ಬಿಜೆಪಿ ಕ್ಯಾನ್ಸರ್ ನಿಂದ ಬಳಲುತ್ತಿದೆ : ಪೂಜಾರಿ

ನಗರದ ಪ್ರೆಸ್‌ಕ್ಲಬ್ ನಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರ ಭ್ರಷ್ಟಾಚಾರದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಂತಾಜನಕ ಸ್ಥಿತಿಗೆ ತಲುಪಿದೆ ಎಂದರು. ಬಿಜೆಪಿ ರಾಷ್ಟ್ರೀಯ ನಾಯಕರಾದ ಎಲ್ ಕೆ ಅಡ್ವಾಣಿ, ಸುಷ್ಮಾ ಸ್ವರಾಜ್, ಅರುಣ್‌ಜೇಟ್ಲಿ ಹಾಗೂ ನಿತಿನ್ ಗಡ್ಕರಿ ಅವರು ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳಿಗೆ ವೌಲ್ಯಗಳನ್ನು ಬೋಧಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ತಮ್ಮ ಪಕ್ಷದಲ್ಲಿನ ಕರ್ಮಕಾಂಡದ ಕುರಿತು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಬಿಜೆಪಿಯಲ್ಲಿ ಒಬ್ಬರಾದರೂ ಗಂಡಸರಿಲ್ಲವೆ. ಹಗರಣಗಳ ಸರಮಾಲೆಯನ್ನೆ ಹೊಂದಿರುವ ಬಿಜೆಪಿ ಸರಕಾರದಲ್ಲಿ ಸ್ವತಃ ಮುಖ್ಯಮಂತ್ರಿಯೇ ಭೂ ಹಗರಣದಲ್ಲಿ ಶಾಮೀಲಾಗಿದ್ದಾರೆ. ಈ ಭ್ರಷ್ಟ ಸರಕಾರದಲ್ಲಿ ಅಧಿಕಾರದ ದುರುಪಯೋಗ, ಸ್ವಜನ ಪಕ್ಷಪಾತ, ಭೂಕಬಳಿಕೆ, ಡಿ-ನೋಟಿಫಿಕೇಷನ್ ನಂತಹ ಹಗರಣಗಳ ಕುರಿತು ಮಾಧ್ಯಮಗಳು ದಾಖಲೆ ಸಮೇತ ಬಹಿರಂಗಪಡಿಸಿವೆ. ಯಡಿಯೂರಪ್ಪ ತಲೆ ದಂಡಕ್ಕೆ ಬಿಜೆಪಿ ಮುಂದಾಗಿಲ್ಲ ಏಕೆ ಎಂದು ಅವರು ಪ್ರಶ್ನಿಸಿದರು.
ಸಂಸತ್ತಿನ ಒಳಗೆ-ಹೊರಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಅಶೋಕ್ ಚವಾಣ್‌ನ ಆದರ್ಶ ವಸತಿ ಹಗರಣದ ಹಿನ್ನೆಲೆಯಲ್ಲಿ ಅವರ ಪದತ್ಯಾಗಕ್ಕೆ ಆಗ್ರಹಿಸಿ ಭಾರಿ ಗದ್ದಲವನ್ನು ಏರ್ಪಡಿಸಿದರು. ಆದರೆ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಸಂಪುಟದ ಸಹೋದ್ಯೋಗಿಗಳು, ಅವರ ಮಕ್ಕಳು ಭೂ ಕಬಳಿಕೆ ಸೇರಿದಂತೆ ಇತರ ಭ್ರಷ್ಟಾಚಾರದಲ್ಲಿ ತೊಡಗಿದ್ದರು. ಅವರ ವಿರುದ್ಧ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ನಾಯಕರ ವಿರುದ್ಧ ಪೂಜಾರಿ ಹರಿಹಾಯ್ದರು.












Click it and Unblock the Notifications