ವೆಬ್ ಮೂಲಕ ಮನೆ ಬಾಗಿಲಿಗೆ ಆಟೋರಿಕ್ಷಾ ಸೇವೆ

ವೆಬ್‌ಸೈಟ್ ಪಟ್ಟಿಯಲ್ಲಿರುವ ಒಬ್ಬರಿಗೆ ಕರೆ ಮಾಡಿದರೆ ಮನೆ ಬಾಗಿಲಿಗೆ ಹೆಚ್ಚುವರಿ ಶುಲ್ಕವಿಲ್ಲದೆ ರಿಕ್ಷಾ ಸೇವೆ ಲಭ್ಯವಾಗುತ್ತದೆ. 'ಈ ಸೌಲಭ್ಯಕ್ಕಾಗಿ ನಾವು ಹಲವು ಬಾರಿ ರಿಕ್ಷಾ ಚಾಲಕರ ಸಮೀಕ್ಷೆ ನಡೆಸಿ ಹಲವು ಮಾಹಿತಿಗಳನ್ನು ಸಂಗಹಿಸಿದ ಬಳಿಕ ಯಾವುದೇ ಅಪರಾಧ ಪ್ರಕರಣಗಳಲ್ಲಿ ಶಾಮೀಲಾಗಿರದ ಚಾಲಕರನ್ನು ಮಾತ್ರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.
ಗ್ರಾಹಕರು ಅವಶ್ಯಕತೆ ಬಿದ್ದಾಗ ಪಟ್ಟಿಯಲ್ಲಿರುವ ಯಾರೊಬ್ಬರಿಗಾದರೂ ಕರೆ ಮಾಡಿದರೆ ಮನೆಬಾಗಿಲಿಗೆ ಸೇವೆ ನೀಡಲಾಗುವುದು ಎಂದು ವೆಬ್‌ಸೈಟ್ ಸೇವೆಯ ರುವಾರಿ ಸೀತಾರಾಮ ವಿಶ್ವನಾಥ ಹೇಳುತ್ತಾರೆ.
ಸದ್ಯಕ್ಕೆ ರಿಕ್ಷಾ ಚಾಲಕರಾದ ಆರ್ ಪ್ರಸನ್ನ , ಶೆನಾಯ್ ಕಿರಣ್, ಪೆರ್‍ಸಿ ಮತ್ತು ನಿರಂಜನ ರಾಧಾಕೃಷ್ಣ ಆನ್‌ಲೈನ್ ಸೇವೆಯಲ್ಲಿ ಹೆಸರು ದಾಖಲಿಸಿದ್ದಾರೆ. ಅವರ ಸಂಪರ್ಕ ನಂಬರನ್ನು ಸುಲಭವಾಗಿ ಗ್ರಾಹಕರು ಪಡೆಯುವುದರಿಂದ ಈ ಸೇವೆ ಹೆಚ್ಚು ಸುಲಭವಾಗಲಿದೆ. ಜೊತೆಗೆ ಅಧಿಕ ಶುಲ್ಕ ಕೇಳುವ ಮತ್ತು ತಪ್ಪು ಹಾದಿ ಹಿಡಿಯವ ರಿಕ್ಷಾ ಚಾಲಕರನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಎಂದು ಚಾಲಕ ರಾಧಾಕೃಷ್ಣ ಹೇಳಿದ್ದಾರೆ.
ಸೇವೆ ಆರಂಭಿಸಿದ ಉದ್ದೇಶ: ಆಟೋರಿಕ್ಷಾ ಚಾಲಕರ ಮೇಲಿರುವ ಅಪವಾದ ದೂರಾಗಿಸುವುದು, ಚಾಲಕರ ಘನತೆಯನ್ನು ಎತ್ತಿ ಹಿಡಿಯುವುದು ನಮ್ಮ ಉದ್ದೇಶ. ಜೊತೆಗೆ ಸ್ವಸಹಾಯ ಸಂಘ ಹಾಗೂ ಖಾಯಂ ಪ್ರಯಾಣಿಕರಿಂದ ಈ ಯೋಜನೆ ಇನ್ನಷ್ಟು ವಿಸ್ತರಣೆಗೊಳಿಸಲು ಸಿದ್ಧತೆ ನಡೆದಿದೆ.
ಚಾಲಕರಲ್ಲಿ ಹಾಗೂ ಪ್ರಯಾಣಿಕರಲ್ಲಿ ನಾಗರೀಕ ಪ್ರಜ್ಞೆ ಹೆಚ್ಚಿಸುವುದು, ಚಾಲಕರೊಡನೆ ಕಿತ್ತಾಟ, ದೂರುಗಳನ್ನು ಕಡಿಮೆಗೊಳಿಸುವುದು ಈ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸುವುದು ಇನ್ನೊಂದು ಪ್ರಮುಖ ಉದ್ದೇಶ. ಮನೆ ಬಾಗಿಲಿಗೆ ಸೇವೆ ದೊರಕಿಸುವ ಸೌಲಭ್ಯ ಹೊಂದಿರುವ ಈ ವೆಬ್‌ಸೈಟ್ ಸೇವೆಯು ಮುಂದಿನ ತಿಂಗಳಿಂದ ಜಾರಿಗೊಳ್ಳಲಿದೆ ಎಂದು ಟೆಕ್ಕಿ ವಿಶ್ವನಾಥ್ ತಿಳಿಸಿದರು.












Click it and Unblock the Notifications