ಶಬರಿಮಲೆ ಮಕರ ಜ್ಯೋತಿ ಮಾನವ ನಿರ್ಮಿತ!

ತಿರುವನಂತಪುರ, ಜ. 31 : ಭಾರೀ ಚರ್ಚೆಗೆ ವಸ್ತುವಾಗಿರುವ ಶಬರಿಮಲೆಯಲ್ಲಿ ಸಂಕ್ರಾಂತಿಯಂದು ಹತ್ತುವ ಮಕರ ಜ್ಯೋತಿ ಮಾನವ ನಿರ್ಮಿತ ಎಂಬುದು ಎಲ್ಲರಿಗೂ ತಿಳಿದ ವಿಚಾರ ಎಂದು ಹೇಳಿರುವ ಟ್ರಾವಂಕೋರ್ ದೇವಸ್ವಂ ಬೋರ್ಡ್ ಎಲ್ಲ ಚರ್ಚೆಗಳಿಗೆ ಮಂಗಳ ಹಾಡಿದೆ.

ಈ ವಿಷಯ ಅವರವರ ನಂಬಿಕೆಗೆ ಬಿಟ್ಟ ವಿಚಾರ. ಇದರ ಬಗ್ಗೆ ಹೆಚ್ಚಿನ ಚರ್ಚೆ ಅಗತ್ಯವಿಲ್ಲ. ಪೊನ್ನಂಬಳಮೇಡುನಲ್ಲಿ ಹತ್ತುವ ಮಕರ ಜ್ಯೋತಿ ಮಾನವನೇ ಹಚ್ಚುವ ದೀಪ. ಇದನ್ನು ಟಿಡಿಬಿ ಕೂಡ ಅನುಮೋದಿಸುತ್ತದೆ. ಇದಕ್ಕೆ ಹೆಚ್ಚಿನ ಪ್ರಚಾರ ನೀಡಲೂ ಮಂಡಳಿ ಬಯಸುವುದಿಲ್ಲ ಎಂದು ಟಿಡಿಬಿಯ ಅಧ್ಯಕ್ಷ ಎಂ ರಾಜಗೋಪಾಲನ್ ನಾಯರ್ ಪತ್ರಕರ್ತರಿಗೆ ಸೋಮವಾರ ತಿಳಿಸಿದರು. ಶಬರಿಮಲೆ ದೇವಸ್ಥಾನ ಹಿರಿಯ ಅರ್ಚಕರು, ಆಡಳಿತ ಮಂಡಳಿಯ ಜೊತೆ ಚರ್ಚೆ ನಡೆಸಿದ ನಂತರ ಈ ಸಂಗತಿಯನ್ನು ನಾಯರ್ ಬಹಿರಂಗಪಡಿಸಿದ್ದಾರೆ.

ಜನವರಿ 14ರ ಸಂಕ್ರಾಂತಿಯಂದು ಮಕರ ಜ್ಯೋತಿ ಹತ್ತಿಕೊಂಡ ಕೆಲವೇ ಕ್ಷಣಗಳ ನಂತರ ನಡೆದ ಭೀಕರ ಕಾಲ್ತುಳಿತದಲ್ಲಿ ನೂರಕ್ಕೂ ಹೆಚ್ಚು ಜನ ಪ್ರಾಣ ತೆತ್ತಿದ್ದರು. ಈ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಟ್ರಾವಂಕೋರ್ ದೇವಸ್ಥಾನದ ಮಂಡಳಿಯಿಂದ, ಮಕರ ಜ್ಯೋತಿಯು ಮಾನವ ನಿರ್ಮಿತವೋ ಅಥವಾ ದೈವ ಸೃಷ್ಟಿಯೋ ಎಂದು ವಿವರಣೆ ಕೇಳಿತ್ತು.

ಮಕರ ಜ್ಯೋತಿಯ ಸೃಷ್ಟಿ ಚರ್ಚೆಯ ಪ್ರಮುಖ ವಿಚಾರವಾಗಿರಲಿಲ್ಲ. ವಿಪರೀತ ಜನದಟ್ಟಣೆಯನ್ನು ತಪ್ಪಿಸಲು ನವೆಂಬರ್ ನಿಂದ ಆರಂಭವಾಗುವ ಶಬರಿಮಲೆ ಯಾತ್ರೆಯ ಬದಲಿಗೆ ಇಡೀ ವರ್ಷ ಭಕ್ತರಿಗೆ ದೇವಸ್ಥಾನಕ್ಕೆ ಬರಲು ಅವಕಾಶ ನೀಡುವ ಕುರಿತೂ ಚರ್ಚಿಸಲಾಯಿತು. ಆದರೆ, ಇಡೀ ವರ್ಷ ತೆರೆದಿರುವುದು ಸಂಪ್ರದಾಯಕ್ಕೆ ವಿರುದ್ಧವಾದುದು ಎಂಬ ಅಭಿಪ್ರಾಯ ಮೂಡಿಬಂತು ಎಂದು ಅವರು ತಿಳಿಸಿದರು.

ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಭಕ್ತಾದಿಗಳಿಗೆ ದೇವಸ್ಥಾನವನ್ನು ಇಡೀ ವರ್ಷ ಯಾಕೆ ತೆರೆದಿರಬಾರದು ಎಂದು ಪ್ರಶ್ನೆಯನ್ನೂ ಕೇರಳ ಹೈಕೋರ್ಟ್ ಮಂಡಳಿಗೆ ಕೇಳಿತ್ತು. ಹಾಗೆಯೆ, ಹದಿನೆಂಟು ಮೆಟ್ಟಿಲುಗಳನ್ನು ಅಗಲೀಕರಿಸುವ ಬಗ್ಗೆಯೂ ಚಿಂತನೆ ನಡೆಸಲು ಹೇಳಿತ್ತು. ಈ ಎರಡೂ ಕೋರಿಕೆಗೆ ದೇವಸ್ಥಾನದ ಆಡಳಿತ ಮಂಡಳಿ ನಕಾರಾತ್ಮಕ ಧೋರಣೆ ತಾಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+