ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಶಾಸಕರಿಂದ ತಾಯಿ ದ್ರೋಹ : ದೇಶಪಾಂಡೆ

By Mrutyunjaya Kalmat
|
Google Oneindia Kannada News

RV Deshpande
ಬೆಂಗಳೂರು, ಅ. 21 : ಬಿಜೆಪಿಯ ಆಪರೇಷನ್ ಕಮಲಕ್ಕೆ ಬೆಚ್ಚಿಬಿದ್ದಿರುವ ರಾಜ್ಯ ಕಾಂಗ್ರೆಸ್ ನಾಯಕರು ದಿಕ್ಕು ತಿಳಿಯದಂತಾಗಿ ಹೋಗಿದ್ದಾರೆ. ಬುಧವಾರವಷ್ಟೇ ಜಗಳೂರಿನ ಕಾಂಗ್ರೆಸ್ ವಿಕೆಟ್ ಪತನಗೊಂಡ ನಂತರ ಇಂದು ಬಂಗಾರಪೇಟೆ ಶಾಸಕ 'ಕೈ'ಕೊಟ್ಟಿದ್ದರಿಂದ ಕಾಂಗ್ರೆಸ್ ನಾಯಕರ ಸ್ಥಿತಿ ಬಡವನ ಕೋಪ ದಡೆಗೆ ಮೂಲ ಎಂಬಂತಾಗಿದೆ.

ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಪರಿಷತ್ ನಾಯಕಿ ಮೋಟಮ್ಮ, ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ, ಸ್ಪೀಕರ್, ಬಿಜೆಪಿ ಮತ್ತು ಮುಖ್ಯಮಂತ್ರಿಗಳ ವಿರುದ್ದ ಮನಸ್ಸಿಗೆ ಬಂದಂತೆ ವಾಗ್ದಾಳಿ ನಡೆಸಿದರು. ನಿನ್ನೆಯಷ್ಟೇ ಜಗಳೂರಿನ ಕಾಂಗ್ರೆಸ್ ಶಾಸಕ ಎಸ್ ವಿ ರಾಮಚಂದ್ರ ಮತ್ತು ಇಂದು ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಅವರನ್ನು ಆಪರೇಷನ್ ಕಮಲ ಮೂಲಕ ರಾಜೀನಾಮೆ ಕೊಡಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಈ ನಾಯಕರು ಸ್ಪೀಕರ್ ಕ್ರಮವನ್ನು ಖಂಡಿಸಿದರು.

ಸ್ಪೀಕರ್ ಕೆಜಿ ಬೋಪಯ್ಯ ಅವರು ಬಿಜೆಪಿ ಏಜೆಂಟ್ ರಂತೆ ವರ್ತಿಸುತ್ತಿದ್ದಾರೆ. ಸ್ಪೀಕರ್ ಕಚೇರಿಯನ್ನು ಬಿಜೆಪಿ ಕಚೇರಿಯನ್ನಾಗಿ ಪರಿವರ್ತಿಸಿದ್ದಾರೆ. ಸ್ಪೀಕರ್ ಅಧಿಕಾರ ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ಶಾಸಕರ ರಾಜೀನಾಮೆಯನ್ನು ಪಡೆದುಕೊಂಡಿದ್ದಾರೆ ಎಂದು ದೇಶಪಾಂಡೆ ಆಕ್ರೋಶ ವ್ಯಕ್ತಪಡಿಸಿದರು. ತಾಯಿ ದ್ರೋಹ ಮಾಡಿದ ಈ ಇಬ್ಬರು ಶಾಸಕರ ಎಂದಿಗೂ ಉದ್ಧಾರ ಆಗಲ್ಲ ಎಂದು ಭವಿಷ್ಯ ನುಡಿದ ಅವರು, ತಕ್ಷಣಕ್ಕೆ ಜಾರಿಗೆ ಬರುವಂತೆ ಇವರಿಬ್ಬರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಅಮಾನತು ಮಾಡಲಾಗಿದೆ ಎಂದರು.

ಯಡಿಯೂರಪ್ಪ ವಾಮಮಾರ್ಗದ ಮೂಲಕ ಅಧಿಕಾರ ನಡೆಸುತ್ತಿದ್ದಾರೆ. ಇದು ಬಹಳ ದಿನಗಳ ನಡೆಯುವುದಿಲ್ಲ. ರಾಜ್ಯಪಾಲರಿಗೆ ಸರಕಾರದ ಆಪರೇಷನ್ ಕಮಲದ ಸಂಪೂರ್ಣ ಮಾಹಿತಿಯನ್ನು ನೀಡುವುದಲ್ಲದೆ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮನವಿ ಮಾಡಲಾಗುವುದು. ಜೊತೆಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದರಿಂದ ರಾಜ್ಯಪಾಲರ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಬೇಕು ಎಂದು ಮನವಿ ಮಾಡಿಕೊಳ್ಳುವುದಾಗಿ ದೇಶಪಾಂಡೆ ಹೇಳಿದರು.

ಇದೀಗ ಬಂದಿರುವ ಸುದ್ದಿಯ ಪ್ರಕಾರ ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದಿಂದ ಇನ್ನೂ ಇಬ್ಬರು ಕಾಂಗ್ರೆಸ್ ಶಾಸಕರು ಬಿಜೆಪಿಯ ಆಪರೇಷನ್ ಕಮಲಕ್ಕೆ ಬಲಿಯಾಗಲಿದ್ದಾರೆ ಎಂದು ಸುವರ್ಣ ವಾರ್ತಾವಾಹಿನಿ ಸಂಜೆ 6.30ಕ್ಕೆ ಪ್ರಸಾರ ಮಾಡಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಪ್ರಕಾರ 8 ರಿಂದ 10 ಶಾಸಕರು ಆಪರೇಷನ್ ಕಮಲಕ್ಕೆ ಬಲಿಯಾಗಲಿದ್ದಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X