ಶೀಘ್ರದಲ್ಲೇ ಸಿದ್ದು ಜೆಡಿಎಸ್ಸಿಗೆ : ರೇವಣ್ಣ ಭವಿಷ್ಯ

ಚನ್ನಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತೆ ಜನತಾ ಪರಿವಾರಕ್ಕೆ ಬರುವ ನಿರೀಕ್ಷೆ ಇದೆ. ಇತ್ತೀಚಿನ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ಸಂಭವವಿತ್ತು. ಆದರೆ, ಕಾಂಗ್ರೆಸ್ಸಿಗರೇ ಕಾಲೆಳೆದ ಕಾರಣ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ವಂಚಿತರಾದರು ಎಂದು ರೇವಣ್ಣ ಹೇಳಿದರು.
ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಘೋಷಣೆ ಮಾಡಿದರೆ ಹಿಂದುಳಿದ ವರ್ಗ ಅವರನ್ನು ಬೆಂಬಲಿಸುತ್ತದೆ ಎಂದರಿತು ಕಾಂಗ್ರೆಸ್ ಮುಂದಿನ ನಾಯಕರನ್ನು ಘೋಷಣೆ ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಮತ್ತು ನಾವು ಒಂದಾಗುವ ದಿನ ಬರಲಿದೆ ಎಂದು ರೇವಣ್ಣ ಸ್ಪೋಟಕ ಸುದ್ದಿಯನ್ನು ಹೊರಹಾಕಿದ್ದಾರೆ.
ಭೂಹಗರಣದಲ್ಲಿ ಸಿಲುಕಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮನೆಗೆ ಕಳುಹಿಸುವ ಎಲ್ಲ ಶಕ್ತಿಯೂ ಇತ್ತೀಚೆಗೆ ಕಾಂಗ್ರೆಸ್ ಗೆ ಇತ್ತು. ಆದರೆ, ರಾಜ್ಯ ಕಾಂಗ್ರೆಸ್ ಮುಖಂಡರ ಒಂದು ವರ್ಗ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲು ಮನಸ್ಸಿಲ್ಲ. ಹೀಗಾಗಿ ಸೋನಿಯಾ ಗಾಂಧಿ ಅವರ ಕಿವಿ ಕಚ್ಚಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನ ಸಿಗದಂತೆ ಮಾಡಿದರು.
ಜೊತೆಗೆ ಪಾದಯಾತ್ರೆ ನಂತರ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲು ಪಕ್ಷದ ನಾಯಕರೇ ಕಾರಣ ಆಗಿದ್ದರಿಂದ ಸಿದ್ದರಾಮಯ್ಯ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದು, ಪ್ರತಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಎಲ್ಲವೂ ಗೊತ್ತಿರುವ ಸಂಗತಿ.












Click it and Unblock the Notifications