ಮೈಸೂರಿನ ಮುಂಜಾನೆಯ ಮಂಜಿನ ದೃಶ್ಯ ಕಾವ್ಯ...

ನಗರದಲ್ಲಿ ಮುಂಜಾನೆಯಿಂದ ಸಂಜೆಯವರೆಗೆ ಅದೇ ಜನ... ಅದೇ ವಾಹನಗಳು... ಬೋರ್ ಹೊಡೆಸುತ್ತವೆ. ಆದರೆ ಅದೇ ಒಂದು ಮುಂಜಾನೆ ಹಳ್ಳಿಯ ರಸ್ತೆಯಲ್ಲಿ ನಡೆದು ನೋಡಿ ಯಾರು ಯಾರೆಂದು ಕಾಣದಷ್ಟು ಮಂಜು... ಪಾದರಸದಂತೆ ಹರಿದಾಡೋ ಮಂಜಿನಾಚೆ ರಕ್ತ ಚೆಂಡಿನಂತೆ ಕಂಗೊಳಿಸುವ ಸೂರ್ಯ... ಒಮ್ಮೊಮ್ಮೆ ದಟ್ಟ ಮಂಜನ್ನು ಬಲತ್ಕಾರವಾಗಿ ಸೀಳಿ ಭುವಿಯತ್ತ ಬರಲು ಪರದಾಡುವ ಸೂರ್ಯ ರಶ್ಮಿ... ನೋಡುತ್ತಾ ನಿಂತರೆ ಸುಂದರ ದೃಶ್ಯ ಕಾವ್ಯ...
ಅರಮನೆನಗರಿ ಮೈಸೂರಿನಲ್ಲೀಗ ಮಂಜಿನದ್ದೇ ಕಾರುಬಾರು.... ಮುಂಜಾನೆ ಎದ್ದು ಚಾಮುಂಡಿಬೆಟ್ಟದತ್ತ ಕಣ್ಣು ಹಾಯಿಸಿದರೆ... ಗಹಗಹಿಸಿ ನಗುವ ಮಹಿಷಾಸುರನನ್ನೂ ಬಿಡದೆ ಇಡೀ ಬೆಟ್ಟವನ್ನೇ ತನ್ನ ತೆಕ್ಕೆಯೊಳಗೆ ಬಂಧಿಸಿ ಅದರ ಮೇಲೊಂದು ಮಂಜಿನ ತೆರೆ ಎಳೆದು ವಿಸ್ಮಯ ಮೂಡಿಸುತ್ತದೆ.
ಗ್ಯಾಲರಿ:ಮಂಜು ಮುಸುಕಿದ ಹಾದಿಯಲ್ಲಿ ನಡೆದಾಡಿ
ಇನ್ನು ಒಂದೆರಡು ಹೆಜ್ಜೆ ಮುಂದೆ ಹೋಗಿ ಹಳ್ಳಿಯ ಕಡಗೆ ತಿರುಗಿದರೆ ನೇಗಿಲಯೋಗಿಯ ಮುಂಜಾನೆಯ ಕಾಯಕ ಮಂಜಿನ ಪರದೆಯಲ್ಲಿ ಸರಿದಾಡಿದಾಗ ಅದು ನಮಗೆ ಸುಂದರ ನೋಟ. ಆದರೆ ಆತನಿಗೆ ಅದು ಅನಿವಾರ್ಯ. ಮುಂಜಾನೆಯ ಚಳಿಯನ್ನು ಲೆಕ್ಕಿಸದೆ ಗದ್ದೆ ಉಳುಮೆ ಮಾಡುವ ರೈತ.... ಕಟಾವು ಮಾಡಿದ ಭತ್ತದ ಬೆಳೆಯನ್ನು ಗದ್ದೆಯಿಂದ ಎತ್ತಿಗಾಡಿಯಲ್ಲಿ ಕೊಂಡೊಯ್ಯುವ ಹಾಗೂ ಕಣಕ್ಕೆ ಹರಡುವ ದೃಶ್ಯ ಕಣ್ಮನ ಸೆಳೆಯುತ್ತದೆ.
ಮುಂಜಾನೆಯ ಮಂಜಿನ ಸುಂದರ ದೃಶ್ಯಗಳನ್ನು ಹೇಳುವುದಕ್ಕಿಂತ ನೋಡಿ ಆನಂದಿಸುವುದರಲ್ಲಿಯೇ ಹೆಚ್ಚು ಮಜಾ... ಇನ್ನೇಕೆ ತಡ ಮುಂಜಾನೆ ಕಂಬಳಿ ಸರಿಸಿ ಹೊರ ಬನ್ನಿ... ಒಂದಷ್ಟು ದೂರ ಹಾಗೆ ಸುಮ್ಮನೆ ಹೆಜ್ಜೆ ಹಾಕುತ್ತಾ ಹೋಗಿ...[ಮೈಸೂರು]












Click it and Unblock the Notifications