ಕೈಗಾರಿಕೆಗಳಲ್ಲಿ ಕನ್ನಡ ವಾತಾವರಣವಿರಲಿ: ಅಶೋಕ್

ನಗರದ ಪುರಭನವದಲ್ಲಿ ಭಾನುವಾರ ನಡೆದ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ 8ನೇ ವಾರ್ಷಿಕೋತ್ಸವ ಮತ್ತು ಕಾರ್ಮಿಕ ಕನ್ನಡೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಣ್ಣ ಮತ್ತು ಬೃಹತ್ ಪ್ರಮಾಣದ ಕೈಗಾರಿಕೆಗಳಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಯಾಗಬೇಕಾಗಿದೆ ಎಂದು ಹೇಳಿದರು.
ಸಂಪೂರ್ಣ ಕನ್ನಡ ಮಯ ಸಾಧ್ಯ: ನಗರದ ಬಹುತೇಕ ಕೈಗಾರಿಕೆಗಳಲ್ಲಿ ಕನ್ನಡಿಗರೆ ಪರಕೀಯರಾಗಿರುವ ಇಂದಿನ ಸಂದರ್ಭದಲ್ಲಿ ಕೈಗಾರಿಕೆಯಲ್ಲಿನ ಕನ್ನಡಿಗರು ಉನ್ನತ ಸ್ಥಾನ ಹೊಂದಿದರೆ, ಅಲ್ಲಿ ಹೆಚ್ಚು ಜನ ಕನ್ನಡಿಗರಿಗೆ ನೌಕರಿ ಮತ್ತು ಸೇವಾ ಭದ್ರತೆ ಸಿಗುತ್ತದೆ. ಕನ್ನಡ ಸಂಸ್ಕೃತಿ ಬೆಳವಣಿಗೆಯಾಗುತ್ತದೆ ಮತ್ತು ಭಾಷೆ ಹೆಚ್ಚು ಬಳಕೆಯಾಗುವ ಮೂಲಕ ಸದೃಢವಾಗಿ ಕೈಗಾರಿಕೆ ಸಂಪೂರ್ಣ ಕನ್ನಡ ಮಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಾಹಿತ್ಯ ಸಮ್ಮೇಳನ್ನಕ್ಕೆ ಬನ್ನಿ: ಬೆಂಗಳೂರಿನಲ್ಲಿ ಕನ್ನಡ ಭಾಷೆ ಕೈ ತಪ್ಪಿ ಹೋಗುತ್ತಿದೆ ಎಂದು ಎಲ್ಲರೂ ಭಾವಿಸುತ್ತಿರುವ ಸಂದರ್ಭದಲ್ಲಿ ನಾಲ್ಕು ದಶಕಗಳ ನಂತರ 77ನೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಗರದ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿದೆ. ಹಾಗೆಯೆ ಮಾರ್ಚ್ ತಿಂಗಳಲ್ಲಿ ಮೂರು ದಿನಗಳ ಕಾಲ ಕೆಂಪೇಗೌಡರ ಉತ್ಸವ ನಡೆಸಲಾಗುವುದು ಎಂದು ಅಶೋಕ್ ನುಡಿದರು.
ಉಚಿತ ಸಾರಿಗೆ ವ್ಯವಸ್ಥೆ: ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಉಳಿದರೆ ಕನ್ನಡ ಭಾಷೆ ಉಳಿಯುತ್ತದೆ. ಸಾಹಿತ್ಯ ಸಮ್ಮೇಳನ ಹಾಗೂ ಕೆಂಪೇಗೌಡ ಉತ್ಸವ ಸರಕಾರದ ಕಾರ್ಯಕ್ರಮವಲ್ಲದೆ, ಕನ್ನಡಿಗರ ಕಾರ್ಯ ಕ್ರಮವಾಗಿರುವುದರಿಂದ ಅಸಂಖ್ಯ ಪ್ರಮಾಣದಲ್ಲಿ ಕನ್ನಡಿಗರು ಭಾಗವಹಿಸಬೇಕು. ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಕನ್ನಡಭಿಮಾನಿ ಮತ್ತು ಸಾಹಿತ್ಯಾಸಕ್ತರಿಗೆ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗುವುದು ಮತ್ತು ಸಾಧ್ಯವಾದರೆ ಉಚಿತವಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಚಿವರು ಹೇಳಿದರು. [ಸಾಹಿತ್ಯ ಸಮ್ಮೇಳನ]












Click it and Unblock the Notifications