ಶಾಸಕರ ಅನರ್ಹತೆ ಬಗ್ಗೆ ಹೈಕೋರ್ಟ್ ಏನು ಹೇಳ್ತು?

ಮುಖ್ಯ ನಾಯಮೂರ್ತಿ ಜೆಎಸ್ ಖೇಹರ್ ಮತ್ತು ನ್ಯಾ. ಎನ್ ಕುಮಾರ್ ಅವರನ್ನೊಳಗೊಂಡ 1ನೇ ನಂಬರ್ ಹಾಲ್ ನಲ್ಲಿನ ವಿಭಾಗೀಯ ಪೀಠ ತೆಗೆದುಕೊಂಡ ಈ ನಿರ್ಣಯ ಗುರುವಾರ ನಡೆಯಬಹುದಾದ ಎರಡನೇ ಬಾರಿಯ ವಿಶ್ವಾಸಮತ ಕೋರಿಕೆಯ ಮೇಲೆ ಪರಿಣಾಮ ಬೀರಲಿದೆ.
ಭಿನ್ನಮತೀಯ ಶಾಸಕರು ಮತ್ತು ಪಕ್ಷೇತರರು ಪ್ರತ್ಯೇಕವಾಗಿ ಎರಡು ರಿಟ್ ಅರ್ಜಿಗಳನ್ನು ಹೂಡಿದ್ದರು. ಭಿನ್ನಮತೀಯ ಬಿಜೆಪಿ ಶಾಸಕರ ಪರ ಮತ್ತು ವಿರುದ್ಧವಾದ ವಿಚಾರಣೆಯನ್ನು ಸಂಪೂರ್ಣವಾಗಿ ಆಲಿಸಿದ್ದು ಕೋರ್ಟು ಯಾವುದೇ ದಿನ ತೀರ್ಪು ನೀಡಬಹುದು. ಆದರೆ, ಪಕ್ಷೇತರರು ಹೂಡಿದ್ದ ಅರ್ಜಿಯಲ್ಲಿ ನೀಡಿದ್ದ ತಪ್ಪು ಮಾಹಿತಿಯ ತಿದ್ದುಪಡಿಗಾಗಿ ವಕೀಲರೇ ಅವಕಾಶ ಕೋರಿದ್ದರಿಂದ ವಿಚಾರಣೆಯನ್ನು ಮುಂದೂಡಲಾಗಿದೆ.
ಈ ಎರಡೂ ಅರ್ಜಿಗಳಲ್ಲಿ ಕೇಳಲಾಗಿದ್ದ ಮಧ್ಯಂತರ ಆಜ್ಞೆಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಇದರಿಂದಾಗಿ ಸಭಾಧ್ಯಕ್ಷ ಕೆಜಿ ಬೋಪಯ್ಯ ಅವರು 16 ಶಾಸಕರನ್ನು ಅನರ್ಹಗೊಳಿಸಿ ನೀಡಿದ್ದ ಆದೇಶ ಸಿಂಧುವಾದಂತಾಗುತ್ತದೆ. 11 ಬಿಜೆಪಿ ಶಾಸಕರ ಅನರ್ಹತೆ ಕುರಿತಂತೆ ಏನು ತೀರ್ಪು ಹೈಕೋರ್ಟ್ ನೀಡುತ್ತದೆ ಎಂಬ ಬಗ್ಗೆ ಎಲ್ಲರ ಕುತೂಹಲ. ತೀರ್ಪನ್ನು ಇಂಥದೇ ದಿನ ಪ್ರಕಟಿಸಲಾಗುತ್ತದೆ ಎಂದು ನ್ಯಾಯಾಲಯ ಹೇಳಿಲ್ಲ.
ಸದ್ಯಕ್ಕೆ, ಎಲ್ಲ 11 ಶಾಸಕರ ಅನರ್ಹತೆಯನ್ನು ಹೈಕೋರ್ಟ್ ಎತ್ತಿಹಿಡಿದರೆ ಬಿಜೆಪಿ ಶಾಸಕರ ಸಂಖ್ಯೆ 106 ಆಗುತ್ತದೆ. ಅಂದರೆ, ಭಿನ್ನಮತೀಯರನ್ನೂ ಸೇರಿಸಿದ್ದರೆ ಬಿಜೆಪಿಗಿದ್ದ ಸಂಖ್ಯೆ 116, ಮತ್ತು ಸಭಾಧ್ಯಕ್ಷ ಸೇರಿ 117. ಈಗ ಭಿನ್ನಮತೀಯರನ್ನು ಹೊರತುಪಡಿಸಿದರೆ ಬಿಜೆಪಿಯ ಸಂಖ್ಯೆ 106. ವಿರೋಧ ಪಕ್ಷಗಳ ಬಲಾಬಲ ಹೀಗಿದೆ : ಕಾಂಗ್ರೆಸ್ 73 ಮತ್ತು ಜೆಡಿಎಸ್ 27 (ಒಟ್ಟು 28, ಆದರೆ ಪಕ್ಷ ತೊರೆದಿದ್ದ ಎಂಸಿ ಅಶ್ವತ್ಥ್ ಹಿಂದಿರುಗಿ ಬಂದಿಲ್ಲ) ಸೇರಿದರೆ ಒಟ್ಟು ಸಂಖ್ಯೆ 100.
ಒಂದು ವೇಳೆ ಬಿಜೆಪಿ ಮತ್ತೆ ಬಹುಮತ ಸಾಬೀತುಪಡಿಸಲು ಧೈರ್ಯ ಮಾಡಿ ಒಪ್ಪಿಗೆ ನೀಡಿದರೆ ಮತ್ತು ಪಕ್ಷದ ಯಾವುದೇ ಶಾಸಕರು ಕುದುರೆ ವ್ಯಾಪಾರಕ್ಕೆ ಬಲಿಯಾಗದಿದ್ದರೆ ಬಹುಮತ ಸಾಬೀತುಪಡಿಸುವುದು ಅಂತಹ ಕಷ್ಟವೇನಲ್ಲ. ಮುಂದೆ ಏನಾಗುವುದೋ ಆ ದೇವರೂ ಕೂಡ ಊಹಿಸಲಾರ. ಜನಾರ್ದನ ರೆಡ್ಡಿಯ ಹಿಡಿತದಿಂದಲೇ ಭಿನ್ನಮತೀಯರನ್ನು ಹೈಜಾಕ್ ಮಾಡಿದ್ದನ್ನು ಗಮನಿಸಿದರೆ, ಹಲ ಕಮಲದ ಪಕಳೆಗಳನ್ನು ಉದುರಿಸುವುದು ವಿರೋಧ ಪಕ್ಷಕ್ಕೆ ಕಷ್ಟವೂ ಅಲ್ಲ.
ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್












Click it and Unblock the Notifications