ಎನ್ ಕೌಂಟರ್ ನಲ್ಲಿ ರವಿ ಪೂಜಾರಿ ಭಂಟನ ಬಲಿ

ಮಧ್ಯರಾತ್ರಿಯಲ್ಲಿ ಶೂಟೌಟ್ :ಮಂತ್ರಿ ಹೌಸ್ ಕಚೇರಿ ಬಳಿಗೆ ಬಂದಿದ್ದ ರವಿ ಪೂಜಾರಿಯ ಇಬ್ಬರು ಬಂಟರುರಾತ್ರಿ 9 ರಿಂದ 10 ಗಂಟೆ ಸುಮಾರಿಗೆ ರಿವಾಲ್ವರ್‌ನಿಂದ ಸುಮಾರು 6 ಸುತ್ತು ಬಾರಿ ಗುಂಡು ಹಾರಿಸಿ ರವಿ ಪೂಜಾರಿಯ ದುಬೈ ಸಂಪರ್ಕವಿಳಾಸವುಳ್ಳ ವಿಸಿಟಿಂಗ್ ಕಾರ್ಡ್ ಎಸೆದು ಪರಾರಿಯಾಗಿದ್ದರು.
ಆಂಧ್ರಪ್ರದೇಶ ನೋಂದಣಿ ಸಂಖ್ಯೆಯುಳ್ಳ ಯಮಹಾ ಬೈಕನ್ನು ಕೃತ್ಯಕ್ಕೆ ಬಳಸಿದ್ದರು. ಹಾಗೂ ಈ ಮಾಹಿತಿ ಆಧರಿಸಿ ದಾಳಿಕೋರರನ್ನು ಬೆನ್ನಟ್ಟಿದ ಪೊಲೀಸರು ರಾಮಮೂರ್ತಿನಗರದ ಹೊರಮಾವು ಬಳಿಯ ಅಗರ ರಸ್ತೆಯಲ್ಲಿ ಅವರನ್ನು ಅಡ್ಡಗಟ್ಟಿದರು.
ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪೂಜಾರಿಯ ಸಹಚರರ ನಡುವೆ ಗುಂಡಿನ ಚಕಮಕಿ ನಡೆಯಿತು.ಈ ವೇಳೆ ಪೂಜಾರಿಯ ಸಹಚರ ಚಂದ್ರು ಅಲಿಯಾಸ್ ಚಂದು ಎಂಬಾತನಿಗೆ ಗುಂಡೇಟು ಬಿದ್ದು ಸಾವನ್ನಪ್ಪಿದ. ಆದರೆ ಮತ್ತೊಬ್ಬ ಪರಾರಿಯಾದ. ಗುಂಡಿನ ಚಕಮಕಿಯಲ್ಲಿ ರಾಮಮೂರ್ತಿನಗರ ಇನ್‌ಸ್ಪೆಕ್ಟರ್ ಎನ್.ಮಹೇಶ್ ಗಾಯಗೊಂಡಿದ್ದಾರೆ.
ರಜೆ ದಿನ ದಾಳಿ, ಎಚ್ಚರಿಕೆ ಮಾತ್ರವೇ?: ಪ್ರತಿ ತಿಂಗಳ ನಾಲ್ಕನೇ ಶನಿವಾರ ಮಂತ್ರಿ ಡೆವಲಪರ್ಸ್‌ನ ಈ ಕಚೇರಿಗೆ ರಜೆ ಇರುತ್ತದೆ. ಅಂತೆಯೇ ಶನಿವಾರವೂ ರಜೆ ಇತ್ತು. ಹಾಗಾಗಿ ಯಾವುದೇ ನೌಕರರು ಕಚೇರಿಗೆ ಬಂದಿರಲಿಲ್ಲ. ಸೆಕ್ಯುರಿಟಿ ಗಾರ್ಡ್‌ಗಳು ಮಾತ್ರ ಭದ್ರತಾ ಕೆಲಸ ನಿರ್ವಹಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮದ ಮಂತ್ರಿ ಡೆವಲಪರ್ಸ್ ಮುಖ್ಯಸ್ಥ ಸುಶೀಲ್ ಮಂತ್ರಿಗೆ ರವಿ ಪೂಜಾರಿ ಸಹಚರರು ಹಣ ನೀಡುವಂತೆ ತಿಂಗಳ ಹಿಂದೆ ಬೆದರಿಕೆ ಹಾಕಿದ್ದರು. ಅಲ್ಲದೆ, ಜಯನಗರದಲ್ಲಿರುವ 'ಸೋಮ್ಸ್ ಬಿಲ್ಡರ್ಸ್' ಸಂಸ್ಥೆಯ ಸಿಬ್ಬಂದಿಗೂ ರವಿ ಪೂಜಾರಿ ಸಹಚರರು ಬೆದರಿಕೆ ಹಾಕಿದ್ದರು. ಆದರೆ, ಈ ಬಗ್ಗೆ ಎರಡೂ ಬಿಲ್ಡರ್ಸ್ ಗಳು ಪೊಲೀಸರಿಗೆ ದೂರು ನೀಡಿರಲಿಲ್ಲ. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಜಂಟಿ ಅಯುಕ್ತ ಅಲೋಕ್ ಕುಮಾರ್ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications