ಗುಜರಾತ ಗೃಹ ಸಚಿವ ಅಮಿತ್ ಶಾ ರಿಜೈನ್

ಇದೇ ವೇಳೆ ಸೋಹ್ರಾಬುದ್ದೀನ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಮಿತ್ ಶಾ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದು, ಶಾ ವಿರುದ್ಧ ಕೊಲೆ ಆರೋಪವನ್ನು ಹೊರಿಸಿದೆ. ಶೀಘ್ರವೇ ಅಮಿತ್ ಶಾ ಅವರ ಬಂಧನ ಸಾಧ್ಯತೆ ಇದೆ. ಆದರೆ, ಮುಖ್ಯಮಂತ್ರಿ ನರೇಂದ್ರ ಮೋದಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಅಮಿತ್ ಶಾ ಶನಿವಾರದಿಂದ ನಾಪತ್ತೆಯಾಗಿದ್ದಾರೆ. ಅಲ್ಲದೇ, ಬಂಧನದ ವಿರುದ್ಧ ನಿರೀಕ್ಷಣಾ ಜಾಮೀನು ಪಡೆಯುವಲ್ಲಿ ವಿಫಲರಾಗಿರುವ ಶಾ ಅವರು, ಸದ್ಯದ ವಿಳಾಸ ಮಾತ್ರ ಗುಟ್ಟಾಗಿದೆ.
ಅಮಿತ್ ಶಾ ಅವರ ರಾಜೀನಾಮೆ ಪತ್ರ ಸ್ವೀಕರಿಸಿರುವ ಮುಖ್ಯಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿಬಿಐ ಕಾಂಗ್ರೆಸ್ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಭಾರತೀಯ ಸಂವಿಧಾನದ ಮೇಲೆ ನಮಗೆ ನಂಬಿಕೆ ಇದೆ. ಇದೇ ಕಾರಣದಿಂದ ಅಮಿತ್ ಶಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಒಂದು ಮಾತಿನಲ್ಲಿ ಹೇಳುವುದಾದರೆ ಅಮಿತ್ ಶಾ ನಿರ್ದೋಷಿ. ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಅವರು ಭಾಗಿಯಾಗಿಲ್ಲ. ಗುಜರಾತ್ ಏಳ್ಗೆ ಸಹಿಸದ ದಿಲ್ಲಿ ಸರಕಾರ ನಮ್ಮ ಮೇಲೆ ಸಿಬಿಐ ಅಸ್ತ್ರ ಬಳಸತೊಡಗಿದೆ ಎಂದು ಮೋದಿ ಆರೋಪಿಸಿದ್ದಾರೆ. ಅಮಿತ್ ಶಾ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಅವರು ನಿರಪರಾಧಿಯಾಗಿ ಹೊರಬರುತ್ತಾರೆ ಎಂದು ಅವರು ಮತ್ತೊಮ್ಮೆ ಪುನರುಚ್ಚರಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಬಿಜೆಪಿ ಹೈಕಮಾಂಡ್ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿತ್ತು.












Click it and Unblock the Notifications