ಜೈಟ್ಲಿ ಕೈಗೆ ರಾಜ್ಯ ಬಿಜೆಪಿ ಉಸ್ತುವಾರಿ

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮಾಧ್ಯಮ ಪ್ರತಿನಿಧಿಗಳಿಗೊಂದಿಗೆ ಮಾತನಾಡಿದ್ದು, ಕರ್ನಾಟಕದ ರಾಜಕೀಯ ಸಲಹೆಗಾರರನ್ನಾಗಿ ಅರುಣ್ ಜೈಟ್ಲಿ ಅವರನ್ನು ನೇಮಿಸಲಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ನಾಯಕರ ಪೈಕಿ ಮುಖ್ಯಮಂತ್ರಿ ಯಡಿಯೂರಪ್ಪರ ವಿರೋಧಿ ಬಣದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಅರುಣ್ ಜೇಟ್ಲಿಗೆ ಹೆಚ್ಚಿನ ಅಧಿಕಾರ ನೀಡಿದ್ದು ಮಾತ್ರ ವಿಶೇಷವಾಗಿದೆ. ಕರ್ನಾಟಕದ ಉಸ್ತುವಾರಿ ಹೊತ್ತಿದ್ದ ಶಾಂತಕುಮಾರ್ ಅವರನ್ನು ಪಂಜಾಬ್ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.
ಡಿ.7ಕ್ಕೆ ಗಡ್ಕರಿ ಭೇಟಿ : ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಯ ಸಿದ್ಧತೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಡಿ.7ರಂದು ಕರ್ನಾಟಕಕ್ಕೆ ಆಗಮಿಸಲಿದ್ದು, ರಾಜ್ಯದ ಬಿಜೆಪಿ ನಾಯಕರೊಂದಿಗೆ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಮಹತ್ವದ ಚರ್ಚೆ ನಡೆಸಲಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಯಡಿಯೂರಪ್ಪರ ವಿರೋಧಿ ಬಣದ ಅನಂತ್‌ಕುಮಾರ್ ಮೇಲುಗೈ ಎಂದು ಹೇಳಲಾಗುತ್ತಿದೆ.
ಯಡಿಯೂರಪ್ಪರಿಗೆ ಮೂಗುದಾರ ಹಾಕುವ ನಿಟ್ಟಿನಲ್ಲಿ ವರಿಷ್ಠ ಮಂಡಳಿ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಪಕ್ಷದಲ್ಲಿ ಅಸ್ತಿತ್ವದಲ್ಲಿರದ ಹೊಸ ಹುದ್ದೆ ಸೃಷ್ಟಿ ಮತ್ತು ಬಿಕ್ಕಟ್ಟು ಪರಿಹರಿಸುವ ಪರಮಾಧಿಕಾರ ಅರುಣ್ ಜೇಟ್ಲಿಗೆ ನೀಡಲಾಗಿದೆ. ಯಡಿಯೂರಪ್ಪರ 'ಆಟೋಟೋಪ"ಕ್ಕೆ ನಿಯಂತ್ರಣ ಹೇರಲು ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ.












Click it and Unblock the Notifications