ಗುಲ್ಬರ್ಗಾ ದಕ್ಷಿಣದಿಂದ ನಮೋಶಿ ಸ್ಪರ್ಧೆ

ಗುಲ್ಬರ್ಗಾ ದಕ್ಷಿಣ ವಿಧಾನಸಭೆ ಕ್ಷೇತ್ರಕ್ಕೆ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಹಾಗೂ ಚಂದ್ರಶೇಖರ್ ಪಾಟೀಲ್ ರೇವೊರು ಅವರ ಮಗ ದತ್ತಾತ್ರೇಯ ಪಾಟೀಲ್ ರೇವೂರು ಜೆಡಿಎಸ್ ನಿಂದ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಮಾಜಿ ಮುಖ್ಯಮಂತ್ರಿ ಎನ್ ಧರ್ಮಸಿಂಗ್ ಅವರ ಮಗ ಡಾ ಅಜಯ್ ಸಿಂಗ್ ಅವರನ್ನು ಅಖಾಡಕ್ಕಿಳಿಸಲು ಕಾಂಗ್ರೆಸ್ ನಲ್ಲಿ ಚಿಂತನೆ ಆರಂಭವಾಗಿದ್ದು, ಸಂಜೆ ಹೊತ್ತಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಸಹ ಘೋಷಣೆ ಮಾಡುವ ಸಾಧ್ಯತೆ ಇದೆ.
ಮೂಲತಃ ಬಿಜೆಪಿ ಶಾಸಕರಾಗಿದ್ದ ಚಂದ್ರಶೇಖರ್ ಪಾಟೀಲ್ ರೇವೂರು ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಅವರ ಪತ್ನಿ ಅರುಣಾ ಅವರನ್ನು ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಸೂಚನೆ ನೀಡಿತ್ತು. ಆದರೆ, ಅರುಣಾ ಅವರು ಸ್ಪರ್ಧಿಸಲು ನಿರಾಕರಿಸಿದ್ದರಿಂದ ಬಿಜೆಪಿ ಟಿಕೆಟ್ ನಮೋಶಿ ಅವರ ಪಾಲಾಗಿದೆ. ಆದರೆ, ರೇವೂರು ಅವರ ಮಗ ದತ್ತಾತ್ತೇಯ ಪಾಟೀಲ್ ಅವರಿಗೆ ಟಿಕೆಟ್ ನೀಡಲು ಬಿಜೆಪಿ ಮುಖಂಡರು ನಿರಾಕರಿಸಿದ್ದರಿಂದ ದತ್ತಾತ್ರೇಯ ಜೆಡಿಎಸ್ ನಿಂದ ಸ್ಪರ್ಧಿಸಲಿದ್ದಾರೆ.
ಕಡೂರು ಶಾಸಕರಾಗಿದ್ದ ಕೃಷ್ಣಮೂರ್ತಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಜೆಡಿಎಸ್ ವಕ್ತಾರ ವೈಎಸ್ ವಿ ದತ್ತಾ ಜೆಡಿಎಸ್ ನಿಂದ ಸ್ಪರ್ಧಿಸಲಿದ್ದಾರೆ. ಕಳೆದ ಬಿಜೆಪಿಯಿಂದ ಸ್ಪರ್ಧಿಸಿ ಸೋಲುಂಡಿದ್ದ ವಿಶ್ವನಾಥ ಅವರನ್ನೇ ಬಿಜೆಪಿ ಮತ್ತೆ ಕಣಕ್ಕಿಳಿಸಿದೆ. ಕಾಂಗ್ರೆಸ್ ನಿಂದ ಅಖಾಡಕ್ಕಿಳಿಯಲು ಮಾಜಿ ಶಾಸಕ ಕೆ ಬಿ ಮಲ್ಲಿಕಾರ್ಜುನ ತೀವ್ರ ಲಾಭಿ ಅರಂಭಿಸಿದ್ದಾರೆ. ಸೆಪ್ಟೆಂಬರ್ 13 ರಂದು ಮತದಾನ ನಡೆಯಲಿದೆ. ಸೆ. 16ಕ್ಕೆ ಫಲಿತಾಂಶ ಹೊರಬೀಳಲಿದೆ.












Click it and Unblock the Notifications