ಭೈರಪ್ಪ ಅವರ 'ತರ್ಲೆ' ಹೇಳಿಕೆಗೆ ಕರವೇ ಕಿಡಿ

ಕರವೇ (ಪ್ರವೀಣಕುಮಾರ್ ಶೆಟ್ಟಿ ಬಣ) ಕಾರ್ಯಕರ್ತರು ಬೆಳಗ್ಗೆ ಭೈರಪ್ಪ ಅವರ ಮನೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದು, ಮನೆಯೊಳಕ್ಕೆ ಹೋಗಲು ಯತ್ನಿಸಿದರು. ಆದರೆ, ಸ್ಥಳದಲ್ಲಿದ್ದ ಪ್ರತಿಭಟನಾಕಾರರನ್ನು ತಡೆದು ಭೈರಪ್ಪ ಅವರು ಮನೆಯಲ್ಲಿ ಇಲ್ಲವೆಂದು ಪೊಲೀಸರು ತಿಳಿಸಿದರು. ಭೈರಪ್ಪ ಅವರು ಕರ್ನಾಟಕದ ಜನತೆಯನ್ನು ತರ್ಲೆಗಳೆಂದು ಹೇಳಿಕೆ ನೀಡುವ ಮೂಲಕ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಕೂಡಲೇ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಅವರು ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರವೇ ಎಚ್ಚರಿಕೆ ನೀಡಿದೆ.
ಭೈರಪ್ಪ ಅವರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಹೊಗಳುತ್ತಾರೆ. ಇವರ ಪುಸ್ತಕಗಳನ್ನು ಹೊಗಳಲು ಮಾತ್ರ ಕನ್ನಡಿಗರು ಬೇಕು. ಆದರೆ, ಹೊಗಳುವುದು ಮಾತ್ರ ಬೇರೆ ರಾಜ್ಯದವರನ್ನು, ಅವರಿಗೆ ಕನ್ನಡಿಗರು ಬೇಡವೇ ಎಂದು ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 24 ಗಂಟೆಯೊಳಗೆ ಭೈರಪ್ಪ ಕನ್ನಡಿಗರ ಕ್ಷಮೆಯಾಚಿಸದಿದ್ದರೆ, ಅವರ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದು ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
ಭೈರಪ್ಪ ಹೇಳಿಕೆಗೆ ವಿವಿಧ ಸಂಘಟನೆಗಳು ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಬಿಜಾಪುರ, ಬಾಗಲಕೋಟೆ, ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ್ದು, ಕೂಡಲೇ ಕನ್ನಡಿಗರ ಕ್ಷಮೆಯಾಚಿಸಲು ಆಗ್ರಹಿಸಿವೆ. ಮೈಸೂರಿನ ಕುವೆಂಪುನಗರದಲ್ಲಿ ಏರ್ಪಡಿಸಲಾಗಿದ್ದ ವೈದ್ಯಕೀಯ ಶಿಕ್ಷಣ ಸಚಿವ ಎಸ್ ಎ ರಾಮದಾಸ್ ಅವರ ಆಸರೆ ಫೌಂಡೇಷನ್ ವತಿಯಿಂದ ಹೊರತರಲಾದ 'ವಾರ್ಷಿಕ ದಿನಚರಿ' ಪುಸ್ತಕ ಬಿಡುಗಡೆ ಮಾಡಿದ ಅವರು ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಕನ್ನಡಿಗರು ತರ್ಲೆ ಜನರು ಎಂದು ಹೇಳಿದ್ದರು.











Click it and Unblock the Notifications