ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮಸ್ಥಳ ಗರ್ಭಗುಡಿ, ಗೋಪುರ ಜೀರ್ಣೋದ್ಧಾರ

By Mahesh
|
Google Oneindia Kannada News

Sri Kshetra Dharmasthala
ಧರ್ಮಸ್ಥಳ, ಆ 19 : ರಾಜ್ಯದ ಪ್ರಮುಖ ಯಾತ್ರಾ ಸ್ಥಳವಾದ ಧರ್ಮಸ್ಥಳ ಮಂಜುನಾಥಸ್ವಾಮಿಯ ಗರ್ಭಗುಡಿ ಮತ್ತು ಗೋಪುರ ನವೀಕರಣ ಕಾರ್ಯ ಆರಂಭಗೊಂಡಿದೆ. ಸುಮಾರು ಮೂರು ಕೋಟಿ ರುಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯಲಿದ್ದು, ಬರುವ ಕಾರ್ತಿಕ ಮಾಸದೊಳಗೆ ಕೆಲಸ ಪೂರ್ಣಗೊಳ್ಳಲಿದೆ.

400 ವರ್ಷಗಳ ಹಿಂದೆ ನಿರ್ಮಿಸಿದ್ದ ಪೌಳಿಯ ಗೋಡೆ ಶಿಥಿಲಾವಸ್ಥೆಯಲ್ಲಿತ್ತು. ಶಿಲಾಮಯ ಪೌಳಿ ನಿರ್ಮಾಣದಲ್ಲಿ ಶೇ.40ರಷ್ಟು ಕಲ್ಲು ಮತ್ತು ಶೇ. 60 ರಷ್ಟು ಮರ ಬಳಸಲಾಗುತ್ತದೆ. ಕಲ್ಲಿನ ಕೆಲಸಕ್ಕೆ ಒಂದು ಕೋಟಿ ಮತ್ತು ಮರದ ಕೆಲಸಕ್ಕೆ ಎರಡು ಕೋಟಿ ವ್ಯಯಿಸಲಾಗುವುದು. ಗ್ರಾಮಸ್ಥರು ಶ್ರದ್ದಾಭಕ್ತಿಯಿಂದ ಶ್ರಮದಾನ ಮಾಡುತ್ತಿದ್ದಾರೆ. ಬೆಳಿಗ್ಗೆ 9 ರಿಂದ ರಾತ್ರಿ 12 ಗಂಟೆಯವರೆಗೆ ಎರಡು ಹಂತದಲ್ಲಿ ಕೆಲಸ ನಡೆಯುತ್ತಿದೆ ಎಂದು ಶ್ರೀಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

21 ಅಡಿ ಎತ್ತರವಿರುವ ಪೌಳಿಯ ಗೋಡೆಯ ಮೇಲೆ ಮರದ ಆಕರ್ಷಕ ವಿನ್ಯಾಸ ಮತ್ತು ಕುಸರಿ ಕೆಲಸವನ್ನು ಮೈಸೂರಿನ ಪರಿಣತ ಶಿಲ್ಪಿಗಳು ನಡೆಸುತ್ತಿದ್ದಾರೆ. ಮಂಜುನಾಥ ಸ್ವಾಮಿಯ ಗರ್ಭಗುಡಿ ಗೋಪುರಕ್ಕೆ 25 ಕೆ.ಜಿ. ಬಳಸಿ ಚಿನ್ನದ ಲೇಪನ ಕಾರ್ಯ ನಡೆಯಲಿದೆ. ಮುಂದಿನ ಜನವರಿ ಉತ್ತರಾಯಣ ಕಾಲ ಆರಂಭವಾದ ಮೇಲೆ ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪನೆ ನಡೆಯಲಿದೆ ಎಂದು ಹೆಗ್ಗಡೆಯವರು ಹೇಳಿದ್ದಾರೆ.

ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವುದರಿಂದ ಭಕ್ತರಿಗೆ ದರ್ಶನ ಸಮಯದಲ್ಲಿ ವ್ಯತ್ಯಾಸ ಮತ್ತು ಅನನುಕೂಲವಾಗಬಹುದು. ದೇವಾಲಯದ ಸಿಬ್ಬಂದಿಗಳ ಜೊತೆ ಸಹಕರಿಸಬೇಕೆಂದು ಹೆಗ್ಗಡೆ ಭಕ್ತ ಸಮುದಾಯಕ್ಕೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X