ಭೂ-ಹಗರಣ : ಸಿಎಂ ರಾಜೀನಾಮೆಗೆ ಎಚ್ಡಿಕೆ ಆಗ್ರಹ

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಬೆಂಗಳೂರು ಪೂರ್ವ ತಾಲ್ಲೂಕು ಕೆ ಆರ್ ಪುರ ಹೋಬಳಿ, ರಾಚೇನಹಳ್ಳಿ ಗ್ರಾಮದ ಸರ್ವೆ ನಂಬರ್ 51/2, 56/2 ರ ಭೂಸ್ವಾಧೀನ ಮತ್ತು ಡಿನೋಟಿಫಿಕೇಷನ್ ವಿಷಯದಲ್ಲಿ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದು, ಯಡಿಯೂರಪ್ಪ ಸ್ವಜನ ಪಕ್ಷಪಾತ ಮಾಡಿದ್ದಾರೆ ಎಂದು ಆರೋಪಿಸಿದರು.
ಹಗರಣದ ನೈತಿಕ ಹೊಣೆಹೊತ್ತು ತಕ್ಷಣವೇ ಮುಖ್ಯಮಂತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಹಗರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದರು. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಸ್ವಜನ ಪಕ್ಷಪಾತ ಮಾಡುವುದಿಲ್ಲ. ಕಾನೂನು ಮೀರಿವುದಿಲ್ಲ ಎಂದು ರಾಜ್ಯಪಾಲರ ಮುಂದೆ ಪ್ರಮಾಣ ಮಾಡಿದ್ದ ಸಿಎಂ, ಇದೀಗ ಅದೆಲ್ಲವನ್ನೂ ಉಲ್ಲಂಘಿಸಿದ್ದಾರೆ. ತಮ್ಮ ಮಕ್ಕಳಿಗಾಗಿ ಭೂ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದರು.
ಕಾಯ್ದೆಯಂತೆ ಭೂಸ್ವಾಧೀನ ಹಂತದಲ್ಲಿರುವ ಭೂಮಿಯನ್ನು ಖರೀದಿಸುವಂತಿಲ್ಲ. ಆದರೆ, ಯಡಿಯೂರಪ್ಪ ಅವರ ಇಬ್ಬರು ಮಕ್ಕಳು, ಅಳಿಯ ಮತ್ತು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಭೂಮಿ ಖರೀದಿಸಿದ್ದಾರೆ. ರಾಚೇನಹಳ್ಳಿಯ ಭೂಮಿಯನ್ನು ಅರ್ಕಾವತಿ ಬಡಾವಣೆಗಾಗಿ ಬಿಡಿಎ ಸ್ವಾಧೀನಪಡಿಸಿಕೊಳ್ಳಲು 2003ರ ಫೆಬ್ರವರಿ 13ರಂದು ಮೊದಲ ಅಧಿಸೂಚನೆ ಹೊರಡಿಸಿತ್ತು.
ಗೌರಮ್ಮ ಅವರ ಹೆಸರಿಗಿದ್ದ 26 ಗುಂಟೆ ಭೂಮಿ ಸೇರಿ1.12 ಎಕರೆ ಭೂಮಿಯನ್ನು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ 2006ರ ಎಪ್ರಿಲ್ 30 ರಂದು ತಮ್ಮ ಮಕ್ಕಳಾದ ರಾಘವೆಂದ್ರ ಮತ್ತು ವಿಜಯೇಂದ್ರ ಅವರ ಹೆಸರಿಗೆ ನೋಂದಣಿ ಮಾಡಿಕೊಂಡರು. ಹೀಗಾಗಿ ಭೂಅಕ್ರಮದಲ್ಲಿ ಮುಖ್ಯಮಂತ್ರಿ ಭಾಗಿಯಾಗಿದ್ದು, ಕೂಡಲೇ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ












Click it and Unblock the Notifications