ಜಿಪಂ ಫಲಿತಾಂಶ ಸಮಾಧಾನ ತಂದಿದೆ : ಸಿಎಂ

ಜಿಲ್ಲಾ ಮತ್ತು ತಾಲ್ಲೂಕು ಫಲಿತಾಂಶ ಹೊರಬಿದ್ದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನಾವು ಕೇವಲ ಒಂದರೆಡು ಸ್ಥಾನಗಳನ್ನು ಮಾತ್ರ ಗೆದ್ದಿದ್ದೇವು. ಈ ಬಾರಿ ಜಿಪಂ ಚುನಾವಣೆಯಲ್ಲಿ 12 ಜಿಪಂ ಸ್ಥಾನಗಳನ್ನು ಗೆಲ್ಲುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದೇವೆ. ಫಲಿತಾಂಶ ನಿರೀಕ್ಷಿಸಿದಷ್ಟು ಬಾರದಿದ್ದರೂ ಸಮಾಧಾನವನ್ನಂತೂ ತಂದಿದೆ ಎಂದರು.
ಪ್ರತಿಪಕ್ಷಗಳು ಮಾಡುತ್ತಿರುವ ನಕಾರಾತ್ಮಕ ಟೀಕೆಗಳಿಗೆ ಕಿವಿಗೊಡದ ಮತದಾರರು, ಬಿಜೆಪಿಗೆ ಮತ ನೀಡಿದ್ದಾರೆ. ಸರಕಾರದ ಅಭಿವೃದ್ಧಿ ಕಾರ್ಯಗಳಿಗೆ ಬೆನ್ನುತಟ್ಟಿರುವ ಮತದಾರರ ಪ್ರತಿಪಕ್ಷಗಳಿಗೆ ಕಪಾಳಮೋಕ್ಷ ಮಾಡಿದ್ದಾರೆ. ಮುಖ್ಯವಾಗಿ ಭ್ರಮೆಯಲ್ಲಿದ್ದ ಜೆಡಿಎಸ್ ಅನೇಕ ಕಡೆಗಳಲ್ಲಿ ಖಾತೆಯನ್ನು ಸಹ ತೆರೆದಿಲ್ಲ. ಇನ್ನಾದರೂ ಈ ಪಕ್ಷದ ಮುಖಂಡರು ಸರಕಾರದ ಕಾರ್ಯಕ್ರಮಗಳಿಗೆ ಸಹಕಾರ ನೀಡಲಿ ಎಂದು ಯಡಿಯೂರಪ್ಪ ಹೇಳಿದರು.
ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ 17 ಜಿಪಂ ಸ್ಥಾನ ಗಳಿಸಿತ್ತು. ಇದೀಗ ಅದರ ಸ್ಥಾನ ಕೇವಲ 4 ಎಂದು ಟೀಕಿಸಿದ ಅವರು, ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಜನಪ್ರಿಯ ಸರಕಾರದ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಲಿ. ಜೆಡಿಎಸ್ ಜೊತೆಗೆ ಒಳಒಪ್ಪಂದ ಮಾಡಿಕೊಂಡು ಸರಕಾರ ಬೀಳಿಸುವ ಕಾರ್ಯವನ್ನು ಕೈಬಿಡಬೇಕು ಎಂದು ಯಡಿಯೂರಪ್ಪ ಕಿವಿಮಾತು ಹೇಳಿದರು.
30 ಜಿಪಂ ಕ್ಷೇತ್ರಗಳಲ್ಲಿ ಬಿಜೆಪಿ 12, ಕಾಂಗ್ರೆಸ್ 4 ಮತ್ತು ಜೆಡಿಎಸ್ 4 ಮತ್ತು 10 ಅತಂತ್ರ ಜಿಪಂಗಳು ನಿರ್ಮಾಣವಾಗಿದೆ. 176 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ 66 ಬಿಜೆಪಿ, 31 ಕಾಂಗ್ರೆಸ್ ಮತ್ತು 29 ಕ್ಷೇತ್ರಗಳಲ್ಲಿ ಜೆಡಿಎಸ್ ಜಯಭೇರಿ ಬಾರಿಸಿದೆ.












Click it and Unblock the Notifications