ಚಾ.ನಗರಕ್ಕೆ ಭೇಟಿ ನೀಡದ ಯಡ್ಡಿ ವಿರುದ್ಧ ನ್ಯಾಯಾಲಯಕ್ಕೆ

ಚಾಮರಾಜನಗರ ರಾಜ್ಯದಿಂದ ಹೊರಗಿಲ್ಲ. ರಾಜ್ಯದ ಗಡಿ ಜಿಲ್ಲೆ. ಇಲ್ಲಿಗೆ ಭೇಟಿ ನೀಡಲು ಹಿಂಜರಿಯುತ್ತಿರುವ ಮುಖ್ಯಮಂತ್ರಿ ತಕ್ಷಣ ದಿನಾಂಕ ನಿಗದಿ ಮಾಡಿ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡದಿದ್ದರೆ ಅವರ ಧೋರಣೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ತಾವು ಸಿದ್ದತೆ ಕೈಗೊಂಡಿರುವುದಾಗಿ ವಾಟಾಳ್ ಹೇಳಿದರು.
ಮುಖ್ಯಮಂತ್ರಿಯಾಗಿ 2.5 ವರ್ಷವಾದರೂ ಇದುವರೆಗೆ ಚಾಮರಾಜನಗರಕ್ಕೆ ಏಕೆ ಭೇಟಿ ನೀಡಲಿಲ್ಲ ಎಂಬ ಬಗ್ಗೆ ವಿಧಾನಸಭೆಯಲ್ಲಿ ಉತ್ತರ ನೀಡಲೇಬೇಕು ಎಂದೂ ಆಗ್ರಹಿಸಿದರು. ಬೆಳಗಾವಿ, ಗುಲ್ಬರ್ಗದಲ್ಲಿ ಸಚಿವ ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿಗಳು ಮುಂದೆ ಚಾಮರಾಜನಗರದಲ್ಲಿಯೂ ಸಚಿವ ಸಂಪುಟ ಸಭೆ ನಡೆಸಬೇಕು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಚಾಮರಾಜನಗರದಲ್ಲಿ 5 ಸಾವಿರ ಮನೆಗಳನ್ನು ನಿರ್ಮಿಸಿ ಉಪನಗರ ರಚಿಸಬೇಕು. ಕಬಿನಿ- ಕಾವೇರಿ 2ನೇ ಹಂತದ ಯೋಜನೆ ರೂಪಿಸಿ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ನಿರಂತರ ಕುಡಿಯುವ ನೀರು ನೀಡಬೇಕು. ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಸಂತೇಮರಹಳ್ಳಿ, ಗುಂಡ್ಲುಪೇಟೆ, ಹನೂರು ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೆ ಕಾವೇರಿ, ಕಬಿನಿ ನದಿಯಿಂದ ಕುಡಿಯುವ ನೀರು ಪೂರೈಸಲು ಯೋಜನೆ ರೂಪಿಸಿ ಶೀಘ್ರ ಜಾರಿಗೊಳಿಸಬೇಕು.
ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರವನ್ನು ರದ್ದುಪಡಿಸದೇ ನಗರವನ್ನು ಮೇಲ್ದರ್ಜೇಗೇರಿಸಬೇಕು. 4-5 ಕೈಗಾರಿಕೆಗಳನ್ನು ಸ್ಥಾಪಿಸಿ ಕನಿಷ್ಠ 10 ಸಾವಿರ ಸ್ಥಳೀಯರಿಗೆ ಉದ್ಯೋಗ ದೊರಕುವಂತೆ ಮಾಡಬೇಕು. ಕನಕಪುರ, ಟಿ.ನರಸೀಪುರ ಮಾರ್ಗವಾಗಿ ಚಾಮರಾಜನಗರಕ್ಕೆ ಮತ್ತು ಚಾಮರಾಜನಗರದಿಂದ ನಂಜನಗೂಡು ಮಾರ್ಗವಾಗಿ ಮೈಸೂರುವರೆಗೆ ಜೋಡಿ ರಸ್ತೆ ನಿರ್ಮಿಸಬೇಕು. ಕನಕಪುರ- ಚಾಮರಾಜನಗರ ರೈಲು ಮಾರ್ಗ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಮೊದಲಿಗೆ ಚಾಮರಾಜೇಶ್ವರ ದೇವಸ್ಥಾನದ ಮುಂದಿನಿಂದ ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನೆಯಲ್ಲಿ ವಾಟಾಳ್ ಪಕ್ಷದ ಮುಖಂಡರಾದ ಕಾರ್ ನಾಗೇಶ್, ಹರದನಹಳ್ಳಿ ಬಸವರಾಜು, ಶಾ.ಮುರಳಿ, ಚಾ.ವೆಂ. ರಾಜಗೋಪಾಲ್, ಸುರೇಶ್‌ನಾಗ್, ಪುರುಷೋತ್ತಮ್, ಮಿಲ್ ನಾಗೇಶ್ ಮುಂತಾದ ಅನೇಕರು ಪಾಲ್ಗೊಂಡಿದ್ದರು.












Click it and Unblock the Notifications