ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜರ್ಮನ್ನರಿಗೆ ಫುಟ್ಬಾಲ್ ಪಾಠ ಮಾಡಿದ ಸ್ಪೇನ್

By Mahesh
|
Google Oneindia Kannada News

Spain heads to Fifa Final
ಡರ್ಬನ್, ಜು 8 : ಅಕ್ಟೋಪಸ್ ನುಡಿದ ಭವಿಷ್ಯ, ಬುಕ್ಕಿಗಳ ನಿರೀಕ್ಷೆಯನ್ನು ಹುಸಿ ಮಾಡದ ಸ್ಪೇನ್, ಬುಧವಾರ ಮಧ್ಯರಾತ್ರಿ ನಡೆದ ವಿಶ್ವಕಪ ಸೆಮೆಫೈನಲ್ಸ್ ನಲ್ಲಿ ಜರ್ಮನಿಯನ್ನು 1-0 ಗೋಲುಗಳಿಂದ ಮಣಿಸಿ, ಫೈನಲ್ ಗೆ ಲಗ್ಗೆ ಇಟ್ಟಿದೆ. ಭಾನುವಾರದಂದು ನಡೆವ ಅಂತಿಮ ಹಣಾಹಣಿಯಲ್ಲಿ ಬಲಿಷ್ಠ ಹಾಲೆಂಡ್ ತಂಡವನ್ನು ಸ್ಪೇನ್ ಎದುರಿಸಲಿದೆ.

ಫೀಫಾ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಸ್ಪೇನ್ ಬುಧವಾರ ( ಜು 7 ) ರಾತ್ರಿ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಆರನೇ ಸ್ಥಾನದಲ್ಲಿರುವ ಜರ್ಮನಿ ತಂಡವನ್ನು ಏಕಮೇವ ಗೋಲಿನಿಂದ ಸೋಲಿಸಿತು. ಪಂದ್ಯದ 73ನೇ ನಿಮಿಷದಲ್ಲಿ ಸೆಂಟ್ರಲ್ ಡಿಫೆಂಡರ್ ಕಾರ್ಲಸ್ ಪುಯೋಲ್ ಹೆಡ್ ಮೂಲಕ ಗೋಲು ದಾಖಲಿಸಿ ತಂಡದ ಜಯಕ್ಕೆ ಕಾರಣರಾದರು.

ಲೀಗ್ ಮತ್ತು ನಾಕೌಟ್ ಹಂತದಲ್ಲಿ ಅತ್ಯುತ್ತಮವಾಗಿ ಆಡಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದೇ ಬಿಂಬಿಸಲಾಗಿದ್ದ ಜರ್ಮನಿ ಶನಿವಾರ ( ಜು 10 ) ಉರಗ್ವೆ ವಿರುದ್ಧ ನಡೆಯುವ ಪಂದ್ಯದಲ್ಲಿ ಮೂರನೇ ಸ್ಥಾನಕ್ಕಾಗಿ ಸೆಣಸಲಿದೆ.

ಇದುವರೆಗೆ ಒಂದು ಬಾರಿಯೂ ಪ್ರಶಸ್ತಿ ಗೆಲ್ಲದ ಸ್ಪೇನ್ ಫೈನಲ್ ಹಂತಕ್ಕೆ ಬಂದಿದ್ದು ಇದೇ ಮೊದಲು. 1950 ರಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದ ಸ್ಪೇನ್ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಲೀಗ್ ಹಂತದಲ್ಲಿ ಸ್ವಿಜರ್ಲ್ಯಾಂಡ್ ವಿರುದ್ಧ ಸೋತಿದ್ದ ಸ್ಪೇನ್, ನಂತರದ ಪಂದ್ಯದಲ್ಲಿ ಉತ್ತಮವಾಗಿ ಆಡಿ ಹೊಂಡುರಾಸ್ ಮತ್ತು ಚಿಲಿ ವಿರುದ್ದ ಜಯಗಳಿಸಿ ಪ್ರಿಕ್ವಾಟರ್ ಫೈನಲ್ ಹಂತ ಪ್ರವೇಶಿಸಿತು.

ಪ್ರಿಕ್ವಾಟರ್ ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ವಿರುದ್ದ ಜಯ ದಾಖಲಿಸಿ ಮುನ್ನಡೆದ ಸ್ಪೇನ್, ಕ್ವಾಟರ್ ಫೈನಲ್ ಪಂದ್ಯದಲ್ಲಿ ಪರಗ್ವೆ ವಿರುದ್ದ1 -0 ಅಂತರದಿಂದ ಗೆದ್ದು ಸೆಮಿ ಫೈನಲ್ ಪ್ರವೇಶಿಸಿತು.

ಕೈಕೊಟ್ಟ ಜರ್ಮನ್ ಗೇಮ್ ಪ್ಲಾನ್: ಯುವ ಆಟಗಾರರಿಗೆ ಸ್ಪೇನ್ ಆಟ ಉತ್ತಮ ಪಠ್ಯವಾಗಬಹುದು. ಸ್ಪೇನ್ ಆಟಗಾರರು ತಾಳ್ಮೆಯಿಂದ ಪಾಸಿಂಗ್ ಮಾಡುವ ಕಲೆಯನ್ನು ಕಂಡು ಜರ್ಮನ್ನರು ಮೂಕವಿಸ್ಮಿತರಾದರು. ಮುಂಪಡೆ ಆಟಗಾರರನ್ನು ಸುತ್ತುವರೆದು ಗೋಲು ತಡೆಯುವ ಹುಮ್ಮಸ್ಸಿನಲ್ಲಿದ್ದ ಜರ್ಮನ್ನರಿಗೆ ಡಿಫೆಂಡರ್ ಒಬ್ಬ ಹೆಡ್ ಮಾಡಿ ಗೋಲು ಹೊಡೆದಿದ್ದು, ಕಪಾಳಮೋಕ್ಷ ಮಾಡಿದ್ದಂತಾಯಿತು.

ಸ್ಪೇನ್ ಅತ್ಯುತ್ತಮ ಆಟ: ಪಂದ್ಯದ ಆರಂಭದಿಂದಲೂ ಚೆಂಡಿನ ಮೇಲೆ ಹಿಡಿತ ಸಾಧಿಸಿ, ತಾಳ್ಮೆ ಆಟದಿಂದ ಜರ್ಮನ್ನರಿಗೆ ಚೆಂಡು ಸಿಗದಂತೆ ಮಾಡಿ, ಇನ್ನೆಷ್ಟಾ, ಚಾವಿ, ಅಲಾನ್ಸೋ, ಫ್ಯಾಬ್ರಿಗ್ರೆಸ್ , ರಮೋಸ್ ಸಕತ್ತಾಗಿ ಕಾಡಿದರು. ಅವಕಾಶ ಸಿಕ್ಕದ ವಿಲ್ಲಾ, ಪೆಡ್ರೋ ಮುನ್ನುಗ್ಗುತ್ತಿದ್ದರು.ದ್ವಿತೀಯಾರ್ಧದಲ್ಲೂ ಜರ್ಮನ್ನಿಗೆ ದಾಳಿ ಮಾಡುವ ಅವಕಾಶ ಸಿಕ್ಕಿದ್ದು ಕಮ್ಮಿ.

ಅಂತೂ ಪಂದ್ಯದ ಅಂತಿಮ ಅವಧಿಯಲ್ಲಿ ವಿಲ್ಲಾ ಬದಲಿಗೆ ಮೈದಾನಕ್ಕಿಳಿದ ಟೊರೆಸ್ ಗೆ ಗೋಲು ಖಾತೆ ತೆರೆಯುವ ಅವಕಾಶ ಒದಗಿತ್ತು. ಪೆಡ್ರೊ ಹಾಗೂ ಟೊರೆಸ್ ನಡುವೆ ಇಬ್ಬರು ಡಿಫೆಂಡರ್ ಗಳು ಮಾತ್ರ ಇದ್ದರು. ಆದರೆ, ಟೊರೆಸ್ ಗೆ ಪಾಸ್ ಮಾಡುವಲ್ಲಿ ಪೆಡ್ರೋ ವಿಫಲರಾದರು. ಜರ್ಮನ್ನರಿಗೆ ಸ್ಪೇನ್ ಫುಟ್ಬಾಲ್ ಪಾಠ ಹೇಳಿಕೊಟ್ಟಂತಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X