ತಮಿಳುನಾಡು : ಅರ್ಚಕರಿಗೆ ಉಚಿತ ಸೈಕಲ್ ವಿತರಣೆ

ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಸೋಮವಾರ ಅರ್ಚಕರಿಗೆ ಉಚಿತ ಸೈಕಲ್ ಯೋಜನೆಗೆ ಚಾಲನೆ ನೀಡಿದರು. ಅರ್ಚಕರಿಗೆ ಉಚಿತವಾಗಿ ಸೈಕಲ್ ವಿತರಣೆಗಾಗಿ ಸರಕಾರ 2.78 ಕೋಟಿ ರುಪಾಯಿ ಯೋಜನೆಯನ್ನು ತಮಿಳುನಾಡು ಸರಕಾರ ಆರಂಭಿಸಿದೆ.
ಈ ಯೋಜನೆಯಲ್ಲಿ ರಾಜ್ಯದ ಸುಮಾರು 10,000 ಅರ್ಚಕರು ಪ್ರಯೋಜನ ಪಡೆಯಲಿದ್ದಾರೆ. ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಈ ವರ್ಷದ ಬಜೆಟ್ ನಲ್ಲಿ ತಿಳಿಸಲಾಗಿರುವಂತೆ, ಈ ಯೋಜನೆಗೆ ಕರುಣಾನಿಧಿ ಸೋಮವಾರ ಚಾಲನೆ ನೀಡಿದ್ದಾರೆ. ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಕರುಣಾನಿಧಿ ಕಟ್ಟುನಿಟ್ಟಿನ ಆದೇಶ ಜಾರಿಗೊಳಿಸಿದ್ದಾರೆ. ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಚಿಪುರಂ, ವೆಲ್ಲೂರಿನ ಸುಮಾರು 200 ಮಂದಿ ಅರ್ಚಕರಿಗೆ ಉಚಿತ ಸೈಕಲ್ ವಿತರಿಸಲಾಯಿತು.
ರಾಜ್ಯಾದ್ಯಂತ ಈ ಯೋಜನೆಯನ್ನು ಹಂತಹಂತವಾಗಿ ಜಾರಿಗೊಳಿಸಲಾಗುವುದು ಎಂದು ಕರುಣಾನಿಧಿ ಭರವಸೆ ನೀಡಿದ್ದಾರೆ. ಕಾನೂನು ಸಚಿವ ದುರೈ ಮುರುಗನ್, ಮಾನವ ಸಂಪನ್ಮೂಲ ಅಭಿವದ್ಧಿ ಸಚಿವ ಪೆರಿಯ ಕರುಪ್ಪನ್ ಮತ್ತು ಹಿರಿಯ ಸರಕಾರಿ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಸುಮಾರು ಏಳು ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್ ವಿತರಣೆ ಮಾಡಿದೆ. ಮುಂದಿನ ಬಜೆಟ್ ನಲ್ಲಿ ಕರ್ನಾಟಕದ ಅರ್ಚಕರಿಗೆ ಉಚಿತ ಸೈಕಲ್ ಹತ್ತುವ ಯೋಗ ಕೂಡಿಬಂದರೂ ಅಚ್ಚರಿಯಿಲ್ಲ.












Click it and Unblock the Notifications