ಸಂಪ್ರದಾಯವಾದಿ ಪತಿ ಕಿರುಕುಳ ಗೃಹಿಣಿ ಆತ್ಮಹತ್ಯೆ

ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದ ಮೈಸೂರು ಮೂಲದ ಶಿಲ್ಪಾ, ಮಲಗುವ ಕೋಣೆಯ ಸೀಲಿಂಗ್ ಫ್ಯಾನ್ಸ್ ಗೆ ಜೋತು ಬೀಳುವ ಮುನ್ನ ಅಪಾರ ಮಾನಸಿಕ ಯಾತನೆ ಅನುಭವಿಸಿದ್ದಾರೆ. ತವರುಮನೆಗೆ ತೆರಳಿದ್ದ ಶಿಲ್ಪಾ, ನೆನ್ನೆ ರಾತ್ರಿ 7.30 ರ ಸುಮಾರಿಗೆ ಮಂಜುನಾಥ ನಗರದಲ್ಲಿರುವ ಸ್ವಗೃಹಕ್ಕೆ ಬಂದಿದ್ದಾರೆ. ಗಂಡನೊಡನೆ ಮಾರಾಮಾರಿ ಕಾದಾಡಿದ ಶಿಲ್ಪಾಳಿಗೆ ಬದುಕು ಬೇಸರವೆನಿಸಿ ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ.
ಗಂಡ ಹೆಂಡತಿ ಜಗಳಕ್ಕೆ ಸಂಪ್ರದಾಯ ಕಾರಣ?: ಹಿಂದೂ ಮಡಿವಂತ ಕುಟುಂಬದವರಾದ ಟೆಕ್ಕಿ ಆನಂದ್ ರಾವ್ ಕುಟುಂಬದ ಕಟ್ಟುಪಾಡುಗಳಿಗೆ ಶಿಲ್ಪಾ ಸರಿಹೊಂದುತ್ತಿಲ್ಲ. ನಮ್ಮ ಸಂಪ್ರದಾಯವನ್ನು ಆಕೆ ಪಾಲಿಸುತ್ತಿಲ್ಲ ಎಂಬುದು ಆನಂದ್ ರಾವ್ ಅಮ್ಮನ ದೂರು. ಶಿಲ್ಪಾಳ ಮಾವನದ್ದು ಅದೇ ರಾಗ, ಆಕೆ ತುಂಬಾ ಮಾರ್ಡನ್ ಆಗಿದ್ದಳು, ನಮ್ಮ ಸಂಸ್ಕೃತಿ, ಸಂಪ್ರದಾಯಕ್ಕೆ ಆಕೆ ಒಗ್ಗಿಕೊಳ್ಳಲಿಲ್ಲ. ಈ ಬಗ್ಗೆ ಆಗಾಗ ಜಗಳವಾಡುತ್ತಿದ್ದದ್ದು ನಿಜ ಎಂದಿದ್ದಾರೆ.
ಗಂಡನ ಮನೆಯವರ ಕಿರುಕುಳವೇ ಕಾರಣ: ಶಿಲ್ಪಾಳ ಸೋದರಮಾವ ಡಾ. ನಾಗರಾಜ್ ಪ್ರಕಾರ, ಆಕೆಯ ಗಂಡನ ಮನೆಯವರು ಸತತವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಸಿನ ಹುಡುಗಿಯಲ್ಲ. ಜೀವ ಕಳೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾಳೆ ಎಂದರೆ ಆಕೆ ಇನ್ನೆಷ್ಟು ನೊಂದಿರಬೇಡ ಎಂದರು.
ಘಟನೆ ಬಗ್ಗೆ ನಮಗೆ ರಾತ್ರಿ 10 ಗಂಟೆ ಸುಮಾರಿಗೆ ತಿಳಿಯಿತು. ಘಟನಾ ಸ್ಥಳದಲ್ಲಿ ಯಾವುದೇ ಆತ್ಮಹತ್ಯೆಗೆ ಕಾರಣ ಇರುವ ಪತ್ರ ಸಿಕ್ಕಿಲ್ಲ. ಆಕೆಯ ಪೋಷಕರು ಸ್ಥಳಕ್ಕೆ ಆಗಮಿಸಿದ ನಂತರ ಕೇಸ್ ದಾಖಲಿಸಿ, ತನಿಖೆ ನಡೆಸಲಾಗುವುದು ಎಂದು ಬಸವೇಶ್ವರ ನಗರ ಪೊಲೀಸ್ ಠಾಣೆಯ ಎಎಸ್ ಐ ಪುಟ್ಟರಾಜು ಹೇಳಿದರು. ಎಎಸ್ ಐ ಪತ್ರಿಕೆಗಳಿಗೆ ಸುದ್ದಿ ಕೊಡುವ ಸಮಯಕ್ಕಾಗಲೇ ಸುಮಾರು ಏಳು ಗಂಟೆಗಳಿಗೂ ಅಧಿಕ ಕಾಲದಿಂದ ಶಿಲ್ಪಾಳ ಶವ ನೇತಾಡುತ್ತಿತ್ತು.
ಲವ್ 'ಕಮ್' ಅರೆಂಜ್ಡ್ ಮದುವೆ: ನಾಲ್ಕು ವರ್ಷದ ಕೆಳಗೆ ಶುಭ ಸಮಾರಂಭದಲ್ಲಿ ಪರಸ್ಪರ ಭೇಟಿ ಮಾಡಿದ ಶಿಲ್ಪಾ ಹಾಗೂ ಅನಂತ್ ಮದುವೆಯಾಗಲು ನಿರ್ಧರಿಸುತ್ತಾರೆ. ಅನಂತ್ ಮನೆಯಲ್ಲಿ ಮೊದಲು ಮದುವೆಗೆ ಒಪ್ಪದಿದ್ದರೂ ನಂತರ ಸಮ್ಮತಿ ನೀಡುತ್ತಾರೆ. ಆದರೆ, ಮದುವೆ ನಂತರ ಅಪ್ಪ ಅಮ್ಮನ ದಾಸನಾದ ಅನಂತ ಆಕೆಗೆ ಚಿತ್ರಹಿಂಸೆ ನೀಡುತ್ತಾನೆ. ಸಂಪ್ರದಾಯದ ಹೆಸರಿನಲ್ಲಿ ನಡೆದ ಮಾನಸಿಕ ಅತ್ಯಾಚಾರಕ್ಕೆ ಶಿಲ್ಪಾಳ ಬದುಕು ಬಲಿಯಾಗುತ್ತದೆ.












Click it and Unblock the Notifications