ಶಿವಮೊಗ್ಗ : ಧ್ವನಿ ಬೆಳಕಿನಲ್ಲಿ ವಿಜಯನಗರದ ವೈಭವ

ಶಿವಮೊಗ್ಗದಲ್ಲಿ ಡಿಸೆಂಬರ್ 4 ಮತ್ತು 5ರಂದು ಪ್ರತಿದಿನ ಸಂಜೆ 7.30ರಿಂದ ನಗರದ ನೆಹರೂ ಕ್ರೀಡಾಂಗಣದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪೊನ್ನುರಾಜ್ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಅವರು ಮಾತನಾಡುತ್ತಿದ್ದರು.
ಈ ಕಾರ್ಯಕ್ರಮ ವಿಶೇಷ ರೀತಿಯಲ್ಲಿ ರೂಪುಗೊಂಡಿದ್ದು, ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ನೆನಪಿಸಲಿದೆ ಎಂದ ಅವರು, ವಿಜಯನಗರದ ವಿರೂಪಾಕ್ಷ ದೇವಾಲಯ, ಕಲ್ಲಿನರಥ, ಸಾಸಿವೆಕಾಳು ಗಣಪ, ಕಡಲೆಕಾಳು ಗಣಪ, ವಿಜಯ ವಿಠ್ಠಲ ದೇವಾಲಯ, ನರಸಿಂಹ, ಕಲ್ಯಾಣಿ ಮತ್ತು ಹಂಪೆಯ ದೃಶ್ಯ ವೈಭವಗಳು ಧ್ವನಿ-ಬೆಳಕಿನಲ್ಲಿ ಅತ್ಯಾಕರ್ಷಕವಾಗಿ ಮೂಡಿಬರಲಿವೆ ಎಂದರು.
ಎರಡು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದ ಸೊಬಗನ್ನು ಸಾರ್ವಜನಿಕರು ನೋಡಿ ಆನಂದಿಸಬೇಕು ಎಂದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರಂಗಯ್ಯ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಹುಸೇನಿ, ವಿವೇಕಾನಂದ, ವೈದ್ಯ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications