ವಿಶ್ವಸಂಸ್ಥೆಯಲ್ಲಿ ಭಾರತ-ಪಾಕ್ ವಾಕ್ಸಮರ

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಉಪರಾಯಭಾರಿಯಾಗಿರುವ ಅಮ್ಜದ್ ಹುಸೇನ್ ಬಿ ಸಿಯಾಲ್ ಅವರು, ಭಾರತವು ನೆರೆಯ ದೇಶಗಳಲ್ಲಿ ಭಯೋತ್ಪಾದನೆಗೆ ಪ್ರಾಯೋಜನೆ ನೀಡುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ತಿರುಗೇಟು ನೀಡಿದ ಭಾರತದ ರಾಜತಾಂತ್ರಿಕ ಮನೀಶ್ ಗುಪ್ತಾ, ಪಾಕಿಸ್ತಾನವು ತನ್ನ ಆಂತರಿಕ ಸಮಸ್ಯೆಗಳನ್ನು ಮರೆಮಾಚಲು ಯಾವಾಗಲೂ ಕಾಶ್ಮೀರ ವಿಷಯವನ್ನೇ ಪ್ರಸ್ತಾಪಿಸುತ್ತಿದೆ.
ಪಾಕ್ ಮೊದಲು ತನ್ನ ಆಂತರಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಗಮನ ನೀಡಬೇಕು. ಅದು ಆ ದೇಶಕ್ಕೆ ಹಾಗೂ ಇಡೀ ಪ್ರಾಂತ್ಯಕ್ಕೆ ಒಳ್ಳೆಯದು ಎಂದು ಹೇಳಿದರು. ಭಯೋತ್ಪಾದಕ ಸಂಘಟನೆಗಳನ್ನು ಹುಟ್ಟು ಹಾಕಿದ, ಪೋಷಿಸಿದ ದೇಶಗಳಲ್ಲಿ ಭಾರತವು ಒಂದು. ನಮ್ಮ ಪ್ರಾಂತ್ಯದಲ್ಲಿ ಆತ್ಮಾಹುತಿ ಬಾಂಬ್ ದಾಳಿಯನ್ನು ಹುಟ್ಟು ಹಾಕಿದ ಭಾರತ ಇತರರಿಗೆ ನೈತಿಕತೆಯ ಪಾಠ ಹೇಳುತ್ತಿದೆ ಎಂದ ಅಮ್ಜದ್ ಹುಸೇನ್, ಎಲ್‌ಟಿಟಿಇ ಸಂಘಟನೆಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಹೇಳಿದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮನೀಶ್ ಗುಪ್ತಾ, ಸಮರ್ಥನೀಯವಲ್ಲದ ಹೇಳಿಕೆಗಳು ಅನಗತ್ಯ. ಪಾಕ್ ಮೊದಲು ಭಯೋತ್ಪಾದನೆ, ತನ್ನ ಭೂಪ್ರದೇಶದಲ್ಲಿರುವ ಉಗ್ರರ ಶಿಬಿರ ಗಳನ್ನು ನಾಶಪಡಿಸುವುದು ಸೇರಿದಂತೆ ಪ್ರಮುಖ ಸಮಸ್ಯೆಗಳ ಪರಿಹರಿಸುವ ಬಗ್ಗೆ ಗಮನ ನೀಡಲಿ ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರವಾದ ಹಾಗೂ ಭಯೋತ್ಪಾದನೆಗೆ ಪಾಕ್ ಬೆಂಬಲ ನೀಡುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ವಿದೇಶ ಸಚಿವ ಎಸ್.ಎಂ. ಕೃಷ್ಣ ಬುಧವಾರ ಟೀಕಿಸಿದ ಮರುದಿನವೇ ಪಾಕ್‌ನಿಂದ ಈ ಆರೋಪ ವ್ಯಕ್ತವಾಗಿದೆ.












Click it and Unblock the Notifications