ನಾಯಕತ್ವ ಬದಲಾಯಿಸಲು ರಾಜ್ಯಪಾಲ ಯಾರು?

ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡಿದ್ದಕ್ಕಾಗಿ ರಾಜ್ಯಪಾಲರ ವಿರುದ್ಧ ದೂರು ನೀಡಲು ದೆಹಲಿಗೆ ಬಂದಿರುವ ಬಿಎಸ್ ಯಡಿಯೂರಪ್ಪ ಅವರು ಹಂಸರಾಜ್ ಭಾರದ್ವಾಜ್ ಅವರನ್ನು ಭಾನುವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸರಕಾರ ಉಳಿಯಬೇಕಿದ್ದರೆ ನಾಯಕನನ್ನು ಬದಲಾಯಿಸಿ ಎಂದು ಹೇಳಲು ರಾಜ್ಯಪಾಲರು ಯಾರು ಎಂದು ಕೆಂಡಾಮಂಡಲರಾದ ಯಡಿಯೂರಪ್ಪ, ನಾಯಕತ್ವ ಬದಲಾವಣೆ ಮಾಡುವುದು ಬಿಡುವುದು ಬಿಜೆಪಿ ಹೈಕಮಾಂಡಿಗೆ ಬಿಟ್ಟ ವಿಚಾರ. ಈ ವಿಚಾರದಲ್ಲಿ ಮೂಗು ತೂರಿಸಲು ರಾಜ್ಯಪಾಲರು ಯಾರು? ಅವರು ಕರ್ತವ್ಯ ಮೀರಿ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶುಕ್ರವಾರ ಬಿಜೆಪಿ ಶಾಸಕರ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿದಾಗ, ಸರಕಾರ ಉಳಿಯಬೇಕಿದ್ದರೆ ಯಡಿಯೂರಪ್ಪನವರನ್ನು ಕೆಳಗಿಳಿಸಿ ಬೇರೆಯವರನ್ನು ಪಟ್ಟಕ್ಕೇರಿಸಿ ಎಂದು ರಾಜ್ಯಪಾಲರು ಹೇಳಿದ್ದರು.
'ಚೋರ್' ಬಳಕೆ ಇತಿಹಾಸದಲ್ಲೇ ಮೊದಲು : ನ್ಯಾಯಾಂಗ ತನಿಖೆ ನಡೆದಿರುವಾಗ ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ಹೂಡದಂತೆ ಅವರಿಗೆ ತಿಳಿಸಿತ್ತು. ಅದಕ್ಕೆ ರಾಜ್ಯಪಾಲರು, 'ಕಳ್ಳನೊಬ್ಬ ಪೊಲೀಸರಿಗೆ ದೂರು ನೀಡಿದಂತೆ' ಎಂದು ಹೇಳಿ ಮುಖ್ಯಮಂತ್ರಿಗೆ ಮಾತ್ರವಲ್ಲ ಇಡೀ ನಾಡಿಗೆ ಅವಮಾನ ಮಾಡಿದ್ದಾರೆ. ಮುಖ್ಯಮಂತ್ರಿಯೊಬ್ಬರನ್ನು 'ಚೋರ್' ಎಂಬ ಪದ ಬಳಸಿರುವುದು ಭಾರತದ ಇತಿಹಾಸದಲ್ಲೇ ಇಲ್ಲ. ಇದರಿಂದ ರೊಚ್ಚಿಗೆದ್ದ ನಾಡಿನ ಜನತೆಯೇ ಸ್ವಯಂಪ್ರೇರಿತರಾಗಿ ಬಂದ್ ಆಚರಿಸಿದ್ದರು ಎಂದು ಅವರು ತಿಳಿಸಿದರು.
ಸಂಪುಟದ ನಿರ್ಣಯದ ವಿರುದ್ಧ ನಿರ್ಣಯ ತೆಗೆದುಕೊಂಡಿರುವ ಭಾರದ್ವಾಜ್ ಅವರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದು, ಅವರ ವಿರುದ್ಧ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರಿಗೆ ಸೋಮವಾರ ದೂರು ಸಲ್ಲಿಸುವುದಾಗಿ ಅವರು ಹೇಳಿದರು. ರಾಜ್ಯಪಾಲರನ್ನು ಚಿದಂಬರಂ ಬೆಂಬಲಿಸಿದ್ದರೂ, ಅವರ ಕಾರ್ಯವೈಖರಿ ಬಗ್ಗೆ ವಿವರ ನೀಡುವುದು ನನ್ನ ಕರ್ತವ್ಯ ಎಂದು ಯಡಿಯೂರಪ್ಪ ನುಡಿದರು.
ಶಿವಮೊಗ್ಗದ ಸಂಸದ, ಮಗ ರಾಘವೇಂದ್ರ ಮತ್ತಿತರ ರಾಜ್ಯದ ಬಿಜೆಪಿ ನಾಯಕರ ಜೊತೆಗೆ ದೆಹಲಿಗೆ ಬಂದಿರುವ ಯಡಿಯೂರಪ್ಪನವರು ಸೋಮವಾರ ಪಕ್ಷದ ಹಿರಿಯ ನಾಯಕರು ಮತ್ತು ಸಂಸತ್ ಸದಸ್ಯರನ್ನು ಭೇಟಿ ಮಾಡಿ ನಂತರ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನೂ ಭೇಟಿ ಮಾಡಿ ರಾಜ್ಯಪಾಲರ ವಿರುದ್ಧ ದೂರು ನೀಡಲಿರುವುದಾಗಿ ಹೇಳಿದರು. [ಯಡಿಯೂರಪ್ಪ]











Click it and Unblock the Notifications