ತಿರುಪತಿ ತಿಮ್ಮಪ್ಪನ ಆಭರಣಗಳಿಗೆ ವಿಮೆ ರಕ್ಷೆ

ತಿರುಪತಿ ತಿಮ್ಮಪ್ಪನ ಬಳಿಯಿರುವ 52,000ಕೋ.ರೂ. ಮೌಲ್ಯದ ಚಿನ್ನಾಭರಣಗಳಿಗಾಗಿ ವಿಮಾ ರಕ್ಷಣೆಯನ್ನು ಪಡೆದುಕೊಳ್ಳಲು ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ನಿರ್ಧರಿಸಿದೆ . ಪ್ರತಿದಿನ ಏನಿಲ್ಲವೆಂದರೂ 70,000 ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಳ್ಳುತ್ತಿದ್ದು, ಪ್ರತಿ ತಿಂಗಳೂ ಸುಮಾರು ಎರಡು ಮಿಲಿಯ ಡಾಲರ್ ಕಾಣಿಕೆ
ಸಂಗ್ರಹವಾಗುತ್ತದೆ.
ಅಲ್ಲದೆ, ದರ್ಶನ ಟಿಕೆಟ್‌ಗಳು ಮತ್ತು ಪ್ರಸಾದದ ಮಾರಾಟ, ಹರಾಜುಗಳಂತಹ ಇತರ ಮೂಲಗಳಿಂದಲೂ ದೇವಸ್ಥಾನಕ್ಕೆ ಭರಪೂರ ಆದಾಯ ಹರಿದು ಬರುತ್ತಿದೆ. ದೇವಸ್ಥಾನದಲ್ಲಿ 20 ಟನ್‌ಗಳಷ್ಟು ಚಿನ್ನ ಮತ್ತು ವಜ್ರಾಭರಣಗಳಿವೆ ಎನ್ನಲಾಗಿದ್ದು, ಕೆಲವು 12 ನೇ ಶತಮಾನದಷ್ಟು ಹಳೆಯದಾಗಿವೆ.
ಕಳೆದ ವರ್ಷ ಕರ್ನಾಟಕದ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿಯವರು ಶ್ರೀ ದೇವರಿಗೆ 42 ಕೋಟಿ ರೂ. ಮೌಲ್ಯದ ವಜ್ರ ಖಚಿತ ಕಿರೀಟವನ್ನು ಅರ್ಪಿಸಿದ್ದರು. ಆದರೂ, ತಿರುಪತಿ ಬಾಲಾಜಿಯ ಸಂಪತ್ತಿಗೆ ವಿಮೆ ಮಾಡಿಸುವುದು ಪ್ರಯಾಸದ ಕಾರ್ಯವಾಗಲಿದೆ. ಇದರಲ್ಲಿ ಅಡಗಿರುವ ಅಪಾಯ ಮತ್ತು ಆಭರಣಗಳ ಪ್ರಾಚೀನ ಲಕ್ಷಣಗಳನ್ನು ಪರಿಗಣಿಸಿದರೆ ಪ್ರೀಮಿಯಂ ಹಣ ಸಾಕಷ್ಟು ದೊಡ್ಡ ಮೊತ್ತವಾಗಬಹುದು ಎಂದು ವೃತ್ತಪತ್ರಿಕೆಯೊಂದು ವರದಿ ಮಾಡಿದೆ.
ಟ್ರಸ್ಟ್‌ನ ನಿರ್ಧಾರವು ಕಾರ್ಯಗತಗೊಂಡರೆ ತಿರುಪತಿ ತಿಮ್ಮಪ್ಪನ ವಿಮಾಪಾಲಿಸಿ 26 ಬಿಲಿಯನ್ ಡಾಲರ್‌ಗಳ ವಿಮೆಯನ್ನು ಹೊಂದಿರುವ ತೈಲ ಮತ್ತು ನೈಸರ್ಗಿಕ ಅನಿಲ ಆಯೋಗ (ಒಎನ್‌ಜಿಸಿ)ವನ್ನು ಹಿಂದಿಕ್ಕಲಿದೆ.












Click it and Unblock the Notifications