ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6 ಮತದಿಂದ ವಿಶ್ವಾಸಮತ ಗೆದ್ದ ಯಡಿಯೂರಪ್ಪ

By Mrutyunjaya Kalmat
|
Google Oneindia Kannada News

Yeddyurappa
ಬೆಂಗಳೂರು, ಅ. 14 : ಕೊನೆಗೂ ಯಡಿಯೂರಪ್ಪ ನೇತೃತ್ವದ ದಕ್ಷಿಣ ಭಾರತದ ಮೊಟ್ಟಮೊದಲ ಬಿಜೆಪಿ ಸರಕಾರ ಕೇವಲ ಮೂರು ದಿನದ ಅಂತರದಲ್ಲಿ ನಡೆದ ಎರಡನೇ ಬಾರಿಯ ವಿಶ್ವಾಸಮತದಲ್ಲಿ 6 ಮತಗಳಿಂದ ಮತ್ತೊಮ್ಮೆ ಜಯಭೇರಿ ಬಾರಿಸಿತು. 106 ಮತಗಳನ್ನು ಗಳಿಸುವ ಮೂಲಕ ಬಿಜೆಪಿ ಸರಕಾರ ಗೆಲುವಿನ ನಗೆಕೇಕೆ ಹಾಕಿದರೆ, ಕೇವಲ 100 ಮತಗಳನ್ನು ಪಡೆಯುವ ಮೂಲಕ ವಿರೋಧ ಪಕ್ಷ ಸೋಲನುಭವಿಸಿ ಮುಖಭಂಗಕ್ಕೀಡಾಯಿತು.

ಪಕ್ಷೇತರ ಸದಸ್ಯರ ಅನರ್ಹ ಕುರಿತು ಅ.18ರಂದು ಹೈಕೋರ್ಟ್ ಅಂತಿಮ ತೀರ್ಪ ನೀಡಲಿದೆ. ಆನಂತರ ವಿಶ್ವಾಸಮತ ಯಾಚನೆ ಮಾಡಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾಡಿಕೊಂಡ ಮನವಿಯನ್ನು ಸ್ಪೀಕರ್ ತಿರಸ್ಕರಿಸಿದರು. ಹೀಗಾಗಿ ತಲೆ ಎಣಿಕೆಗೆ ಸಭಾಧ್ಯಕ್ಷ ಕೆಜಿ ಬೋಪಯ್ಯ ಸೂಚಿಸಿದರು. ಮೊದಲು ಆಡಳಿತ ಪಕ್ಷದ ತಲೆ ಎಣಿಕೆ ಮಾಡಿದರೆ, ನಂತರ ವಿರೋಧ ಪಕ್ಷಗಳ ತಲೆ ಎಣಿಕೆ ಮಾಡಲಾಯಿತು.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಶಾಸಕ ಈಶಣ್ಣ ಗುಳಗಣ್ಣವರ ಅವರು ಅನಾರೋಗ್ಯದಿಂದ ಬಳಲುತ್ತಿದ್ದರೂ ಸಹ ಇಂದು ಸದನಕ್ಕೆ ಆಗಮಿಸಿ ಬಿಜೆಪಿ ಪರ ಮತ ನೀಡಿದ್ದು ವಿಶೇಷವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಈಶಣ್ಣ ಅವರು ಅನಾರೋಗ್ಯ ಪೀಡಿತರಾಗಿದ್ದು, ಅವರು ದೈಹಿಕ ಹಾಗೂ ಮಾನಸಿಕವಾಗಿ ಮತ ಚಲಾಯಿಸಲು ಶಕ್ತರಿಲ್ಲ ಎಂದು ಸದನದಲ್ಲಿ ಪ್ರತಿಪಾದಿಸಿದರು.

ಆದರೆ, ಸದನದಲ್ಲಿ ಖುದ್ದು ಹಾಜರಿದ್ದ ಈಶಣ್ಣ ಅವರು ತಾವು ಒಂದು ತಿಂಗಳಿನಿಂದ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಆದರೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಡವಾಗಿದ್ದೇನೆ ಎಂದು ಸಲ್ಲಿಸಿದ್ದ ಪ್ರಮಾಣ ಪತ್ರವನ್ನು ಸ್ಪೀಕರ್ ಸದನದಲ್ಲಿ ಓದಿದರು. ಲಿಂಗಸೂಗೂರು ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಮತ್ತು ಜೆಡಿಎಸ್ ನ ಚೆನ್ನಪಟ್ಟಣದ ಶಾಸಕ ಎಂ ಸಿ ಆಶ್ವಥ್ ಗೈರುಹಾಜರಾಗಿರುವುದು ಮಾತ್ರ ಎದ್ದು ಕಂಡಿತು. ಸದನವನ್ನು ಸ್ಪೀಕರ್ ಬೋಪಯ್ಯ ಅವರು ಅನಿರ್ದಿಷ್ಟ ಕಾಲಾವಧಿವರೆಗೆ ಮುಂದೂಡಿದರು.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X