ಕಿಂಗ್‌ಫಿಷರ್ ಹತ್ತಿ ಮೈಸೂರು ನಿಲ್ದಾಣ ಸುತ್ತೋಣ ಬನ್ನಿ

Mysore airport, Mandakalli
ಮೈಸೂರಿನಲ್ಲಿ ವಿಮಾನ ನಿಲ್ದಾಣವಿದ್ದರೂ ವಿಮಾನಗಳೇ ಹಾರಾಡುತ್ತಿಲ್ಲ ಎಂಬ ಕೊರಗು ಬಹಳ ವರ್ಷಗಳಿಂದಿತ್ತಾದರೂ 2010 ಅಕ್ಟೋಬರ್ 1ರಿಂದ ವಿಜಯ್ ಮಲ್ಯ ಒಡೆತನದ ಕಿಂಗ್‌ಫಿಷರ್ ವಿಮಾನ ಮೈಸೂರಿನಿಂದ ಬೆಂಗಳೂರು ಮೂಲಕ ಚೆನ್ನೈಗೆ ಹಾರಾಡುವುದರೊಂದಿಗೆ ಆ ಕೊರಗನ್ನು ನೀಗಿಸಿದೆ. ವಿಮಾನ ನಿಲ್ದಾಣ ಆರಂಭ ನಂತರದ ಬೆಳವಣಿಗೆಯನ್ನು ಗಮನಿಸುತ್ತಾ ಹೋದರೆ ಈ ನಿಲ್ದಾಣ ನಿರ್ಮಾಣವಾಗುವುದರೊಳಗೆ ನೂರೆಂಟು ವಿಘ್ನಗಳು ಕಾಡಿರುವುದಂತು ನಿಜ. ಈಗಲೂ ಕೂಡ ಈ ವಿಮಾನ ನಿಲ್ದಾಣ ಸುರಕ್ಷವಲ್ಲ ಎಂಬ ವಾದವನ್ನು ಕೆಲವು ಸಂಘಸಂಸ್ಥೆಗಳು ಮಂಡಿಸುತ್ತಿವೆ.

ಮಂಡಕಳ್ಳಿ ವಿಮಾನ ನಿಲ್ದಾಣ: ಮೈಸೂರು ನಗರದ ದಕ್ಷಿಣಕ್ಕೆ ನಂಜನಗೂಡಿಗೆ ತೆರಳುವ ರಸ್ತೆಯಲ್ಲಿ ಸುಮಾರು ಹತ್ತು ಕಿ.ಮೀ. ದೂರದಲ್ಲಿರುವ ಮಂಡಕಳ್ಳಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಹಾಗಾಗಿ ಮೈಸೂರು ವಿಮಾನ ನಿಲ್ದಾಣ ಎನ್ನುವ ಬದಲು ಹೆಚ್ಚಿನವರು ಮಂಡಕಳ್ಳಿ ವಿಮಾನ ನಿಲ್ದಾಣ ಎಂದು ಕರೆಯುವುದೇ ರೂಢಿಯಾಗಿದೆ. (ಈ ನಿಲ್ದಾಣಕ್ಕೆ ಪ್ರತ್ಯೇಕ ಬಸ್ ವ್ಯವಸ್ಥೆಯಿಲ್ಲವಾದರೂ ನಂಜನಗೂಡು ಕಡೆಗೆ ತೆರಳುವ ನಗರ ಸಾರಿಗೆ ಹಾಗೂ ಟೆಂಪೋಗಳಲ್ಲಿ ತೆರಳಬಹುದಾಗಿದೆ.)

1947ರಲ್ಲಿಯೇ ಅಂದಿನ ಮಹಾರಾಜರು ಸುಮಾರು 168 ಎಕರೆಯ ಭೂಮಿಯನ್ನು ವಿಮಾನ ನಿಲ್ದಾಣಕ್ಕೆ ಕಾಯ್ದಿರಿಸಿದ್ದರು. ಆ ನಂತರ 1950ರಲ್ಲಿ ವಿಮಾನ ನಿಲ್ದಾಣ ಪ್ರಾರಂಭಿಸಲಾಯಿತು ಎಂದು ಹೇಳಲಾಗುತ್ತದೆ. ಆ ದಿನಗಳಲ್ಲಿ ದಸರಾ ಮಹೋತ್ಸವದ ಸಂದರ್ಭ ಮಾತ್ರ "ವಿಮಾನ ವಿಹಾರ" ನಡೆಸಲಾಗುತ್ತಿತ್ತು. ನಂತರದ ವರ್ಷಗಳಲ್ಲಿ ಅಂದರೆ 1958ರಲ್ಲಿ ನಾಲ್ಕು ಆಸನಗಳುಳ್ಳ ಲಘು ವಿಮಾನ ಇಲ್ಲಿ ಇಳಿಯುತ್ತಿತ್ತು.

ಒಡಂಬಡಿಕೆ: ಈ ವಿಮಾನ ನಿಲ್ದಾಣವನ್ನು ವಿಸ್ತರಿಸುವ ಮೂಲಕ ದೊಡ್ಡ ವಿಮಾನಗಳು ಕೂಡ ಹಾರಾಡಲು ಅನುಕೂಲವಾಗುವಂತೆ ಅಭಿವೃದ್ಧಿಗೊಳಿಸಲು 2005ರಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) ಮತ್ತು ರಾಜ್ಯ ಸರ್ಕಾರದ ನಡುವೆ ಒಡಂಬಡಿಕೆ ಪತ್ರ (MoU)ಕ್ಕೆ ಸಹಿ ಹಾಕಲಾಯಿತು. ಆ ನಂತರ ಕಾಮಗಾರಿಯೂ ಆರಂಭವಾಯಿತು. ಆದರೆ ಇದು ಆಮೆಗತಿಯಲ್ಲಿಯೇ ನಡೆಯತೊಡಗಿತು ಎಂದರೆ ತಪ್ಪಾಗಲಾರದು.

ಈ ಸಂದರ್ಭ ಕೆಲವು ಸಂಘಟನೆಗಳು ನಿಲ್ದಾಣದ ಕಾರ್ಯವೈಖರಿಯ ವಿರುದ್ಧ ಪ್ರತಿಭಟನೆಗಳನ್ನು ಕೂಡ ನಡೆಸಿದ್ದವು. ಎಲ್ಲಾ ವೈರುಧ್ಯಗಳ ನಡುವೆಯೂ ವಿಮಾನ ನಿಲ್ದಾಣದ ಕಾಮಗಾರಿ ಮುಗಿದು 2010ರ ಮೇ 15ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿಲ್ದಾಣವನ್ನು ಉದ್ಘಾಟಿಸಿದರು.

ಕಿಂಗ್‌ಫಿಶರ್ ವಿಮಾನ ಹಾರಾಟ: ಆ ನಂತರ ಸುಮಾರು ಐದು ತಿಂಗಳ ಬಳಿಕ ಅಂದರೆ ದಸರಾ ಸಂದರ್ಭ ಅಕ್ಟೋಬರ್ 1ರಂದು ವಿಜಯಮಲ್ಯ ಒಡೆತನದ ಕಿಂಗ್‌ಫಿಶರ್ ವಿಮಾನ ಮೊದಲ ಬಾರಿಗೆ ಅಧಿಕೃತವಾಗಿ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಈ ವಿಮಾನದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಉದ್ಯಮಿ ವಿಜಯ್‌ಮಲ್ಯ ಸೇರಿದಂತೆ ಹಲವು ನಾಯಕರು ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ನೀರನ್ನು ಚಿಮ್ಮಿಸುವ ಮೂಲಕ ಸ್ವಾಗತಿಸಲಾಗಿತ್ತು.

ಈ ವಿಮಾನ ಪ್ರತಿದಿನ ಮಧ್ಯಾಹ್ನ 12ಗಂಟೆಗೆ ಬೆಂಗಳೂರಿನಿಂದ ಹೊರಟು 12.45ಕ್ಕೆ ಮೈಸೂರು ತಲುಪಿ, ಬಳಿಕ ಮೈಸೂರಿನಿಂದ 2.45ಕ್ಕೆ ಹೊರಟು 3.30ಕ್ಕೆ ಬೆಂಗಳೂರು ತಲುಪಿ ಅಲ್ಲಿಂದ ಮತ್ತೆ ಚೆನ್ನೈಗೆ ಹೊರಡುತ್ತದೆ. ( ದಿನಂಪ್ರತಿ ಇದೇ ಸಮಯ ಅನ್ವಯಿಸುವುದಿಲ್ಲ ಏಕೆಂದರೆ ವಾತಾವರಣ ಏರುಪೇರಾದಾಗ ಲ್ಯಾಂಡಿಂಗ್ ಹಾಗೂ ಟೇಕಾಫ್‌ನಲ್ಲಿ ಕೆಲವೊಮ್ಮೆ ಸಮಯದ ವ್ಯತ್ಯಾಸ ಉಂಟಾಗುತ್ತದೆ)

ವಿಮಾನ ನಿಲ್ದಾಣದ ಬಗ್ಗೆ ಅಪಸ್ವರ: ಇದೆಲ್ಲದರ ನಡುವೆ ಮಂಗಳೂರಿನಲ್ಲಿ ನಡೆದ ವಿಮಾನ ದುರಂತದ ಬಳಿಕ ಮೈಸೂರು ವಿಮಾನ ನಿಲ್ದಾಣ ಸುರಕ್ಷವಲ್ಲ ಎಂಬ ಬಗ್ಗೆ ಅಪಸ್ವರ ಕೇಳಿಬರತೊಡಗಿದೆ. ಈಗಿರುವ ರನ್‌ವೇ 1.7ಕಿ.ಮೀ. ಉದ್ದವಿದ್ದು, ಇದು 50-60 ಆಸನಗಳ ಸಾಮರ್ಥ್ಯದ ಎಟಿಆರ್ 72 ವಿಮಾನ ಹಾರಾಟಕ್ಕೆ ಮಾತ್ರ ಸೂಕ್ತವಾಗಿರುವುದರಿಂದ ಎರಡನೇ ಹಂತದಲ್ಲಿ ಈ ರನ್‌ವೇಯನ್ನು 2.4ಕಿ.ಮೀ.ವಿಸ್ತರಿಸಲು ನಿರ್ಧರಿಸಲಾಗಿದೆ. ಅಲ್ಲದೆ ಇದಕ್ಕಾಗಿ 333 ಎಕರೆ ಭೂಮಿ ಅಗತ್ಯವಿದ್ದು, ಇದರಲ್ಲಿ 188 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.

ಅಂತಾರಾಷ್ಟ್ರೀಯ ಗುಣಮಟ್ಟ ನಿರ್ಧರಿಸುವ "ಸ್ಟ್ಯಾಂಡರ್ಡ್ ರೆಕಮೆಂಡೆಡ್ ಪ್ರಾಕ್ಟಿಸಸ್ (ಎಸ್‌ಎಆರ್‌ಪಿಎಸ್) ಪ್ರಕಾರ ಮೈಸೂರು ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಮಾಂಟ್ರಿಯಲ್‌ನ ಇಂಟರ್ ನ್ಯಾಷನಲ್ ಸಿವಿಲ್ ಏವಿಯೇಷನ್ ಆರ್ಗನೈಸೇಷನ್ (ಐಸಿಎಓ) ನಿಗದಿಪಡಿಸಿದ ಗುಣಮಟ್ಟವನ್ನು ಅನುಸರಿಸಲಾಗಿದೆ. ಈ ಬಗ್ಗೆ ದೆಹಲಿಯ ನಾಗರಿಕ ವಿಮಾನ ನಿಲ್ದಾಣ ನಿರ್ದೇಶನಾಲಯ (ಡಿಜಿಸಿಎ) ನಿಯಮ ಹಾಗೂ ಗುಣಮಟ್ಟವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆಯೇ ಎಂಬುವುದನ್ನು ಪರಿಶೀಲಿಸಿ ಪರವಾನಗಿ ನೀಡಿದೆ.

ವಿಮಾನಯಾನ ಸಚಿವರಿಗೆ ಮನವಿ: ಇಷ್ಟೆಲ್ಲದರ ನಡುವೆ ಮೈಸೂರು ವಿಮಾನ ನಿಲ್ದಾಣ ಸುರಕ್ಷವಲ್ಲ ಎಂಬ ವಾದವನ್ನು ಕೆಲವು ಸಂಘ ಸಂಸ್ಥೆಗಳು ಮಾಡುತ್ತಿವೆ. ಅವರ ಪ್ರಕಾರ ಸಮುದ್ರ ಮಟ್ಟದಿಂದ 2865 ಅಡಿ ಎತ್ತರವಿರುವ ಚಾಮುಂಡಿಬೆಟ್ಟವು ರಾತ್ರಿ ವೇಳೆ ವಿಮಾನ ಹಾರಾಟಕ್ಕೆ ತೊಂದರೆ ನೀಡಲಿದೆಯಲ್ಲದೆ, ವಿಮಾನ ನಿಲ್ದಾಣದ ಸುತ್ತಮುತ್ತ ಕೆರೆಗಳಿರುವುದರಿಂದ ಯಾವತ್ತಿದ್ದರೂ ಅಪಾಯ ತಪ್ಪಿದಲ್ಲ ಎನ್ನುತ್ತಿದ್ದಾರೆ. ಈ ಕುರಿತಂತೆ ಮೈಸೂರು ಕಾಳಜಿಯುಳ್ಳ ನಾಗರಿಕ ವೇದಿಕೆಯು ಕೇಂದ್ರ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ.

ತೊಂದರೆ ಇಲ್ಲ: ವಿಮಾನ ನಿಲ್ದಾಣದ ಅಧಿಕಾರಿಗಳು ಮಾತ್ರ ಈ ಆರೋಪಗಳನ್ನು ಒಪ್ಪುತ್ತಿಲ್ಲ. ಅವರು ಹೇಳುವುದೇನೆಂದರೆ ಚಾಮುಂಡಿಬೆಟ್ಟವು ವಿಮಾನ ನಿಲ್ದಾಣದಿಂದ ನಾಲ್ಕೂವರೆ ಕಿ.ಮೀ. ದೂರದಲ್ಲಿದೆ. ಇದರಿಂದ ವಿಮಾನ ಲ್ಯಾಂಡಿಗ್ ಹಾಗೂ ಟೇಕಾಫ್‌ಗೆ ಯಾವುದೇ ತೊಂದರೆ ಇಲ್ಲ ಎನ್ನುತ್ತಾರೆ. ವಿಮಾನ ನಿಲ್ದಾಣ ಉಸ್ತುವಾರಿ ಅಧಿಕಾರಿಯಾಗಿರುವ ರಾಜೀವ್ ಗುಪ್ತಾರವರು ಮೈಸೂರು ವಿಮಾನ ನಿಲ್ದಾಣದ ಬಳಿ ಯಾವುದೇ ಕಣಿವೆ, ಗುಡ್ಡಗಾಡು ಪ್ರದೇಶವಿಲ್ಲ ಹಾಗಾಗಿ ಇಲ್ಲಿ ಯಾವುದೇ ರೀತಿಯ ಸಮಸ್ಯೆ ಉದ್ಭವಿಸುವ ಪ್ರಶ್ನೆಯೇ ಇಲ್ಲ.

ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ವಿಮಾನ ನಿಲ್ದಾಣ ಮತ್ತು ರನ್‌ವೇ ನಿರ್ಮಿಸಲಾಗಿದೆ. ಅಷ್ಟೇ ಅಲ್ಲ ಸುರಕ್ಷತೆಯ ದೃಷ್ಟಿಯಿಂದ ಏನು ಕ್ರಮ ಕೈಗೊಳ್ಳಬೇಕೋ ಅದನ್ನೆಲ್ಲಾ ಕೈಗೊಳ್ಳಲಾಗಿದೆ. ರನ್‌ವೇ ವಿಸ್ತರಿಸಿದ ಬಳಿಕ ೧೮೦ ಆಸನ ಸಾಮರ್ಥ್ಯದ ಎಬಿ 321 ವಿಮಾನ ಹಾರಾಟ ನಡೆಸಬಹುದು ಎಂದು ಹೇಳುತ್ತಾರೆ.

ಇನ್ನು ವಿಮಾನ ನಿಲ್ದಾಣ ವಿಸ್ತರಿಸುವ ಹಿನ್ನಲೆಯಲ್ಲಿ ಅಲ್ಲದೆ ವಿಮಾನ ಲ್ಯಾಂಡಿಂಗ್ ಹಾಗೂ ಟೇಕಾಫ್‌ಗೆ ತೊಂದರೆಯಾಗುವುದನ್ನು ತಪ್ಪಿಸಲು ರಾಷ್ಟ್ರೀಯ ಹೆದ್ದಾರಿ 212(ಮೈಸೂರು-ನಂಜನಗೂಡು)ನ್ನು ಸುತ್ತೂರು ರಸ್ತೆಗೆ ಬದಲಿಸಲು ನಿರ್ಧರಿಸಲಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದು ರನ್‌ವೇ ವಿಸ್ತರಣೆಯಾಗಿ ದೊಡ್ಡ ವಿಮಾನಗಳು ಹಾರಾಟ ನಡೆಸಿದ ಬಳಿಕವಷ್ಟೆ ಮೈಸೂರು ವಿಮಾನ ನಿಲ್ದಾಣದ ಕುರಿತಂತೆ ಉದ್ಬವಿಸಿರುವ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಷ್ಟೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+