ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿಗೆ ಭರದ ಸಿದ್ದತೆ

ಇಂದು ರಾತ್ರಿ 10 ಗಂಟೆಗೆ ಅಲಂಕಾರ ಮತ್ತು ಮಹಾಪೂಜೆಯ ಮೂಲಕ ಕಾರ್ಯಕ್ರಮ ಆರಂಭವಾಗಲಿದೆ. ಶ್ರೀಕೃಷ್ಣನ ವಿಗ್ರಹಕ್ಕೆ ತುಳಸಿ ನೀರು ಮತ್ತು ಹಾಲಿನ ಮೂಲಕ ಅರ್ಘ್ಯ ಬಿಟ್ಟು, ನಂತರ ತುಳಸಿ ಕಟ್ಟೆಯಲ್ಲಿ ಕೃಷ್ಣನ ವಿಗ್ರಹಕ್ಕೆ ಹಾಲಿನಿಂದ ಅರ್ಘ್ಯ ಬಿಡುವುದು ವಾಡಿಕೆ. ಅಷ್ಟಮಿಯ ದಿನವಾದರೂ ಇಂದು ಉಪವಾಸ. ಲೀಲೋತ್ಸವದ ದಿನದಂದು (ಸೆ. 2) ರಥಬೀದಿಯಲ್ಲಿ ರಥೋತ್ಸವ ನಡೆಯಲಿದೆ. ನಂತರ ಅನ್ನ ಬ್ರಹ್ಮ ಕ್ಷೇತ್ರವೆಂದೇ ಪ್ರಸಿದ್ದವಾದ ಉಡುಪಿಯಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಪರ್ಯಾಯ ಮಠ ಈ ಬಾರಿ ಬರುವ ಎಲ್ಲಾ ಭಕ್ತಾದಿಗಳಿಗೆ ಲಡ್ಡು ಮತ್ತು ಚಕ್ಕುಲಿ ಪ್ರಸಾದ ನೀಡಲಾಗುವುದಾಗಿ ಪ್ರಕಟಿಸಿದೆ. ಸುಮಾರು ಎರಡು ಲಕ್ಷ ಲಡ್ಡು ಮತ್ತು ಚಕ್ಕುಲಿಯನ್ನು ಈಗಾಗಲೇ ತಯಾರಿಸಲಾಗಿದೆ. ಅಲ್ಲದೆ ಉತ್ಸವದ ಪ್ರಮುಖ ಆಕರ್ಷಣೆಯಾದ ಹುಲಿವೇಷ, ಭೂತಕೋಲ, ಡೊಳ್ಳು ಕುಣಿತ, ವೀರಗಾಸೆ, ಮರಕಾಲು ವೇಷ, ಯಕ್ಷಗಾನ ಮುಂತಾದ ಜಾನಪದ ನೃತ್ಯಗಳಲ್ಲಿ ಭಾಗವಹಿಸುವ ಕಲಾವಿದರಿಗೆ ಸಂಭಾವನೆಯಾಗಿ ಎಂಟು ಲಕ್ಷ ಮೀಸಲಿಡಲಾಗಿದೆ. ಇಂದು ಅಹೋರಾತ್ರಿ ಖ್ಯಾತ ಡ್ರಂ ಕಲಾವಿದ ಶಿವಮಣಿ ತಂಡದಿಂದ ಕಾರ್ಯಕ್ರಮ ನಡೆಯಲಿದೆಯೆಂದು ಮಠ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಉಡುಪಿ ಜಿಲ್ಲಾ ಪೋಲಿಸ್ ಭಾರಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದೆ. ಇಂದು ರಾತ್ರಿ ನಡೆಯುವ ಮಹಾಪೂಜೆ, ಅರ್ಘ್ಯಪ್ರದಾನ ಕಾರ್ಯಕ್ರಮ ಮತ್ತು ನಾಳೆ ನಡೆಯಲಿರುವ ವಿಟ್ಲಪಿಂಡಿ ಉತ್ಸವವನ್ನು ಈ ಟಿವಿ ಕನ್ನಡ ಚಾನಲ್ ನೇರ ಪ್ರಸಾರ ಮಾಡಲಿದೆ.
ಗ್ಯಾಲರಿ: ಯಶೋಧೆ ಕಂದ ಶ್ರೀಕೃಷ್ಣನ ವಿವಿಧ ರೂಪಗಳು












Click it and Unblock the Notifications