ಯಾವುದೇ ತನಿಖೆಗೂ ಸಿದ್ಧ, ಸಂಶಯವೇ ಬೇಡ: ಸಿಂಗ್

ನನ್ನ ನಡವಳಿಕೆಯು ಯಾವುದೇ ಸಂಶಕ್ಕೆ ಎಡೆಮಾಡಿಕೊಡುವಂತಿರಬಾರದು. ಯಾವುದೇ ಸಮಿತಿಯೆದುರು ತನಿಖೆಗೆ ಒಳಪಡಲು ನಾನು ಸಿದ್ಧ ಎಂದ ಪ್ರಧಾನಿ, as Prime Minister my conduct must be like Caesar's wife - above suspicion ಎಂದು ಉದ್ಧರಿಸಿದರು.
ತಮ್ಮ ನಿವಾಸದಲ್ಲಿ ಟಿವಿ ನ್ಯೂಸ್ ಚಾನೆಲ್‌ಗಳ ಸಂಪಾದಕರ ಜತೆ ಬುಧವಾರ ಸಂವಾದ ನಡೆಸಿದ ಪ್ರಧಾನಿ ಸಿಂಗ್ ಈ ವಿಷಯ ತಿಳಿಸಿದ್ದಾರೆ. 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಮಹಾಲೇಖಪಾಲರು ದೂರಸಂಪರ್ಕ ಸಚಿವ ಎ.ರಾಜಾ ಅವರನ್ನು ಹೊಣೆಯಾಗಿಸಿದ ಹಿನ್ನೆಲೆಯಲ್ಲಿ ರಾಜಾ ತಮ್ಮ ಸ್ಥಾನವನ್ನು ತೊರೆದಿದ್ದರು.
2ಜಿ ಸ್ಪೆಕ್ಟ್ರಂ, ಕಾಮನ್‌ವೆಲ್ತ್ ಗೇಮ್ಸ್, ಆದರ್ಶ್ ಸೊಸೈಟಿ ಮತ್ತು ತೀರಾ ಇತ್ತೀಚೆಗೆ ಇಸ್ರೋದ ಎಸ್-ಬ್ಯಾಂಡ್ ಹಗರಣವನ್ನು ದೇಶದ ಜನತೆಗೆ ತಿಳಿಸುವಲ್ಲಿ ಮಾಧ್ಯಮಗಳು ತುಂಬಾ ಮುಖ್ಯವಾದ ಪಾತ್ರ ವಹಿಸಿವೆ ಎಂದ ಪ್ರಧಾನಿ ಮಾಧ್ಯಮಗಳು ನಿರ್ವಹಿಸುತ್ತಿರುವ ಪಾತ್ರವನ್ನು ಕೊಂಡಾಡಿದರು. ಒಂದಾದಮೇಲೊಂದರಂತೆ ಹಗರಣಗಳು ಪ್ರಮುಖ ಸುದ್ದಿಯಾಗುತ್ತಿರುವ ಸಂದರ್ಭದಲ್ಲಿ ತಪ್ಪಿತಸ್ಥರನ್ನು ಶಿಕ್ಷಿಸುವಲ್ಲಿ ತಮ್ಮ ಸರಕಾರ ತುಂಬಾ ಗಂಭೀರವಾಗಿದೆ ಎಂದರು.
ರಾಜಾ ಕೊರಳಿಗೇ ಸ್ಪೆಕ್ಟ್ರಂ ಹಗರಣ ಸುತ್ತಿದ ಸಿಂಗ್: 2ಜಿ ಸ್ಪೆಕ್ಟ್ರಂ ಹಂಚಿಕೆಗಾಗಿ ಅಳವಡಿಸಿಕೊಂಡ ವಿಧಿ ವಿಧಾನದ ಬಗ್ಗೆಯಾಗಲಿ ಅಥವಾ ಯಾವ ಕಂಪನಿಗಳಿಗೆ ಪರವಾನಗಿ ಹಂಚಲಾಗಿದೆ ಎಂಬುದರ ಬಗ್ಗೆಯಾಗಲಿ ನನಗೇನೂ ತಿಳಿಯದು. ಅದನ್ನು ಸಂಪುಟದಲ್ಲಿಯೂ ಚರ್ಚಿಸಲಿಲ್ಲ ಎಂದು ಹೇಳುವ ಮೂಲಕ 2ಜಿ ಸ್ಪೆಕ್ಟ್ರಂ ಹಗರಣವನ್ನು ಪ್ರಧಾನಿ ಸಿಂಗ್ ಅವರು ಸಂಪೂರ್ಣವಾಗಿ ಅಂದಿನ ದೂರಸಂಪರ್ಕ ಖಾತೆ ಸಚಿವ ಎ. ರಾಜಾ ಕೊರಳಿಗೇ ಸುತ್ತಿದರು.
ಪ್ರತಿಪಕ್ಷಗಳದ್ದೇ ಚಿಂತೆ: ಸುಧಾರಣೆಗಳನ್ನು ಕೈಬಿಟ್ಟಿಲ್ಲ. ಮುಂದಿನ ಬಜೆಟ್‌ನಲ್ಲಿ ಹೆಚ್ಚು ಆರ್ಥಿಕ ಸುಧಾರಣೆಗಳನ್ನು ಪ್ರಕಟಿಸುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಘೋಷಿಸಿದ್ದಾರೆ. ಆದರೆ ಮಹತ್ವದ ವಿಧೇಯಕಗಳನ್ನು ಸಂಸತ್ತಿನಲ್ಲಿ ಮಂಡಿಸಲು ಪ್ರತಿಪಕ್ಷಗಳು ಅಡ್ಡಿಪಡಿಸುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸರಕಾರ ಆರ್ಥಿಕ ಸುಧಾರಣೆಗಳನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಮುಂದಿನ ಬಜೆಟ್‌ನಲ್ಲಿ ಇದರ ಬಗ್ಗೆ ಸ್ಪಷ್ಟ ಚಿತ್ರಣ ಲಭಿಸಲಿದೆ. ಸರಕು ಮತ್ತು ಸೇವಾ ತೆರಿಗೆ ತಿದ್ದುಪಡಿ ವಿಧೇಯಕ ಮಹತ್ವದ್ದಾಗಿದೆ. ಮೂಲಸೌಕರ್ಯ ಬಂಡವಾಳ ಹೂಡಿಕೆಗೆ ಹೆಚ್ಚು ಇಂಬು ನೀಡಲು ಸರಕಾರಿ-ಖಾಸಗಿ-ಸಹಭಾಗಿತ್ವದ ಮಾದರಿ ಅಳವಡಿಸಿಕೊಳ್ಳುವುದಾಗಿ ಹೇಳಿದರು. ಆದರೆ ಪ್ರತಿಪಕ್ಷಗಳು ಅದರಲ್ಲೂ ಬಿಜೆಪಿ ಇದಕ್ಕೆ ಪ್ರತಿಕೂಲವಾಗಿ ಪರಿಣಮಿಸಿದೆ ಎಂದು ಪ್ರಧಾನಿ ಇದೇ ಸಂದಭದಲ್ಲಿ ಕಿಡಿಕಾರಿದರು.












Click it and Unblock the Notifications