ವಿದ್ಯಾರ್ಥಿಗಳ ಕೂರಂಬಿಗೆ ರಾಹುಲ್ ತಬ್ಬಿಬ್ಬು!

ಮೊನ್ನೆ ವಾರಣಾಸಿ, ನಿನ್ನೆ ಅಲಹಾಬಾದ್, ಇಂದು ಲಖನೌ ಮತ್ತು ನಾಳೆ ಝಾನ್ಸಿ. ಭಾರತದ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟ ರವೀಂದ್ರಾಲಯ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಅವರು ವಿದ್ಯಾರ್ಥಿಗಳು ಎಸೆದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಉತ್ತರ ಭಾರತದಾದ್ಯಂತ ಭಾರೀ ಚಳಿ ಆವರಿಸಿಕೊಂಡಿದ್ದರೂ ಉತ್ಸಾಹದಿಂದ ಭಾಗವಹಿಸಿದ ವಿದ್ಯಾರ್ಥಿಗಳ ಕೆಲ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರ ನೀಡಲು ಅವರು ತಡಬಡಾಯಿಸಿದರು.
ಈ ಸಂವಾದದಲ್ಲಿ ಭಾಗವಹಿಸಿದ್ದ ತುಮಕೂರಿನವರಾದ ಕನ್ನಡಿಗ ಕೆ. ಪರಮಶಿವಯ್ಯ ಅವರು ಪ್ರಶ್ನೋತ್ತರದ ಕೆಲ ಭಾಗಗಳನ್ನು ನಮ್ಮ ಓದುಗರಿಗಾಗಿ ಕಳಿಸಿದ್ದಾರೆ. ವಾಡಿಕೆಯಂತೆ ಈ ಸಂವಾದದಲ್ಲಿ ಪತ್ರಕರ್ತರಿಗೆ ಆಹ್ವಾನ ಮತ್ತು ಪ್ರವೇಶ ಇರಲಿಲ್ಲ. ಬೆಂಗಳೂರಿನಲ್ಲಿ ಕಾನೂನು ವಿದ್ಯಾರ್ಥಿಗಳೊಂದಿಗೆ ರಾಹುಲ್ ಸಂವಾದ ನಡೆಸಿದ್ದಾಗಲೂ ಪತ್ರಕರ್ತರಿಗೆ ಪ್ರವೇಶವಿರಲಿಲ್ಲ.
ಪ್ರಶ್ನೋತ್ತರಗಳು ಹೀಗಿವೆ:
ಪ್ರ : ಹಣದುಬ್ಬರದ ಬಗ್ಗೆ ನಿಮ್ಮ ಅನಿಸಿಕೆಯೇನು?
ರಾಹುಲ್ : ಹಣದುಬ್ಬರ ನಮ್ಮ ಸರಕಾರದ ಕೈಯಲ್ಲಿಲ್ಲ. ಜಾಗತಿಕ ಒತ್ತಡ ಸರಕಾರದ ಮೇಲೂ ಪ್ರಭಾವ ಬೀರಿದೆ. ಸ್ವಲ್ಪ ಮಟ್ಟಿಗೆ ದರಗಳನ್ನು ಕೇಂದ್ರ ಸರಕಾರ ಕಡಿಮೆ ಮಾಡಬಹುದಷ್ಟೆ. ಹಣದುಬ್ಬರ ನಿಯಂತ್ರಣ ರಾಜ್ಯ ಸರಕಾರಗಳ ಕ್ರಮದ ಮೇಲೂ ಅವಲಂಬಿಸಿರುತ್ತದೆ.
ಪ್ರ : ಭ್ರಷ್ಟಾಚಾರದ ಪ್ರಮಾಣ ಏಕೆ ನಿಯಮಿತವಾಗಿ ಏರುತ್ತಿದೆ?
ರಾಹುಲ್ : ಇಡೀ ದೇಶಕ್ಕೆ ಇದು ದೊಡ್ಡ ನೋವಾಗಿ ಪರಿಣಮಿಸಿದೆ. ಭ್ರಷ್ಟಾಚಾರವನ್ನು ಹದ್ದುಬಸ್ತಿನಲ್ಲಿಡುವುದು ಯುವಜನತೆಯ ಕೈಯಲ್ಲೇ ಇದೆ. ಯುವಕರೇ, ಬನ್ನಿ ರಾಜಕೀಯ ಸೇರಿಕೊಂಡು ಭ್ರಷ್ಟಾಚಾರದ ವಿರುದ್ಧ ಹೋರಾಡಿ.
ಪ್ರ : ರಾಜಕೀಯ ಏಕೆ ಸೇರಬೇಕು? ಇದರಿಂದ ಜೀವನೋಪಾಯ ಹೇಗೆ ಸಾಧ್ಯ?
ರಾಹುಲ್ : ಜೀವನೋಪಾಯದ ಬಗ್ಗೆ ಚಿಂತಿಸುತ್ತಿದ್ದರೆ ನೀವು ಬಿಬಿಎ, ಎಂಬಿಎ ಅಥವಾ ಇಂಜಿನಿಯರಿಂಗ್ ಮಾಡಿರಿ. ರಾಜಕೀಯದಲ್ಲಿ ಏನನ್ನಾದರೂ ಸಾಧಿಸಬೇಕಿದ್ದರೆ ತ್ಯಾಗ ಅವಶ್ಯಕ. ತ್ಯಾಗಕ್ಕೆ ಸಿದ್ಧರಿದ್ದರೆ ರಾಜಕೀಯಕ್ಕೆ ಸ್ವಾಗತ. ರಾಜಕೀಯದಲ್ಲಿ ಏರಿಳಿತಗಳು ಇದ್ದಿದ್ದೆ. ನೀವೆ ಹೊಂದಿಕೊಂಡು ಮುಂದುವರಿಯಬೇಕು.
ಪ್ರ : ಉತ್ತರ ಪ್ರದೇಶದಲ್ಲಿ ಅಭಿವೃದ್ಧಿ ಇಲ್ಲ ಮತ್ತು ನೌಕರಿಗೂ ಕುತ್ತು ಬಂದಿದೆ. ಕೇಂದ್ರ ಸರಕಾರ ಏನು ಮಾಡುತ್ತಿದೆ?
ರಾಹುಲ್ : ಉತ್ತರ ಪ್ರದೇಶ ಸರಕಾರವನ್ನು ಆರಿಸಿದ್ದು ನೀವೆ, ನಾನಲ್ಲ. ಉತ್ತರ ಪ್ರದೇಶ ಹಿಂದುಳಿದಿದ್ದರೆ ಅದಕ್ಕೆ ನೀವೇ ಕಾರಣ. ನಿಮಗೆ ಅಭಿವೃದ್ಧಿ, ಉದ್ಯೋಗ ಬೇಕಿದ್ದರೆ ಮತದಾನ ಮಾಡುವಾಗಲೇ ಸರಿಯಾಗಿ ನಿರ್ಧಾರ ತೆಗೆದುಕೊಳ್ಳಬೇಕು. [ಇವರು ನಮ್ಮ ರಾಹುಲ್ ಗಾಂಧಿ]











Click it and Unblock the Notifications