ಸೆ.24ರಂದು ಅಯೋಧ್ಯೆ ಭೂಮಿ ವಿವಾದಕ್ಕೆ ತೆರೆ

ತೀರ್ಪು ನೀಡುವ ದಿನಾಂಕವನ್ನು ಮುಂದೂಡಬೇಕೆಂದು ರಮೇಶ್ ಚಂದ್ರ ತ್ರಿಪಾಠಿ ಎಂಬುವವರು ಅರ್ಜಿ ಸಲ್ಲಿಸಿದ್ದರು. ತೀರ್ಪು ನೀಡಿದರೆ ಕೋಮು ಸೌಹಾರ್ದತೆಗೆ ಧಕ್ಕೆಯುಂಟಾಗುತ್ತದೆ, ಹಿಂಸಾಚಾರಕ್ಕೆ ದಾರಿಮಾಡಿಕೊಡುತ್ತದೆ, ಕಾನೂನು ಸುವ್ಯವಸ್ಥೆ ಹದಗೆಡುತ್ತದೆ ಎಂದು ರಮೇಶ್ ಚಂದ್ರ ಅರ್ಜಿಯಲ್ಲಿ ತಿಳಿಸಿದ್ದರು. ಅರ್ಜಿಯಲ್ಲಿ ಯಾವುದೇ ತಿರುಳಿಲ್ಲ ಎಂದು ಹೇಳಿರುವ ನ್ಯಾಯಾಲಯ ತ್ರಿಪಾಠಿಗೆ 10 ಲಕ್ಷ ರು. ದಂಡ ವಿಧಿಸಿದೆ.
ಅಕ್ಟೋಬರ್ 3ರಿಂದ ಕಾಮನ್ವೆಲ್ತ್ ಕ್ರೀಡಾಕೂಟ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತೆ ಮತ್ತು ದೇಶದ ಪ್ರತಿಷ್ಠೆಯನ್ನು ಗಮನದಲ್ಲಿಟ್ಟುಕೊಂಡು ತೀರ್ಪು ನೀಡುವ ದಿನಾಂಕವನ್ನು ಮುಂದೂಡಬೇಕೆಂದು ಲಖನೌ ನಾಗರಿಕರು ಎರಡನೇ ಅರ್ಜಿ ಸಲ್ಲಿಸಿದ್ದರು.
60 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನೆಲದ ಹಕ್ಕಿನ ಇತ್ಯರ್ಥ ಕುರಿತಂತೆ ಮೂಲ ಪ್ರಕರಣ ದಾಖಲಿಸಿರುವ ನಿರ್ಮೋಹಿ ಎಂಬುವವರು ಕೂಡ ಸಂಧಾನ ಮಾಡಿಕೊಳ್ಳುವ ಕುರಿತು ಮೂರನೇ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಯಾರೂ ಆಸಕ್ತಿ ತೋರಿಸದಿದ್ದ ಕಾರಣ ಮೂರೂ ಅರ್ಜಿಗಳನ್ನು ನ್ಯಾಯಾಲಯ ವಜಾ ಮಾಡಿದೆ.
ಭಾರೀ ಭದ್ರತೆ : ತೀರ್ಪಿನ ಮಹತ್ವ, ಸೂಕ್ಷ್ಮತೆಯನ್ನು ಮನಗಂಡಿರುವ ಸರಕಾರ ಶಾಂತಿ ಮತ್ತು ಸುವ್ಯವಸ್ಥೆ ಹದಗೆಡದಿರಲು ಸೂಕ್ತ ಭದ್ರತೆಗೆ ಮುಂದಡಿ ಇಟ್ಟಿದೆ. ಸುಮಾರು 1.5 ಲಕ್ಷ ಪೊಲೀಸರು ಗಲ್ಲಿಗಲ್ಲಿ ಸುತ್ತಲಿದ್ದಾರೆ. ಅವರಿಗೆ 4 ಸಾವಿರ ಅರೆಮಿಲಿಟರಿ ಪಡೆ ಬೆಂಬಲ ಒದಗಿಸಲಿದೆ. ತೀರ್ಪು ನೀಡಲಿರುವ ಮೂರು ನ್ಯಾಯಮೂರ್ತಿಗಳಿಗೆ ಸಾವಿರಕ್ಕೂ ಹೆಚ್ಚು ಪೊಲೀಸರು ಭದ್ರತೆ ನೀಡಲಿದ್ದಾರೆ.
ನಾಲ್ಕು ನೂರು ವರ್ಷ ಇತಿಹಾಸವಿರುವ ಬಾಬ್ರಿ ಮಸೀದಿಯನ್ನು 1992ರ ಡಿಸೆಂಬರ್ 6ರಂದು ಸಾವಿರಾರು ಕರ ಸೇವಕರು ಧ್ವಂಸಗೊಳಿಸಿದ್ದರು. ಇದು ಕೋಮು ಕಲಹಕ್ಕೆ ನಾಂದಿ ಹಾಡಿತ್ತು.












Click it and Unblock the Notifications