ಸಾಮ್ರಾಟ್ ಅಶೋಕ್ ಸುತ್ತ ವಿವಾದದ ಹುತ್ತ

ಬೆಂಗಳೂರು ಉತ್ತರ ತಾಲ್ಲೂಕು ರಾಜಮಹಲ್ ವಿಲಾಸ್ ದ ಎರಡನೇ ಹಂತದ ಪಕ್ಕದಲ್ಲಿರುವ ಲೊಟ್ಟೆಗೊಳ್ಳಹಳ್ಳಿಯ ಸರ್ವೆ ನಂಬರ್ 10/1 ಮತ್ತು 10/11F ರಲ್ಲಿರುವ ಎರಡು ಬಿಡಿಎ ಜಾಗಗಳನ್ನು ಸಚಿವ ಅಶೋಕ್ ಖರೀದಿಸಿದ್ದಾರೆ. 2003ರಲ್ಲಿ ಈ ಜಾಗವನ್ನು ಮಾಲೀಕರಿಂದ ಖರೀದಿಸಿದ ನಂತರ 2009ರ ಡಿಸೆಂಬರ್ ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮೂಲಕ ಡಿನೋಟಿಪೈ ಮಾಡಿಸಿಕೊಂಡಿದ್ದಾರೆ ಎಂದು ಟಿವಿ9 ವರದಿ ಮಾಡಿದೆ.
1988, ಏಪ್ರಿಲ್ 23 ರಂದು ಒಟ್ಟು 18 ಗುಂಟೆ ಜಾಗವನ್ನು ಬಿಡಿಎ ನೋಟಿಪೈ ಮಾಡಿಕೊಳ್ಳುತ್ತದೆ. ಅದರಲ್ಲಿ 10/1 ಸರ್ವೆ ನಂಬರಿನ ಜಾಗವೂ ಕೂಡಾ ಸೇರಿದೆ. ಜೊತೆಗೆ 1992 ಫೆಬ್ರವರಿ 13 ರಂದು ಬಿಡಿಎ 1 ಎಕರೆ 3 ಗುಂಟೆ ನೋಟಿಪೈ ಮಾಡಿದೆ. ಇದರಲ್ಲಿ 10/11F ಸರ್ವೆ ನಂಬರಿನ ಜಾಗವನ್ನು ಅಶೋಕ್ ಖರೀದಿಸುವ ಮೂಲಕ ಕಾನೂನನ್ನು ಗಾಳಿಗೆ ತೂರಿದ್ದಾರೆ ಎಂಬ ಆರೋಪ ಬೆಳಕಿಗೆ ಬಂದಿದೆ.
ಸಚಿವ ಅಶೋಕ್ ಲೊಟ್ಟೆಗೊಳ್ಳಹಳ್ಳಿಯಲ್ಲಿರುವ ಬಿಡಿಎ ಜಾಗಕ್ಕೆ ಅಂದು ನೀಡಿರುವ ಹಣ ಕೇವಲ 44 ಲಕ್ಷ ರುಪಾಯಿ. ಆದರೆ, ಈ ಜಾಗಕ್ಕೆ ಇಂದಿನ ಮಾರುಕಟ್ಟೆ ಬೆಲೆ ಬರೋಬ್ಬರಿ 15 ಕೋಟಿ ರುಪಾಯಿಗಳು ಎಂದು ಅಂದಾಜಿಸಲಾಗಿದೆ. ಬಿಡಿಎ ಭೂಮಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅಕ್ರಮವಾಗಿ ಡಿನೋಟಿಪೈ ಮಾಡಿ ತಮ್ಮ ಮಕ್ಕಳಿಗೆ ನೀಡಿದ್ದಾರೆ ಎನ್ನುವ ಆರೋಪವೂ ಇದೆ.
ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹೆಸರು ಕೂಡಾ ಈ ಹಗರಣದಲ್ಲಿ ಪ್ರಮುಖವಾಗಿ ಕೇಳಿ ಬಂದಿತ್ತು. ಇದೇ ಕಾರಣಕ್ಕೆ ಸಚಿವ ಕಟ್ಟಾ ಮಗ, ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್ ಅವರು ಸಾಕ್ಷಿದಾರರಿಗೆ ಹಣ ನೀಡಲು ಹೋಗಿ ಲೋಕಾಯುಕ್ತರ ಕೈಗೆ ಸಿಕ್ಕಿ ಬಿದ್ದು ಜೈಲು ಪಾಲಾಗಿ ನಂತರ ಜಾಮೀನನ ಮೇಲೆ ಹೊರಬಂದಿದ್ದು ಗೊತ್ತಿರುವ ಸಂಗತಿ.
ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಅಶೋಕ್, ಕಾನೂನು ಪ್ರಕಾರ ಜಾಗವನ್ನು ಮಾಲೀಕರಿಂದ ಖರೀದಿಸಲಾಗಿದೆ. ಈ ಬಗ್ಗೆ ಸೂಕ್ತ ದಾಖಲೆಗಳು ಇವೆ. ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸಕ್ಕೆ ಕೆಲವರು ಕೈ ಹಾಕಿದ್ದಾರೆ. ಈ ಬಗ್ಗೆ ವಿಧಾನಸಭೆಯಲ್ಲಿ ಉತ್ತರ ನೀಡಲು ಸಿದ್ಧ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಸೇರಿದಂತೆ ಎಲ್ಲ ಮಂತ್ರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿ ಅರಾಜಕತೆ ಮನೆ ಮಾಡಿದೆ. ಸರಕಾರ ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಕಿಡಿಕಾರಿದ್ದಾರೆ.












Click it and Unblock the Notifications