ಚಾ.ನಗರ ಪುರಸಭೆ: ಅಸ್ಕರ್ ಕೊಲೆಗೆ ಕಾರಣ ಏನು?

ಚಾಮರಾಜನಗರದಲ್ಲಿ ಮಾಜಿ ಪುರಸಭಾ ಸದಸ್ಯನನ್ನು ಹಂತಕರು ಅಟ್ಟಾಡಿಸಿ ಮಚ್ಚುಬೀಸಿ ಹತ್ಯೆಗೈದಿದ್ದಾರೆ. ಆದರೆ ಈ ಹತ್ಯೆ ಏತಕ್ಕಾಗಿ ನಡೆದಿರಬಹುದೆಂದು ಕೆದಕುತ್ತಾ ಹೋದರೆ ರಾಜಕೀಯ ದ್ವೇಷದ ಹಿನ್ನಲೆಯಲ್ಲಿ ನಡೆದದ್ದು ಅಲ್ಲ ಎಂಬುವುದು ಸ್ಪಷ್ಟವಾಗುತ್ತದೆ. ಹಾಗಾದರೆ ಮಾಂಸದ ಮಾಫಿಯಾ ಹತ್ಯೆಗೆ ಕಾರಣವಾಗಿರಬಹುದೆ ಎಂಬ ಸಂಶಯ ಕಾಡತೊಡಗಿದೆ.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ನಗರದಲ್ಲಿ ಪೋಸ್ಟರ್ ಅಂಟಿಸಿಕೊಂಡು ಓಡಾಡುತ್ತಾ ತಳ ಮಟ್ಟದಿಂದ ರಾಜಕೀಯ ಆರಂಭಿಸುವ ಮೂಲಕ ಕೆಲವು ವರ್ಷಗಳ ಹಿಂದೆ ಚಾಮರಾಜನಗರ ಪುರಸಭೆಯ ಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದು ಪುರಸಭೆಯ ಸದಸ್ಯನಾಗಿ ಐದು ವರ್ಷ ಆಡಳಿತ ನಡೆಸಿದ ಮಹಮ್ಮದ್ ಅಸ್ಗರ್ ಎಂಬಾತನೇ ಇವತ್ತು ಬೀದಿ ಬದಿಯಲ್ಲಿ ಹೆಣವಾಗಿ ಹೋಗಿದ್ದಾನೆ.

ಮಹಮ್ಮದ್ ಅಸ್ಗರ್ ಯಾರು?: ನಲವತ್ತೇಳು ವರ್ಷ ವಯಸ್ಸಿನ ಮಹಮ್ಮದ್ ಅಸ್ಗರ್ ಚಾಮರಾಜನಗರದ ಕೆ.ಪಿ.ಮೊಹಲ್ಲಾದ 2ನೇ ಕ್ರಾಸ್‌ನ ನಿವಾಸಿ ಮಹಮ್ಮದ್ ಅಬ್ರಾರ್ ಎಂಬುವರ ಪುತ್ರನಾಗಿದ್ದು, ಕಾಂಗ್ರೆಸ್ ಮುಖಂಡನಾಗಿ ಚಾಮರಾಜನಗರದಲ್ಲಿ ಗುರುತಿಸಿಕೊಂಡಿದ್ದನು. ರಾಜಕೀಯವಾಗಿ ಒಂದಷ್ಟು ಹೆಸರು ಸಂಪಾದಿಸಿದ್ದರಿಂದ ಮಾಂಸದ ಅಂಗಡಿಯಿಟ್ಟುಕೊಂಡು ವ್ಯಾಪಾರ ಮಾಡುವ ಮೂಲಕ ಬದುಕು ಕಂಡುಕೊಂಡಿದ್ದನು.

ದಿನದಿಂದ ದಿನಕ್ಕೆ ವ್ಯಾಪಾರದಲ್ಲಿ ಯಶಸ್ಸು ಕಾಣುತ್ತಾ ವ್ಯಾಪಾರದ ವಿಚಾರದಲ್ಲಿ ಮೂರನೆಯವರಿಗೆ ಅವಕಾಶ ನೀಡದೆ, ಪ್ರತಿಸ್ಪರ್ಧಿಗಳನ್ನು ಮಟ್ಟ ಹಾಕುತ್ತಾ ಮುಂದೆ ಸಾಗಿದ್ದ ಅಸ್ಗರ್‌ನನ್ನು ಮುಗಿಸಲು ಸಂಚು ನಡೆದಿತ್ತು. ಇದು ಆತನಿಗೆ ಗೊತ್ತಿತ್ತಾದರೂ ತನ್ನನ್ನು ಯಾರೂ ಏನು ಮಾಡಲಾರರು ಎಂಬ ಹುಂಬ ಧೈರ್ಯ ಆತನಲ್ಲಿತ್ತು. ಅದೇ ಅವನ ಬದುಕಿಗೆ ಮುಳುವಾಗುತ್ತದೆ ಎಂಬುವುದು ಗೊತ್ತೇ ಆಗಲಿಲ್ಲ.

ಆದರೆ ಗೊತ್ತಾಗುವ ವೇಳೆಗೆ ಮಹಮ್ಮದ್ ಅಸ್ಗರ್ ಅಷ್ಟು ವರ್ಷದ ರಾಜಕೀಯ ಬದುಕಿಗೆ, ಮಾಂಸದ ವ್ಯವಹಾರಕ್ಕೆ ವಿದಾಯ ಹೇಳಿಯಾಗಿತ್ತು. ಮಹಮ್ಮದ್ ಅಸ್ಗರ್ ವೃತ್ತಿ ಬದುಕಿನಲ್ಲಿ ಒಂದಷ್ಟು ಹಣ ಸಂಪಾದಿಸಿಕೊಂಡು ಹೆಂಡತಿ ಮಕ್ಕಳೊಂದಿಗೆ ನೆಮ್ಮದಿಯಾಗಿರಬೇಕೆಂದು ಕೊಂಡಿರುವಾಗಲೇ ಸದ್ದಿಲ್ಲದೆ ವಿರೋಧಿ ಪಡೆ ಮಚ್ಚುಮಸೆದಿತ್ತು. ಈ ಹಿಂದೆ ಮಹಮ್ಮದ್ ಫೀರ್, ಮಹಮ್ಮದ್ ಆಲಿ, ಆಸೀಫ್‌ವುಲ್ಲಾ, ಇನಾಯತ್‌ವುಲ್ಲಾ, ಜಫ್ರುಲ್ಲಾ, ರಹಮತ್‌ವುಲ್ಲಾ ಮತ್ತು ಇರ್ಷಾದ್‌ವುಲ್ಲಾ ಮೊದಲಾದವರೊಂದಿಗೆ ಯಾವುದೋ ವಿಚಾರಕ್ಕೆ ಮಹಮ್ಮದ್ ಅಸ್ಗರ್ ಕಿರಿಕ್ ಮಾಡಿಕೊಂಡಿದ್ದನು.

ಆದರೆ ಆ ಏಳು ಮಂದಿ ಜೊತೆಯಾಗಿಯೇ ಇದ್ದರಾದರೂ ಅವರನ್ನು ಎದುರು ಹಾಕಿಕೊಂಡೇ ಮಹಮ್ಮದ್ ಅಸ್ಗರ್ ತನ್ನ ವ್ಯವಹಾರ ಮುಂದುವರೆಸಿಕೊಂಡು ಬಂದಿದ್ದನು. ಈ ಮಧ್ಯೆ ಮಹಮ್ಮದ್ ಅಸ್ಗರ್‌ಗೆ ಹಜ್ ಯಾತ್ರೆಗೆ ಹೋಗುವ ಹಂಬಲ ಉಂಟಾಗಿತ್ತು. ಅದರಂತೆ ವಿಸಾಕ್ಕಾಗಿ ಅರ್ಜಿ ಸಲ್ಲಿಸಲೆಂದು ಫೆಬ್ರವರಿ ೧೧ರಂದು ಬೆಂಗಳೂರಿಗೆ ತೆರಳಿದ ಆತ ಅಲ್ಲಿ ಕೆಲಸ ಮುಗಿಯುವ ವೇಳೆಗೆ ರಾತ್ರಿಯಾಗಿದೆ. ಅಲ್ಲಿಂದ ಮೈಸೂರಿಗೆ ಬಂದು ಮೈಸೂರಿನಲ್ಲಿ ಊಟ ಮುಗಿಸಿ ಮತ್ತೆ ಚಾಮರಾಜನಗರಕ್ಕೆ ಜೀವಾ ಎಂಬ ಬಸ್ಸಿನಲ್ಲಿ ಹೊರಟಿದ್ದಾನೆ.

ಚಾಮರಾಜನಗರ ತಲುಪುವ ವೇಳೆಗೆ ಮಧ್ಯರಾತ್ರಿಯಾಗಿದೆ. ಬಸ್ಸಿನಿಂದ ಇಳಿದು ಮನೆಯತ್ತ ಹೆಜ್ಜೆ ಹಾಕುತ್ತಿದ್ದಂತೆಯೇ ಆತನನ್ನು ಹಂತಕ ಪಡೆ ಹಿಂಬಾಲಿಸುತ್ತಾ ಬಂದಿದೆ. ಆದರೆ ಅದ್ಯಾವುದರ ಪರಿವೇ ಇಲ್ಲದೆ ಮಹಮ್ಮದ್ ಅಸ್ಗರ್ ಬೇಗ ಮನೆತಲುಪುವ ಉದ್ದೇಶದಿಂದ ಚುರುಕಾಗಿಯೇ ನಡೆಯುತ್ತಿದ್ದನು. ಅಷ್ಟರಲ್ಲಿಯೇ ಅವನ ಮೇಲೆ ಮಚ್ಚು ಬೀಸಲಾಗಿದೆ. ಮಚ್ಚಿನೇಟಿಗೆ ಕಮಕ್‌ಕಿಮಕ್ ಎನ್ನದೆ ಆತ ಪ್ರಾಣ ಬಿಟ್ಟಿದ್ದಾನೆ. ಬಳಿಕ ಚಾಮರಾಜನಗರದ ನ್ಯಾಯಾಲಯದ ಎದುರಿಗೆ ಇರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿ ಶವವನ್ನು ಎಸೆದು ಹಂತಕರು ಪರಾರಿಯಾಗಿದ್ದಾರೆ.

ಇತ್ತ ಮನೆಯಲ್ಲಿ ರಾತ್ರಿಯೇ ಮನೆಗೆ ಬರುವುದಾಗಿ ಫೋನ್ ಮಾಡಿದ ಮಹಮ್ಮದ್ ಅಸ್ಗರ್ ಬಾರದೆ ಇದ್ದಾಗ ಹೆಂಡತಿ ಮಕ್ಕಳು ಭಯಭೀತರಾಗಿದ್ದಾರೆ. ಫೆಬ್ರವರಿ 12ರಂದು ಬೆಳಿಗ್ಗೆ ರಸ್ತೆ ಬದಿಯಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ಗಂಡಸಿನ ಶವ ಕಂಡ ಕೆಲವರು ಹತ್ತಿರಹೋಗಿ ನೋಡಿದ್ದಾರೆ. ಹಾಗೆನೋಡಿದವರಿಗೆ ಅದು ಮಾಂಸದ ವ್ಯಾಪಾರಿ ಹಾಗೂ ಕಾಂಗ್ರೆಸ್ ಮುಖಂಡ ಮಹಮ್ಮದ್ ಅಸ್ಗರ್‌ನ ಶವ ಎಂಬುವುದು ತಿಳಿದು ಹೋಗಿದೆ. ತಕ್ಷಣ ಈ ವಿಷಯ ಕಾಡ್ಗಿಚ್ಚಿನಂತೆ ಪಟ್ಟಣದಾದ್ಯಂತ ಹಬ್ಬಿ ಸಂಬಂಧಿಕರು, ಗೆಳೆಯರು, ಸಾರ್ವಜನಿಕರು ಆಗಮಿಸಿದ್ದಾರೆ.

ಪೊಲೀಸರಿಗೆ ತಲೆಬಿಸಿಯಾದ ಕೇಸ್:ಅಲ್ಲಿ ಒಂದು ರೀತಿಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ಹೋಗಿದೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಫಣಿಂಧರ್ ಸಿಂಗ್, ಡಿವೈಎಸ್ಪಿ ಸಿ ಬಸವರಾಜು, ಇನ್ಸ್‌ಪೆಕ್ಟರ್ ಮಹಮ್ಮದ್ ಅನ್ಸರಿ ಆಲಿ, ಎಸ್‌ಐ ಜನಾರ್ದನ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳವನ್ನೆಲ್ಲಾ ಜಾಲಾಡಿ ಪರೀಕ್ಷಿಸಿದ್ದಾರೆ. (ಆತನ ಜೇಬಿನಲ್ಲಿ ಮೈಸೂರಿನಿಂದ ಚಾಮರಾಜನಗರಕ್ಕೆ ಜೀವಾ ಬಸ್ಸಿನಲ್ಲಿ ಬಂದಿದ್ದಾನೆ ಎಂಬುವುದಕ್ಕೆ ಟಿಕೆಟ್ ಸಿಕ್ಕಿದೆ.) ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವವನ್ನು ವಾರಿಸುದಾರರಿಗೆ ನೀಡಲಾಗಿದ್ದು, ಅಂದು ಸಂಜೆ ಅಂತ್ಯಕ್ರಿಯೆ ನಡೆಸಲಾಗಿದೆ.

ಮಹಮ್ಮದ್ ಅಸ್ಗರ್ ಹತ್ಯೆ ರಾಜಕೀಯ ವಲಯದಲ್ಲಿ ತಿರುವು ಪಡೆದು ಚಾಮರಾಜನಗರ ಹೊತ್ತಿ ಉರಿಯುವ ಸಾಧ್ಯತೆಯಿತ್ತು. ಆದರೆ ಅಷ್ಟರಲ್ಲಿಯೇ ಅಸ್ಗರ್ ಸಂಬಂಧಿಕರಾದ ಮಹಮ್ಮದ್ ಜಕಾವುಲ್ಲಾ ಎಂಬುವರು ಪಟ್ಟಣ ಠಾಣೆಗೆ ತೆರಳಿ ಮಹಮ್ಮದ್ ಅಸ್ಗರ್‌ಗೂ ಮತ್ತು ಮಹಮ್ಮದ್ ಫೀರ್, ಮಹಮ್ಮದ್ ಆಲಿ, ಆಸೀಫ್‌ವುಲ್ಲಾ, ಇನಾಯತ್‌ವುಲ್ಲಾ, ಜಫ್ರುಲ್ಲಾ, ರಹಮತ್‌ವುಲ್ಲಾ ಮತ್ತು ಇರ್ಷಾದ್‌ವುಲ್ಲಾ ಅವರುಗಳ ನಡುವೆ ದ್ವೇಷವಿದ್ದು ಆಗಾಗ್ಗೆ ಕಿರಿಕ್ ನಡೆಯುತ್ತಿತ್ತೆಂದೂ ಹಾಗಾಗಿ ಅವರೇ ಈ ಹತ್ಯೆ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ.

ಇದರಿಂದ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತಾದರೂ ಅದು ತಿರುವು ಪಡೆಯದೆ ತಣ್ಣಗಾಗಿದೆ ಆದರೂ ಆಯಕಟ್ಟಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ನಿಜವಾಗಿಯೂ ಆ ಏಳು ಮಂದಿಯೇ ಹತ್ಯೆಗೈದಿದ್ದಾರಾ? ಅಥವಾ ಅವರುಗಳ ನಡುವೆ ಇದ್ದಂತಹ ದ್ವೇಷದ ಲಾಭ ಪಡೆದು ಇನ್ಯಾರದರು ಎಂಟ್ರಿ ಕೊಟ್ಟಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಪೊಲೀಸರು ತನಿಖೆ ನಡೆಸಿ ಹಂತಕರನ್ನು ಬಂಧಿಸಿದ ಬಳಿಕವಷ್ಟೆ ಹಂತಕರು ಯಾರು? ಏತಕ್ಕಾಗಿ ಕೊಲೆಗೈದರು? ಹಂತಕರಿಗೂ ಮಹಮ್ಮದ್ ಅಸ್ಗರ್‌ಗೆ ಇದ್ದಂತಹ ವ್ಯವಹಾರವಾದರೂ ಏನು? ಎಂಬ ರಹಸ್ಯ ಬಹಿರಂಗವಾಗಲಿದೆಯಲ್ಲದೆ, ಅಂತೆಕಂತೆಗಳಿಗೂ ತೆರೆಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+