• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊಡಗಿನಲ್ಲಿ ಅಪರೂಪದ ಪುಷ್ಪೋದ್ಯಾನವನ

By * ಲವಕುಮಾರ್, ಮೈಸೂರು,
|
ಪುಷ್ಪೋದ್ಯಾನವನ ಎಂದಾಗ ಥಟ್ಟನೆ ನಮ್ಮ ಕಣ್ಮುಂದೆ ಬರುವುದು ಮೈಸೂರಿನ ಬೃಂದಾವನ ಅಥವಾ ಬೆಂಗಳೂರಿನ ಲಾಲ್‌ಬಾಗ್. ಆದರೆ ಕೊಡಗಿನಲ್ಲಿಯೂ ಸುಂದರವಾದ, ವೈಶಿಷ್ಟ್ಯಪೂರ್ಣವಾದ ಹವ್ಯಾಸದಿಂದ ನಿರ್ಮಾಣವಾದಂತಹ ಯೂಸೂಫ್ ಆಲಿಖಾನ್ ಮೆಮೋರಿಯಲ್ ಗಾರ್ಡನ್ ಷೋ ಎಂಬ ಖಾಸಗಿ ಪುಷ್ಪೋದ್ಯಾನವನವಿದೆ ಎಂಬುವುದು ಹೆಚ್ಚಿನವರಿಗೆ ತಿಳಿದಿಲ್ಲ. ಆದರೆ ಈ ಪುಷ್ಪೋದ್ಯನವನ ಕೊಡಗಿಗೊಂದು ಹೆಮ್ಮೆ ಎಂದರೆ ತಪ್ಪಾಗಲಾರದು.

ಮಡಿಕೇರಿಯಿಂದ ಕುಶಾಲನಗರದ ಕಡೆಗೆ ರಾಜ್ಯ ಹೆದ್ದಾರಿಯಲ್ಲಿ ಎಂಟು ಕಿ.ಮೀ ಸಾಗಿದರೆ ಬೋಯಿಕೇರಿ ಸಿಗುತ್ತದೆ. ಇಲ್ಲಿನ ಬಲ್ಯಾಟ್ರಿ ಎಸ್ಟೇಟ್‌ನಲ್ಲಿ ನಿರ್ಮಾಣಗೊಂಡಿದೆ ಯೂಸೂಫ್ ಆಲಿಖಾನ್ ಮೆಮೋರಿಯಲ್ ಗಾರ್ಡನ್ ಷೋ.

ಸುತ್ತಲೂ ಕಾಫಿ ತೋಟಗಳು, ದೂರದ ಬೆಟ್ಟಗಳು, ಹಸಿರು ಹಚ್ಚಡದ ಸುಂದರ ಪರಿಸರದಲ್ಲಿ ನಿರ್ಮಾಣಗೊಂಡಿರುವ ಈ ಪುಷ್ಪೋದ್ಯಾನವನ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆಯಲ್ಲದೆ, ಇದಕ್ಕೆ ಸುಮಾರು ಅರ್ಧ ಶತಮಾನಗಳನ್ನು ಪೂರೈಸಿದ ಇತಿಹಾಸವೂ ಇದೆ.

ತಂದೆಗೆ ತಕ್ಕ ಮಗ: ಹಾಗೆ ನೋಡಿದರೆ ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಹವ್ಯಾಸಗಳಿರುತ್ತವೆ. ಅದರಂತೆ ಮಾಜಿ ರಾಜ್ಯಸಭಾ ಸದಸ್ಯರಾಗಿದ್ದ ಎಫ್.ಎಂ.ಖಾನ್‌ರವರ ತಂದೆ ಯೂಸೂಫ್ ಆಲಿಖಾನ್‌ರವರು ಪುಷ್ಪಪ್ರೇಮಿಗಳಾಗಿದ್ದರು. ಹಾಗಾಗಿ ಅವರು ತಮ್ಮ ಮನೆಯ ಮುಂದಿನ ತೋಟದಲ್ಲಿ ಪುಷ್ಪೋದ್ಯನವನ ನಿರ್ಮಿಸಿ ಅದಕ್ಕೆ ವಿವಿಧ ಬಗೆಯ ಹೂಗಿಡಗಳನ್ನು ಸೇರಿಸುತ್ತಾ ಹೋದರು. ಹಾಗೆ ನಿರ್ಮಾಣಗೊಂಡ ಪುಷ್ಪೋದ್ಯಾನವನ ಇಂದು ಯೂಸೂಫ್ ಆಲಿಖಾನ್ ಮೆಮೋರಿಯಲ್ ಗಾರ್ಡನ್ ಷೋ ಎಂಬ ಹೆಸರಿನಿಂದ ಗಮನಸೆಳೆಯುತ್ತಿದೆ.

ಅವತ್ತು ತಂದೆ ನಿರ್ಮಿಸಿದ ಪುಷ್ಪೋದ್ಯಾನವನಕ್ಕೆ ಇಂದು ಮಗ ಎಫ್.ಎಂ.ಖಾನ್ ಅವರು ಹೊಸ ರೂಪ ನೀಡಿ ಮುಂದುವರೆಸಿಕೊಂಡು ಬಂದಿದ್ದಾರೆ. ನಾವು ಯೂಸೂಫ್ ಆಲಿಖಾನ್ ಮೆಮೋರಿಯಲ್ ಗಾರ್ಡನ್ ಷೋ ಒಳಗೆ ಕಾಲಿಟ್ಟಿದ್ದೇ ಆದರೆ ನಮಗೊಂದು ವಿಶಿಷ್ಟ ಅನುಭವವಾಗುತ್ತದೆ. ಏಕೆಂದರೆ ಇದೊಂದು ಸಾಧಾರಣ ಉದ್ಯಾನವನವಾಗಿರದೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಖ್ಯಾತಿಯ ವಿಶಿಷ್ಟ ಜಾತಿಯ ಪುಷ್ಪಗಿಡಗಳು ಈ ಉದ್ಯಾನವನದಲ್ಲಿ ಸ್ಥಾನಪಡೆದಿವೆ. ಇಲ್ಲಿ ವಿವಿಧ ಬಗೆಯ ಪುಷ್ಪಗಿಡಗಳು ಅರಳಿ ಕಂಗೊಳಿಸುವುದನ್ನು ನೋಡುವುದೇ ಮನಸ್ಸಿಗೆ ಮುದ ನೀಡುತ್ತದೆ.

ವೈವಿಧ್ಯತೆ ಕಣ್ಮನ ಸೆಳೆಯುತ್ತದೆ: ಕಣ್ಣು ಹಾಯಿಸಿದುದ್ದಕ್ಕೂ ಕಣ್‌ಸೆಳೆಯುವ ಬೇಲಿಗಿಡಗಳು, ಮೇಲೆ ಚಪ್ಪರದಲ್ಲಿ, ಕೆಳಗೆ ನೆಲದಲ್ಲಿ ಅರಳಿ ಕಂಗೊಳಿಸುವ ವಿವಿಧ ಬಗೆಯ ಪುಷ್ಪಗಿಡಗಳು, ಹಲವು ದಶಕಗಳನ್ನು ಸವೆಸಿದ ಕುಬ್ಜ ಬೋನ್ಸಾಯ್‌ಗಳು, ಮುಳ್ಳಿನ ಹೊದಿಕೆಯ ಕ್ಯಾಕ್ಟಸ್‌ಗಳು, ಮರಗಳಲ್ಲಿ, ಕುಂಡಗಳಲ್ಲಿ ನೇತಾಡುವ ಆರ್ಕಿಡ್ ಗಳು, ವಿವಿಧ ನಮೂನೆಯ ಎಲೆಗಿಡಗಳು, ಮನತಣಿಸುವ ಗುಲಾಬಿ, ಆಂಥೋರಿಯಂ ಹೀಗೆ ಒಂದೇ ಎರಡೇ ಲೆಕ್ಕಕ್ಕೆ ಸಿಗದಷ್ಟು ಹಲವು ವೈಶಿಷ್ಟ್ಯತೆಯಿಂದ ಕೂಡಿದ ರಾಷ್ಟ್ರೀಯ, ಅಂತರರಾಷ್ಟ್ರೀಯ ಉದ್ಯಾನವನಗಳಲ್ಲಷ್ಟೇ ಕಾಣಬಹುದಾದಂತಹ ಪುಷ್ಪಗಳು ಇಲ್ಲಿ ಅರಳಿ ನಮ್ಮನ್ನು ವಿಸ್ಮಯಗೊಳಿಸುತ್ತವೆ.

ಪುಷ್ಪೋದಾನವನದಲ್ಲಿ ಅದೆಷ್ಟು ಹೂಗಿಡಗಳು ಕಂಗೊಳಿಸುತ್ತವೆಯೆಂದರೆ, ಬಹುವಾರ್ಷಿಕ ಪುಷ್ಪಗಿಡಗಳಿಗೆ ಸೇರುವ ಪಿಂಕ್ಸ್, ಪ್ಲೋಕ್ಸ್, ಜೀನಿಯ, ಸಾಲ್ವಿಯಾ, ಜರ್ಬೆರಾ, ಪಿಟೋನಿಯಾ, ಕರ್ಣಕುಂಡಲ, ಕಾರ್ನೇಸನ್, ಜಿರಾನಿಯಂ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವುಗಳ ಜೊತೆಗೆ ಚಂದದ ಅಲೋಕೇಶಿಯಾ, ಫರ್ನ್, ಫಾಮ್ಸ್, ಕ್ಯಾಕ್ಟಸ್, ಸೆಕ್ಯುಲೆಂಟ್ಸ್, ಡ್ರಸೀನ, ಮರಾಂಟ ಮುಂತಾದ ಎಲೆಗಿಡಗಳೂ ಇಲ್ಲಿ ಕಾಣಸಿಗುತ್ತವೆ.

ಈ ಪುಷ್ಪೋದ್ಯಾನವನದಲ್ಲಿ ಕಾಣುವ ಪ್ರಮುಖ ವೈಶಿಷ್ಟ್ಯವೆಂದರೆ, ಸುಮಾರು 50 ವರ್ಷಕ್ಕೂ ವಯಸ್ಸಾದ ಕ್ಯಾಕ್ಟಸ್. ಇದು ಸುಮಾರು 20 ಅಡಿಗಿಂತಲೂ ಹೆಚ್ಚು ಎತ್ತರವಿದ್ದು, ದೊಡ್ಡ ಗಾತ್ರವನ್ನು ಹೊಂದಿದೆ. ಈ ಗಿಡದ ಸುತ್ತಲೂ ವಿವಿಧ ಜಾತಿಯ ಹೂಗಿಡಗಳನ್ನು ನೆಡಲಾಗಿದ್ದು ಅರಳಿ ಕಂಗೊಳಿಸುತ್ತವೆ. ಭವ್ಯ ಮನೆಯ ಜಗುಲಿ, ಮೆಟ್ಟಿಲುಗಳಲ್ಲಿ ಹೂಕುಂಡವನ್ನಿರಿಸಲಾಗಿದ್ದು, ಈ ಹೂಕುಂಡಗಳಲ್ಲಿ ಬಗೆಬಗೆಯ ಪುಷ್ಪಗಿಡಗಳು, ಎಲೆಗಿಡಗಳನ್ನು ನೆಡಲಾಗಿದೆ. ಮರದಲ್ಲಿ ನೇತಾಡುವ ಡಬ್ಬಗಳಲ್ಲಿ ಹಲವು ಬಗೆಯ ಹೂಗಳು ಅರಳಿ ಕಂಗೊಳಿಸುತ್ತವೆ.

ಪುಷ್ಪೋದ್ಯಾನವನದಲ್ಲಿ ಕೆಂಪು ಹಳದಿ ಮಿಶ್ರಿತ ಲೇಡಿಸ್ ಶೂ, ಆನೆ ಕಿವಿಯಾಕಾರದ ಆಂಥೋರಿಯಂ, ಸುವಾಸನೆ ರಹಿತ ಕಾಕ್ಸ್ ಕೂಂಬ್, ಸಿಲೋಸಿಯಾ, ಪಿಜೂನಿಯ, ಸ್ಟಾಕ್, ಸಾಲ್ವಿಯಗಳು, ಮುಂಜಾನೆ ಅರಳಿ ಸಂಜೆ ಮುದುಡುವ ಸ್ಕಾರ್ಚಿಯ, ಚೆಂಡು ಹೂ, ನಾನಾ ಬಗೆಯ, ನಾನಾ ಬಣ್ಣದ ಗುಲಾಬಿಗಳು, ಕಳೆದ ಹಲವು ವರ್ಷಗಳಿಂದ ಬೆಳೆಯಲಾಗದೆ ಕುಬ್ಜವಾಗಿಯೇ ಉಳಿದಿರುವ ಬೋನ್ಸಾಯ್‌ಗಳು. ಸೈಕಾಸ್ ಪಾಮ್‌ಗಳು, ಬೇಲಿಗಿಡಗಳು ಮನಸ್ಸೆಳೆಯುತ್ತವೆ.

ಪುಷ್ಪೋದ್ಯಾನವನದ ನಡುವೆ ಕಾರಂಜಿಯಿದ್ದು, ಇದರ ಸುತ್ತಲೂ ಬಗ್ಗಿ ಕಾರಂಜಿಯನ್ನೇ ನೋಡುತ್ತಿರುವ ಶಿಲಾ ಬಾಲಕರು ಕಂಡು ಬರುತ್ತಾರೆ. ಈ ಕಾರಂಜಿಯ ಸುತ್ತಲೂ ಬಗೆಬಗೆಯ ಹೂವುಗಳು ಅರಳಿ ಕಂಗೊಳಿಸುತ್ತವೆ.

ಸ್ವದೇಶಿ, ವಿದೇಶಿ ಪುಷ್ಪಗಿಡಗಳನ್ನು ಹೊಂದಿರುವ ಪುಷ್ಪೋದ್ಯಾನವನಕ್ಕೆ ಈಗಾಗಲೇ ನೂರಾರು ಸಂಖ್ಯೆಯ ಸ್ವದೇಶಿ, ವಿದೇಶಿ ಪ್ರವಾಸಿಗರು ಭೇಟಿ ನೀಡಿ ಹೋಗಿದ್ದಾರೆ. ಅದರಲ್ಲೂ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ, ಐ.ಕೆ.ಗುಜ್ರಾಲ್ ಸೇರಿದಂತೆ ಹಲವಾರು ಗಣ್ಯರು ಇಲ್ಲಿಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರೆ ಈ ಪುಷ್ಪೋದ್ಯಾನವನದ ಮಹತ್ವ ಅರಿವಾಗುತ್ತದೆ.

ಕೆಲವು ವರ್ಷಗಳ ಹಿಂದೆ ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಎರಡು ದಿನಗಳ ಕಾಲ ಉದ್ಯಾನವನವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿದ್ದರು. ಆ ನಂತರ ಕಾರಣಾಂತರದಿಂದ ನಿಲ್ಲಿಸಿದ್ದರಾದರೂ ಕಳೆದ ಎರಡು ವರ್ಷಗಳಿಂದ ಮತ್ತೆ ಅವಕಾಶ ಮಾಡಿಕೊಟ್ಟಿದ್ದಾರೆ. ಹಲವು ಕಡೆಗಳಲ್ಲಿ ನಡೆದ ಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಿರುವ ಎಫ್.ಎಂ.ಖಾನ್‌ರವರು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪುಷ್ಪ ಕೃಷಿಯಲ್ಲಿ ಒಲವು ಹೊಂದಿರುವ ಖಾನ್‌ರವರು ಇತ್ತೀಚಿನ ದಿನಗಳಲ್ಲಿ ವಿವಿಧ ಹೂಗಳಿಗೆ ಬೇಡಿಕೆಯಿರುವುದರಿಂದ ಪುಷ್ಪ ಕೃಷಿಯನ್ನು ಕೊಡಗಿನಲ್ಲಿ ಕೈಗೊಂಡರೆ ಒಂದಷ್ಟು ಆದಾಯ ಪಡೆಯಬಹುದೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Yusuf Ali Khan Memorial Garden Show in Balyatri Estate Boikere off Madikere-Kushalanagara road in Kodagu is a unique flower garden. It is a private garden of FM Khan who sees floriculture boom in Karnataka in coming years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more