ ಸೋರಿಕೆ ಪ್ರಾರಂಭವಾಯಿತು. ಈ ಸಂಬಂಧ 1989 ರಲ್ಲಿ ದೇವಸ್ಥಾನಗಳ ನಿಧಿ ವ್ಯವಸ್ಥಾಪನಾ ಸಮಿತಿಯೇ 15 ಸಾವಿರ ರೂಪಾಯಿಯನ್ನು ಖರ್ಚು ಮಾಡಿ ಸೋರಿಕೆಯನ್ನು ತಡೆಗಟ್ಟಿತು. ಆ ನಂತರ ಜಿಲ್ಲಾಧಿಕಾರಿಯಾಗಿದ್ದ ಡಿ.ಎಸ್.ಅಶ್ವಥ್ ಅವರ ನಿರ್ದೇಶನದಲ್ಲಿ ಹತ್ತು ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ ಹಾಸುಗಲ್ಲನ್ನು ಅಳವಡಿಸಲಾಯಿತು. 1995 ರಲ್ಲಿ ದೇವಸ್ಥಾನಗಳ ನಿಧಿ ವ್ಯವಸ್ಥಾಪನಾ ಸಮಿತಿ ಮೈಸೂರಿನ ಪ್ರಾಚ್ಯವಸ್ತು ಸಂಗ್ರಹಾಲಯದೊಂದಿಗೆ ವ್ಯವಹರಿಸಿ ಅಭಿವೃದ್ಧಿ ಪಡಿಸುವಂತೆ ಮನವಿಮಾಡಿತು.

ಇದಾದ ಕೆಲವು ವರ್ಷಗಳ ನಂತರ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ಗದ್ದಿಗೆಗೆ ಸೇರಿದ ಅತಿಕ್ರಮಿತ ಜಾಗವನ್ನು ತೆರವುಗೊಳಿಸಿ ತಂತಿಬೇಲಿಯನ್ನು ಅಳವಡಿಸಲು ಮುಂದಾಯಿತಾದರೂ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಅದು ಕೂಡ ಸಾಧ್ಯವಾಗಿಲ್ಲ. ಈ ಗದ್ದಿಗೆಯೊಂದರಲ್ಲಿ ಶಿವಲಿಂಗ ಪ್ರತಿಷ್ಠಾಪನೆಯಾಗಿರುವ ಕಾರಣ ಅಲ್ಲಿ ನಿತ್ಯಪೂಜೆ ನಡೆಯುತ್ತಿದೆ. ಇದರ ಜವಾಬ್ದಾರಿಯನ್ನು ಕೊಡಗು ದೇವಸ್ಥಾನ ನಿಧಿ ವ್ಯವಸ್ಥಾಪನಾ ಸಮಿತಿಯೇ ನಿರ್ವಹಿಸುತ್ತಿದೆಯಾದರೂ ಕೆಲವು ವರ್ಷಗಳಿಂದ ದೀಪ ಉರಿಸಲು ಸಮರ್ಪಕವಾಗಿ ಎಣ್ಣೆಯನ್ನೇ ನೀಡುತ್ತಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ.

ಅನೈತಿಕ ಚಟುವಟಿಕೆ: ಕೆಲವು ವರ್ಷಗಳ ಹಿಂದೆಯೇ ಗದ್ದಿಗೆಯ ನಿರ್ವಹಣೆಗೆ ಇಬ್ಬರು ನಾಲ್ಕನೇ ದರ್ಜೆಯ ನೌಕರರನ್ನು ಹಾಗೂ ಕಾವಲುಗಾರರನ್ನು ನೇಮಿಸುವಂತೆ ಒತ್ತಾಯಿಸಲಾಗಿತ್ತು. ಆದರೆ ಆ ಬಗ್ಗೆ ಯಾರೂ ಆಸಕ್ತಿ ವಹಿಸದ ಕಾರಣ ಗದ್ದಿಗೆ ಪುಂಡ ಪೋಕರಿಗಳ ಅನೈತಿಕ ಚಟುವಟಿಕೆಯ ತಾಣವಾಗಿ ಬದಲಾಗತೊಡಗಿತು. ಬೀಡಿ, ಸಿಗರೇಟು, ಗುಟ್ಕಾ, ಕಾಂಡೋಮ್‌ಗಳು, ದನದ ಸೆಗಣಿ ಮುಂತಾದವುಗಳು ಆವರಣದಲ್ಲಿ ಕಂಡು ಬರತೊಡಗಿದವು. ಕಳ್ಳರು ಇಲ್ಲಿದ್ದ ಕಬ್ಬಿಣ ಹಾಗೂ ಪಂಚಲೋಹದ ಸರಳುಗಳನ್ನೇ ಕದ್ದೊಯ್ದರು. ಇಷ್ಟೆಲ್ಲಾ ನಡೆದರೂ ಏನೂ ಆಗಿಯೇ ಇಲ್ಲವೆಂಬಂತೆ ಸಂಬಂಧಿಸಿದ ಇಲಾಖೆ, ಜಿಲ್ಲಾಡಳಿತ ತೆಪ್ಪಗಾಯಿತು. ಅದರ ಪರಿಣಾಮವೇ ಮಂಗಳವಾರ ಮೂವರು ದುಷ್ಕರ್ಮಿಗಳು ಗದ್ದಿಗೆಗೆ ಬೆಂಕಿಹಚ್ಚಿದ್ದಾರೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಗದ್ದಿಗೆಯ ಸಂರಕ್ಷಣೆಗೆ ಮುಂದಾಗುವರೇ ಎಂಬುವುದನ್ನು ಕಾದುನೋಡಬೇಕಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+