ಕೆಎಸ್ ಸಿಎ : ಕುಂಬ್ಳೆ ಒಡೆಯರ್ ನಡುವೆ ಕುಸ್ತಿ

ಭಾನುವಾರ ಹೊಸ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಎರಡು ಬಣಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಅನಿಲ್ ಕುಂಬ್ಳೆ ಬಣ ಒಂದೆಡೆಯಾದರೆ, ಹಾಲಿ ಅಧ್ಯಕ್ಷ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಣ ಮತ್ತೊಂದೆಡೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕುಂಬ್ಳೆ ಪಾಲಿಗೆ ಒಡೆಯರ್ ಅತ್ಯಂತ ಕಠಿಣ ಎದುರಾಳಿಯೇ ಅಗಿದ್ದಾರೆ.
ಈಗಾಗಲೇ ಒಂದು ಅವಧಿ ಪೂರೈಸಿರುವ ಒಡೆಯರ್, ಮಗದೊಮ್ಮೆ ಆಯ್ಕೆ ಬಯಸಿ ಅಧ್ಯಕ್ಷ ಗಾದಿಗೆ ಸ್ಪರ್ಧೆಗಿಳಿದಿದ್ದಾರೆ. ಹೀಗಾಗಿ ಅಧ್ಯಕ್ಷ ಗಾದಿಗೆ ಕುಂಬ್ಳೆ ಮತ್ತು ಒಡೆಯರ್ ಮಧ್ಯೆ ತೀವ್ರ ಹಣಾಹಣಿ ಏರ್ಪಟ್ಟಿದ್ದು ಯಾರು ಗೆಲ್ಲುತ್ತಾರೆ ಎಂದು ಹೇಳುವುದು ಕಷ್ಟವಾಗಿದೆ. ಉಳಿದಂತೆ ಕಾರ್ಯದರ್ಶಿ ಸ್ಥಾನಕ್ಕೆ ಭಾರತ ತಂಡದ ಮತ್ತೊಬ್ಬ ಮಾಜಿ ಆಟಗಾರ, ಮೈಸೂರು ಎಕ್ಸ್‌ಪ್ರೆಸ್ ಖ್ಯಾತಿಯ ಜಾವಗಲ್ ಶ್ರೀನಾಥ್, ಕುಂಬ್ಳೆ ಬಣದಿಂದ ನಿಂತಿದ್ದಾರೆ. ಇವರಿಗೆ ಪ್ರತಿಸ್ಪಧಿಯಾಗಿರುವುದು ಒಡೆಯರ್ ಬಣದ ಎ.ವಿ. ಜಯಪ್ರಕಾಶ್.
ಜಯಪ್ರಕಾಶ್ ಕೂಡ ಅಂತಾರಾಷ್ಟ್ರೀಯ ಅಂಪೈರ್ ಅಗಿ ಸೇವೆ ಸಲ್ಲಿಸಿದ ಅನುಭವಿ. ಹೀಗಾಗಿ ಈ ಇಬ್ಬರ ಮಧ್ಯೆಯೂ ಕಾರ್ಯದರ್ಶಿ ಸ್ಥಾನಕ್ಕೆ ಉತ್ತಮ ಪೈಪೋಟಿ ಎದುರಾಗುವ ಸಾಧ್ಯತೆಯಿದೆ. ಉಳಿದಂತೆ ಭಾರತ ತಂಡದ ಮಾಜಿ ಆಟಗಾರರಾದ ರೋಜರ್ ಬಿನ್ನಿ, ವೆಂಕಟೇಶ್ ಪ್ರಸಾದ್, ವಿಜಯ್ ಭಾರದ್ವಾಜ್ ಮತ್ತು ಸುಜಿತ್ ಸೋಮ್ ಸುಂದರ್ ಸಹ ಕುಂಬ್ಳೆ ಬಣದಿಂದ ವಿವಿಧ ಸ್ಥಾನಗಳಿಗೆ ಸ್ಪರ್ಧಿಸಿದ್ದಾರೆ.
ಅದೇ ರೀತಿ ಮತ್ತೊಬ್ಬ ಮಾಜಿ ಆಟಗಾರ ಸಂಜಯ್ ದೇಸಾಯಿ ಅಲ್ಲದೇ ಡಾ. ಎಸ್. ಕೃಷ್ಣಮೂರ್ತಿ, ಎ.ಪಿ. ಆಚಾರ್ಯ ಒಡೆಯರ್ ಬಣದಲ್ಲಿನ ಇತರೆ ಪ್ರಮುಖರು. ಒಡೆಯರ್ ತಮ್ಮ ಮೂರು ವರ್ಷಗಳ ಮೊದಲ ಅವಧಿಯಲ್ಲಿನ ಸಾಧನೆಗಳನ್ನೇ ಮುಂದಿಟ್ಟುಕೊಂಡು ಚುನಾವಣಾ ಅಖಾಡದಲ್ಲಿ ನಿಂತಿದ್ದರೆ, ಕೆಎಸ್‌ಸಿಎಯನ್ನು ವಿಶ್ವಮಟ್ಟದಲ್ಲಿ ಕೊಂಡೊಯ್ಯುವ ಗುರಿಯೊಂದಿಗೆ ಕುಂಬ್ಳೆ ಮತದಾರರ ಬಳಿ ಬಂದಿದ್ದಾರೆ.
ಒಟ್ಟು 24 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ಆದರೆ ಈಗಾಗಲೇ ಮಂಗಳೂರು ವಲಯದಿಂದ ದಕ್ಷಿಣ ಕನ್ನಡ ಕ್ರಿಕೆಟ್ ಸಂಸ್ಥೆ ಅವಿರೋಧವಾಗಿ ಆಯ್ಕೆಗೊಂಡಿದೆ. ಹಾಗಾಗಿ ನಾಳೆ ಉಳಿದ 23 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಲಿದೆ. ಒಟ್ಟು 1489 ಮತದಾರರು ಮತ ಚಲಾಯಿಸಲಿದ್ದಾರೆ. ಈ ಪೈಕಿ ಆಜೀವ ಸದಸ್ಯರು 1260 ಮಂದಿ ಇದ್ದರೆ, 229 ಕ್ಲಬ್ ಪ್ರತಿನಿಧಿಗಳು ಮತ ಚಲಾವಣೆ ಮಾಡಲಿದ್ದಾರೆ.












Click it and Unblock the Notifications