ವಿಕಿಲೀಕ್ಸ್ ಬಗ್ಗೆ ಅಮೆರಿಕಾ ರಾಯಭಾರಿ ತಿಮೋತಿ ವಿಷಾದ

ಈ ರಹಸ್ಯ ದಾಖಲೆಗಳನ್ನು, ವಿಕಿಲೀಕ್ಸ್ ಬಯಲು ಮಾಡಿರುವುದರಿಂದ, ಮಾನವ ಹಕ್ಕುಗಳ ಮೂಲ ಧ್ಯೇಯಗಳು, ನಿಷ್ಠಾವಂತ ವ್ಯಕ್ತಿಗಳ ಜೀವ ಹಾಗೂ ಕಾಯಕಗಳ ಮೇಲೆ ದುಷ್ಪರಿಣಾಮ ಬೀರುವುದರ ಜೊತೆಗೆ, ರಾಜತಾಂತ್ರಿಕ ಹಾಗೂ ಖಾಸಗಿ ಸಂವಾದ ನಡೆಸುವ ನಮ್ಮ ಸಾಮರ್ಥ್ಯಕ್ಕೆ ಅಡ್ಡಿಯುಂಟಾಗಿದೆ ಎಂದು ಅವರು ಮಂಗಳವಾರ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜವಾಬ್ದಾರಿಯುತ ಹಾಗೂ ಮುಕ್ತ ಸರ್ಕಾರಿ ವ್ಯವಸ್ಥೆಯನ್ನು ಅಮೆರಿಕಾ ಹಾಗೂ ಇತರೆಡೆಯಲ್ಲೂ ಇರಬೇಕು ಎಂದು ಅಧ್ಯಕ್ಷ ಒಬಾಮ ಬೆಂಬಲಿಸುತ್ತಾರೆ. ಆದರೆ, ಅಂಥ ಉದಾತ್ತವಾದ ಧ್ಯೆಯಗಳ ಮೇಲೆ ಈ ಬಗೆಯ ದುಸ್ಸಾಹಸದ ಹಾಗೂ ಅಪಾಯಾಕಾರಿ ಕೃತ್ಯಗಳು ತದ್ವಿರುದ್ಧ ಪರಿಣಾಮವನ್ನು ಉಂಟು ಮಾಡುತ್ತವೆ. ನಮ್ಮ ರಾಜತಾಂತ್ರಿಕ ಸಂವಹನ ಕ್ರಿಯೆಯ ಸಂರಕ್ಷಣೆಗೆ ಅಮೆರಿಕಾ ಸರ್ಕಾರ ಸದಾ ಬದ್ಧವಾಗಿರುತ್ತದೆ ಹಾಗೂ ಇಂಥ ಕೃತ್ಯಗಳಲ್ಲಿ ಭಾಗಿಯಾದವರ ಹೊಣೆ ನಿಗದಿ ಪಡಿಸಲು ತ್ವರಿತ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ಉಚ್ಚರಿಸಿದ್ದಾರೆ.
ಉಭಯ ಸಮ್ಮತವಾದ ಮೌಲ್ಯಗಳು ಹಾಗೂ ಸಮಾನ ಆಸಕ್ತಿಗಳ ಬಂಧ ಹೊಂದಿರುವ ಭಾರತ ಹಾಗೂ ಅಮೆರಿಕಾ ದೇಶಗಳ ನಡುವಿನ ಸಂಬಂಧವು 21ನೇ ಶತಮಾನದ ನಿರ್ಣಾಯಕ ಪಾಲುದಾರಿಕೆ ಎಂದು ಅಧ್ಯಕ್ಷ ಒಬಾಮಾ ಅವರ ಈಚಿನ ಭಾರತ ಭೇಟಿಯ ಸಂದರ್ಭದಲ್ಲಿ ಮರುಖಚಿತ ಪಡಿಸಿದ್ದರು ಎಂದು ತಿಮೋತಿ ತಿಳಿಸಿದ್ದಾರೆ.
ಭಾರತವು ಜಾಗತಿಕ ನಾಯಕನ ಪಾತ್ರ ವಹಿಸುವುದನ್ನು ಅಮೆರಿಕಾ ಸ್ವಾಗತಿಸುತ್ತದೆ. ಭಯೋತ್ಪಾದನೆ ನಿಗ್ರಹ, ನಮ್ಮ ಆಧಿಪತ್ಯದ ಕಡಲ ಕ್ಷೇತ್ರದ ರಕ್ಷಣೆಯೂ ಸೇರಿದಂತೆ ಸಮಾನ ಸವಾಲುಗಳನ್ನು ಜೊತೆಯಾಗಿ ಎದುರಿಸುವುದರ ಜೊತೆಗೆ, ವಿಶ್ವಾದ್ಯಂತ ಪ್ರಜಾತಾಂತ್ರಿಕ ಮೌಲ್ಯ, ರಾಜಕೀಯ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಶ್ರಮಿಸುವ ಭಾರತದ ದೃಷ್ಟಿಕೋನದ ಮಹತ್ವವನ್ನು ಅಮೆರಿಕಾ ಮನಗಂಡಿದೆ ಎಂದು ಅವರು ವಿವರಿಸಿದ್ದಾರೆ.












Click it and Unblock the Notifications