ಅದಿರು ಸಾಗಣೆ ಮೇಲೆ ಹದ್ದಿನ ಕಣ್ಣು : ಸಿಎಂ

ರಫ್ತು ಮತ್ತು ಸಾಗಣೆ ನಿಷೇಧದ ನಂತರವೂ ಇಲ್ಲಿಂದ ಬೇರೆ ರಾಜ್ಯಗಳಿಗೆ ಅದಿರು ಹೋಗುತ್ತಿದೆ ಎಂದು ಲೋಕಾಯುಕ್ತರು ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ, ಹಿನ್ನೆಲೆಯಲ್ಲಿ ಮಂಗಳವಾರ ಗಣಿ ಮತ್ತು ಭೂವಿಜ್ಞಾನ, ಅರಣ್ಯ, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಭೆ ನಡೆಸಿ ಅಕ್ರಮ ಗಣಿಗಾರಿಕೆ ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ತನ್ನ ಇತಿಮಿತಿಯೊಳಗೆ ಅದಿರು ರಫ್ತು ನಿಷೇಧಿಸಿದೆ. ಇನ್ನೂ ಯಾವುದಾದರೂ ಕ್ರಮಗಳನ್ನು ಕೈಗೊಳ್ಳಬೇಕಿದ್ದರೆ ಕೇಂದ್ರ ಸರಕಾರ ಮಾಹಿತಿ ನೀಡಲಿ. ಅಕ್ರಮ ಅದಿರು ಸಾಗಣೆ ನಿಲ್ಲಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕಾಯುಕ್ತರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಯಡಿಯೂರಪ್ಪ ವಿವರಿಸಿದರು.
ಅದಿರು ರಫ್ತು ನಿಷೇಧದ ನಂತರ ಚೆಕ್ ಪೋಸ್ಟ್ ಗಳಲ್ಲಿ 24 ಗಂಟೆಗಳ ಕಾಲ ಸಿಬ್ಬಂದಿ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ. ಆಂಧ್ರಪ್ರದೇಶ ಗಡಿಗೆ ಹೊಂದಿಕೊಂಡಿರುವ ಹಗರಿ ಚೆಕ್ ಪೋಸ್ಟ್ ನಲ್ಲಿ 6 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹರ್ಮಿಟ್ ಪರಿಶೀಲಿಸಲು 7 ವಿಶೇಷ ತನಿಖಾ ತಂಡ ರಚಿಸಲಾಗಿದೆ. ಇದರಲ್ಲಿ ಗಣಿ, ಅರಣ್ಯ ಇಲಾಖೆ ಅಧಿಕಾರಿಗಳು ಇರುತ್ತಾರೆ.











Click it and Unblock the Notifications