ಸುಂದರ ಮಹಿಳೆಯ ಹತ್ಯೆಯ ಹಿಂದಿನ ರಹಸ್ಯ!
ಅವಳು ತಸ್ನೀನ್ ಬೇಗಂ. 35ರ ಹರೆಯದ ಸ್ಪುರದ್ರೂಪಿ ಮಹಿಳೆ. ಮೈಸೂರಿನ ಸುಣ್ಣದಕೇರಿಯ ಹತ್ತನೇ ಕ್ರಾಸ್ ನ ನಿವಾಸಿಯಾಗಿರುವ ಈಕೆಗೆ ಒಂದೆರಡು ಮನೆಯಿದ್ದು ಅದನ್ನು ಬಾಡಿಗೆಗೆ ನೀಡಿದ್ದಾಳೆ. ಜೊತೆಗೆ ಬಡ್ಡಿ ವ್ಯವಹಾರವನ್ನೂ ನಡೆಸುತ್ತಿದ್ದಳು. ಆದರೆ ಈಕೆ ಇದ್ದಕ್ಕಿದ್ದಾಗೆ ಅದು ಮಗನಿಂದಲೇ ತನ್ನ ಮಗನಿಂದಲೇ ಕೊಲೆಯಾಗಿ ಹೋಗಿದ್ದಾಳೆ.
ಇವತ್ತು ಹೆಚ್ಚಿನ ಮರ್ಡರ್ ಸೆಕ್ಸ್ ವಿಚಾರಕ್ಕೆ ನಡೆಯುತ್ತಿದೆ ಎಂಬುವುದಕ್ಕೆ ನಮ್ಮ ಮುಂದೆ ನಡೆಯುತ್ತಿರುವ ಹತ್ಯೆಗಳೇ ಸಾಕ್ಷಿಯಾಗಿವೆ. ಗಂಡನಿದ್ದರೂ ಗೌಪ್ಯವಾಗಿ ಪರಪುರುಷನೊಂದಿಗೆ ಸಂಬಂಧವನ್ನಿಟ್ಟುಕೊಳ್ಳುವ ಮಹಿಳೆಯರು ಅಕ್ರಮ ಸಂಬಂಧ ಬೆಳಕಿಗೆ ಬಂದ ತಕ್ಷಣ ಒಂದೋ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡ್ತಾರೆ. ಇಲ್ಲಾಂದ್ರೆ ತಾವೇ ಕೊಲೆಯಾಗಿ ಹೋಗುತ್ತಾರೆ. ಆದರೆ ಇಲ್ಲಿ ನಡೆದದ್ದೇ ಬೇರೆ. ಇದೀಗ ಹೆಣವಾಗಿ ಹೋದ ತಸ್ನೀನ್‌ಬೇಗಂ ಎಂಬ ಮಹಿಳೆ ಗಂಡನಿಂದಾಗಲೀ, ಪ್ರಿಯಕರನಿಂದಾಗಲೀ ಕೊಲೆಯಾಗದೆ ಮಗನಿಂದಲೇ ಕೊಲೆಯಾಗಿ ಹೋಗಿದ್ದಾಳೆ.
ಸುಖಮಯ ಸಂಸಾರ : ತಸ್ನೀನ್ ಬೇಗಂನ್ನು 18 ವರ್ಷಗಳ ಹಿಂದೆ ಗುಜರಿಯಲ್ಲಿ ಕೆಲಸ ಮಾಡುವ ಮೊಹಮ್ಮದ್ ಗೌಸ್ ಎಂಬಾತನಿಗೆ ಕೊಟ್ಟು ಮದುವೆ ಮಾಡುವುದರ ಮೂಲಕ ಆಕೆಯ ಹೆತ್ತವರು ಕೈತೊಳೆದುಕೊಂಡಿದ್ದರು. ಮದುವೆಯಾಗುವಾಗ ಆಕೆಗೆ ಇನ್ನೂ 17ವರ್ಷ. ಮದುವೆಯಾದ ಒಂದು ವರ್ಷಕ್ಕೆ ಸುಖಮಯ ದಾಂಪತ್ಯದ ಫಲವಾಗಿ ಮಗ ಹುಟ್ಟಿದ್ದ ಅವನಿಗೆ ಮೊಹಮ್ಮದ್ ಶೋಹೇಬ್ ಎಂದು ಹೆಸರಿಟ್ಟಿದ್ದರು.
ಆ ನಂತರ ಒಂದೆರಡು ವರ್ಷಗಳ ಅಂತರದಲ್ಲಿ ಎರಡು ಗಂಡು ಹಾಗೂ ಒಂದು ಹೆಣ್ಣು ಮಗುವನ್ನು ಹೆರುವುದರ ಮೂಲಕ ತಸ್ನೀನ್ ಬೇಗಂ 24ವರ್ಷಕ್ಕೆಲ್ಲಾ ನಾಲ್ಕು ಮಕ್ಕಳ ತಾಯಿಯಾಗಿದ್ದಳು. ಗಂಡ ಗುಜರಿಯಲ್ಲಿ ಸಂಪಾದಿಸುತ್ತಿದ್ದ ಹಣದಲ್ಲಿ ಮಕ್ಕಳನ್ನು ಸಾಕಿ ಸಲಹುತ್ತಾ ಎಲ್ಲಾ ಹೆಣ್ಣು ಮಕ್ಕಳಂತೆ ಈಕೆಯೂ ಇದ್ದಳು. ಚಿಕ್ಕವರಾಗಿದ್ದ ಮಕ್ಕಳು ಬೆಳೆದು ಶಾಲೆಗೆ ಹೋಗಲಾರಂಭಿಸಿದರು. ಹಿರಿಮಗ ಮೊಹಮ್ಮದ್ ಶೋಹೇಬ್ ಶಾಲೆಗೆ ಸಲಾಂ ಹೊಡೆದು ಬಿಸಿನೆಸ್ ಮಾಡ್ತೀನಿ ಅಂತ ಸುತ್ತುತ್ತಿದ್ದರೆ, ಎರಡನೆಯ ಮಗ ಶಕೀಬ್ 9ನೇ ತರಗತಿಯಲ್ಲಿ, ಮೂರನೆಯವನು ಮಾಹಿಬ್ 8ನೇ, ಪುತ್ರಿ ಶಾಹಿಲ್ 6ನೇ ತರಗತಿಯಲ್ಲಿ ಓದುತ್ತಿದ್ದಳು.
ಈ ನಡುವೆ ಸುತ್ತಮುತ್ತಲಿನ ಕೆಲವರು ಸಾಲ ಕೇಳಿಕೊಂಡು ಬರುತ್ತಿದ್ದರು. ಈ ಸಂದರ್ಭ ಹಣ ಇಲ್ಲಾಂದ್ರೆ ಬಡ್ಡಿ ಬೇಕಾದರೆ ಕೊಡ್ತೀವಿ ಸಾಲ ಕೊಡಿ ಎನ್ನುತ್ತಿದ್ದರು. ಇದು ತಸ್ನೀನ್ ಬೇಗಂನಲ್ಲಿ ಹೊಸ ಬಯಕೆಯನ್ನು ಚಿಗುರಿಸಿತ್ತು. ನಾನೇಕೆ ಒಂದಷ್ಟು ಮಂದಿಗೆ ಸಾಲ ಕೊಡಬಾರದು ಎಂಬ ಆಲೋಚನೆ ಬಂದಿದ್ದೇ ತಡ ಬಡ್ಡಿ ವ್ಯವಹಾರಕ್ಕೆ ಮುಂದಾಗಿ ಬಿಟ್ಟಳು. ಹೆಂಡತಿ ಬಡ್ಡಿ ವ್ಯವಹಾರ ಮಾಡಿಕೊಂಡು ಒಂದಷ್ಟು ಸಂಪಾದಿಸುತ್ತಿದ್ದಾಳಲ್ಲ ಎಂಬ ಸಮಾಧಾನ ಗಂಡ ಮೊಹಮ್ಮದ್ ಗೌಸ್‌ನಲ್ಲಿತ್ತು. ಆದರೆ ಹಣ ಕೈಗೆ ಬರುತ್ತಿದ್ದಂತೆಯೇ ತಸ್ನೀನ್‌ಬೇಗಂ ಬದಲಾಗತೊಡಗಿದಳು. ನಾನು ಕೂಡ ಹಣ ಸಂಪಾದನೆ ಮಾಡ್ತೀನಿ ಎಂಬ ಅಹಂ ಅವಳಲ್ಲಿ ಹುಟ್ಟತೊಡಗಿತು.
ಹೀಗಿರುವಾಗ ತಸ್ನೀನ್‌ಬೇಗಂನ ಬದುಕಿನಲ್ಲಿ ಅದೇ ಏರಿಯಾದ ವ್ಯಕ್ತಿಯೊಬ್ಬ ಎಂಟ್ರಿ ಕೊಟ್ಟಿದ್ದ ಅವನೊಬ್ಬ ಬ್ರೋಕರ್ ಈತ ನಗರದ ಇಲಾಖೆಯೊಂದರ ಬಳಿ ಬ್ರೋಕರ್ ಕೆಲಸ ಮಾಡುತ್ತಾನೆ. ಆತ ಕೆಲವರಿಗೆ ಬಡ್ಡಿ ಕೊಡಿಸಲು ತಸ್ನೀನ್‌ಬೇಗಂ ಬಳಿ ಕರೆತರುತ್ತಿದ್ದ ಜೊತೆಗೆ ವಸೂಲಿ ಮಾಡಿಕೊಡುತ್ತಿದ್ದ. ಮಾತು ಚೆನ್ನಾಗಿ ಕಲಿತಿದ್ದ ಆತನಿಗೆ ತಸ್ನೀನ್‌ಬೇಗಂನ್ನು ಬಲೆಗೆ ಬೀಳಿಸಿ ಕೊಳ್ಳಲು ಹೆಚ್ಚು ಸಮಯ ಬೇಕಾಗಲಿಲ್ಲ. ಮಾತು, ವ್ಯವಹಾರ ಹೀಗೆ ಇಬ್ಬರು ಹತ್ತಿರವಾಗತೊಡಗಿದರು.
ಅಕ್ರಮ ಸಂಬಂಧ : ತಸ್ನೀನ್ ಬೇಗಂನ ವ್ಯವಹಾರದಲ್ಲಿ ಎಂಟ್ರಿ ಕೊಟ್ಟ ಬ್ರೋಕರ್ ಅವಳ ಬೆಡ್ ರೂಂವರೆಗೆ ಬರಲು ಹೆಚ್ಚು ಸಮಯ ಬೇಕಾಗಲಿಲ್ಲ. ಇದು ಗಂಡ ಮೊಹಮ್ಮದ್ ಗೌಸ್‌ಗೆ ಗೊತ್ತಾಗಿ ಹೋಗಿತ್ತು. ಮನೆಯಲ್ಲಿ ಗಂಡ ಹೆಂಡಿರ ಮಧ್ಯೆ ಜಗಳಗಳು ಪ್ರಾರಂಭವಾದವು. ಇನ್ನು ಆಕೆಯನ್ನು ತನ್ನ ಅಂಕೆಯಲ್ಲಿಟ್ಟು ಕೊಳ್ಳುವುದು ಅಸಾಧ್ಯ ಎಂದರಿತ ಆತ ಅವಳಿಂದ ದೂರ ಸರಿಯುವುದೇ ಉಳಿದಿರುವ ದಾರಿ ಎಂಬ ತೀರ್ಮಾನಕ್ಕೆ ಬಂದಿದ್ದ. ಗಂಡಹೆಂಡಿರ ಜಗಳ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಇಬ್ಬರೂ ದೂರವಾಗಿದ್ದರು. ವಯಸ್ಸಿಗೆ ಬಂದಿದ್ದ ಮಗನಿಗೆ ತಾಯಿಯ ಅಕ್ರಮ ಸಂಬಂಧ ಹಿಡಿಸುತ್ತಿರಲಿಲ್ಲ. ಆಗಾಗ್ಗೆ ಮನೆಗೆ ಬರುತ್ತಿದ್ದ ಆತ ಜಗಳ ಮಾಡತೊಡಗಿದ್ದನು. ಆದರೆ ಉಳಿದ ಮೂವರು ಮಕ್ಕಳು ತಾಯಿಯೊಂದಿಗೆ ಇದ್ದರು.
ತಲಾಕ್ : ಎರಡು ವರ್ಷಗಳಿಂದ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆ ಮುಗಿದು ಕಳೆದ ಎರಡು ತಿಂಗಳ ಹಿಂದೆಯಷ್ಟೆ ಗಂಡ ಮೊಹಮ್ಮದ್ ಗೌಸ್‌ನಿಂದ ವಿಚ್ಛೇದನೆ(ತಲಾಕ್) ಸಿಕ್ಕಿತ್ತು. ಇದು ತಸ್ನೀನ್‌ಬೇಗಂಗೆ ಸಂತೋಷ ತಂದಿತ್ತು. ಆದರೆ ಆ ಸಂತೋಷ ಹೆಚ್ಚು ದಿನ ಉಳಿಯಲಿಲ್ಲ ಅವಳ ಪಾಲಿಗೆ ಮಗನೇ ವಿಲನ್ ಆಗತೊಡಗಿದನು.
ಮಗನೇ ಯಮನಾದ : ಅವತ್ತು ಡಿ.28 ಮಂಗಳವಾರದಂದು ತಂದೆ ಮೊಹಮ್ಮದ್ ಗೌಸ್ ಜೊತೆಗಿದ್ದ ಮಗ ಮೊಹಮ್ಮದ್ ಶೋಹೇಬ್ ಅಪ್ಪ ಗುಜರಿ ಕೆಲಸಕ್ಕೆ ಹೋದ ಬಳಿಕ ತಾಯಿಯ ಬಳಿ ಬಂದಿದ್ದಾನೆ. ಒಂದು ವೇಳೆ ಆಕೆ ಹಣ ಕೊಡಲು ಒಪ್ಪಿಲ್ಲಾಂದ್ರೆ ಹತ್ಯೆ ಮಾಡಿಯದರೂ ಹಣ ಒಡವೆ ದೋಚಿಕೊಂಡು ಬರುವ ನಿರ್ಧಾರ ಮಾಡಿದ್ದಾನೆ. ಹಣ ಕೊಡಲು ನಿರಾಕರಿಸಿದ ತಾಯಿಯನ್ನು ಚಾಕುವಿನಿಂದ ಬರ್ಬರವಾಗಿ ಹತ್ಯೆ ಮಾಡಿ ಆಕೆಯ ಬಳಿಯಿದ್ದ ಚಿನ್ನಾಭರಣವನ್ನೆಲ್ಲಾ ತಾನು ಹಾಕಿಕೊಂಡು ಬಂದಿದ್ದ ಜರ್ಕೀನ್ ಒಳಗೆ ಇರಿಸಿಕೊಂಡು ಮನೆಯ ಹಿಂದಿನ ಬಾಗಿಲಿನಿಂದ ಹೊರಹೋಗಿದ್ದಾನೆ. ಮನೆಯ ಬಾಗಿಲು ಹಾಕಿಕೊಂಡೇ ಇದ್ದುದರಿಂದ ಸುತ್ತಮುತ್ತಲಿನವರಿಗೆ ಒಳಗೆ ತಸ್ನೀನ್‌ಬೇಗಂ ಹೆಣವಾಗಿ ಬಿದ್ದಿದ್ದಾಳೆ ಎಂಬ ಸಂಶಯವೇ ಬಂದಿರಲಿಲ್ಲ.
ಹೆಣವಾಗಿ ಬಿದ್ದಿದ್ದಳು : ಸಂಜೆ ಶಾಲೆ ಮುಗಿಸಿಕೊಂಡು ಮಕ್ಕಳು ಮನೆಗೆ ಬಂದಿದ್ದಾರೆ. ಬಾಗಿಲು ತಳ್ಳಿಕೊಂಡು ಒಳಹೋದ ಮಕ್ಕಳಿಗೆ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡಿದೆ. ಜೋರಾಗಿ ಅಳತೊಡಗಿವೆ. ಇದನ್ನು ಕೇಳಿ ಅಲ್ಲಿಗೆ ಸುತ್ತಮುತ್ತಲಿನವರೆಲ್ಲಾ ಬಂದಿದ್ದಾರೆ. ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಂತಕ ಮೊಹಮ್ಮದ್ ಶೋಹೇಬ್ ತಲೆಮರೆಸಿಕೊಂಡಿದ್ದು, ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ತಸ್ನೀನ್‌ಬೇಗಂ ಹತ್ಯೆಗೈಯ್ಯಲು ಮಗನಿಗೆ ಮಾಜಿ ಪತಿ ಮೊಹಮ್ಮದ್ ಗೌಸ್‌ನ ಕುಮ್ಮಕ್ಕು ಇತ್ತೆ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.ಅಮ್ಮನ ಅನೈತಿಕ ಸಂಬಂಧ, ಅಣ್ಣನ ಹಣದ ದಾಹಕ್ಕೆ ಈಗ ಮೂವರು ಮಕ್ಕಳು ತಬ್ಬಲಿಯಾಗಿವೆ.