ಹೀಗೂ ಉಂಟೆ: ಜರ್ಮನ್ ಗೆಲುವು ಆಕ್ಟೋಪಸ್ ಭವಿಷ್ಯ
ಒಬೆರ್ಸೆನ್, ಜು.4: ವಿಶ್ವಕಪ್ 2010ರಲ್ಲಿ ಜರ್ಮನಿಯ ಎಲ್ಲಾ ಪಂದ್ಯಗಳ ಭವಿಷ್ಯವನ್ನು ಪಂದ್ಯಕ್ಕೆ ಮೊದಲೇ ಪೌಲ್ ಎಂಬ ಹೆಸರಿನ ಆಕ್ಟೋಪಸ್ ಸೂಚಿಸುತ್ತಿದೆ. ಅಚ್ಚರಿ ಎಂದರೆ ಇದುವರೆಗಿನ ಎಲ್ಲಾ ಐದು ಪಂದ್ಯಗಳಲ್ಲಿ ಆಕ್ಟೋಪಸ್ ಭವಿಷ್ಯ ನಿಜವಾಗಿದೆ.
ಕೆಲವರು ಇದು ಅದೃಷ್ಟ ಎಂದರೆ, ಇನ್ನೂ ಕೆಲವರು ಮಂತ್ರಮುಗ್ಧರಾಗಿ ಮೌನಕ್ಕೆ ಶರಣಾಗಿದ್ದಾರೆ. ಒಂದಷ್ಟು ಜನ ಭವಿಷ್ಯ ಹೇಳುವವರು, ಜ್ಯೋತಿಷಿಗಳು ಹೊಟ್ಟೆ ಉರಿಯೊಂದಿಗೆ ಒದ್ದಾಡುತ್ತಿದ್ದಾರೆ. ಅಷ್ಟಪಾದಗಳ್ಳುಳ್ಳ ಜೀವಿಯೊಂದು ಜರ್ಮನಿನ ಸೋಲು ಗೆಲುವಿನ ಸ್ಪಷ್ಟ ಚಿತ್ರಣ ನೀಡುತ್ತಿರುವುದು ನಿಜಕ್ಕೂ ಸೋಜಿಗದ ಸಂಗತಿ.
ಭವಿಷ್ಯ ಹೇಳುವ ಪರಿ:ಕಪ್ಪೆಚಿಪ್ಪಿನ ಆಹಾರ ಹೊಂದಿರುವ ಎರಡು ಡಬ್ಬಿಗಳನ್ನು ಆಕ್ಟೋಪಸ್ ನ ಮುಂದಿರಿಸಲಾಗುತ್ತದೆ. ಈ ಡಬ್ಬಿಗೆ ಜರ್ಮನ್ ಹಾಗೂ ಎದುರಾಳಿ ತಂಡದ ಬಾವುಟವನ್ನು ಹೊದೆಸಿರಲಾಗುತ್ತದೆ. ಪೌಲ್ ಇರುವ ನೀರಿನ ಜಾಡಿಯಲ್ಲಿ ಈ ಎರಡು ಡಬ್ಬಿಯನ್ನು ಇಳಿಬಿಡಲಾಗುತ್ತದೆ. ಯಾವ ಡಬ್ಬಿಯಲ್ಲಿನ ಆಹಾರವನ್ನು ಪೌಲ್ ಸೇವಿಸುತ್ತಾನೋ ಆ ತಂಡ ವಿಜಯಿಯಾಗುತ್ತದೆ ಎಂದು ತಿಳಿಯಲಾಗುತ್ತದೆ.
ಮೊದಮೊದಲು ಇದರ ಬಗ್ಗೆ ಜನತೆಗೆ ಕುತೂಹಲವಿದ್ದರೂ ನಂಬಿಕೆ ಇರಲಿಲ್ಲ. ಸೆರ್ಬಿಯಾ ವಿರುದ್ಧ ಜರ್ಮನಿ ಸೋಲುತ್ತದೆ ಎಂದು ಪೌಲ್ ಸೂಚಿಸಿದಾಗ ಅಣಕಿಸಿ ನಕ್ಕವರೇ ಹೆಚ್ಚು. ಆದರೆ, ಜರ್ಮನಿಯ ಐದೂ ಪಂದ್ಯಗಳ ಫಲಿತಾಂಶಗಳನ್ನು ಸರಿಯಾಗಿ ಸೂಚಿಸಿ ಪೌಲ್ ಸವಾಲೆಸೆದಿದ್ದಾನೆ.
ಯಾರು ಈ ಪೌಲ್ : ಇಂಗ್ಲೆಂಡ್ ನಲ್ಲಿ ಹುಟ್ಟಿದ ಈ ಆಕ್ಟೋಪಸ್ , ಜರ್ಮನಿನ ಸೀ ಲೈಫ್ ಅಕ್ವೇರಿಯಂನಲ್ಲಿ ಜೀವಿಸುತ್ತಿದ್ದಾನೆ. ಅಲ್ಲಿನ ಆತನ ಪಾಲಕರಿಗೆ ಪೌಲ್ ಭವಿಷ್ಯ ಹೇಳುವ ಐಡಿಯಾ ಹೊಳೆಯಿತು ಎಂಬುದು ಇನ್ನೂ ತಿಳಿದಿಲ್ಲ. ಅರ್ಜೆಂಟೀನಾ ವಿರುದ್ಧ ಜರ್ಮನಿನ ವಿಜಯ ಎಂದು ಸೂಚಿಸಿದ್ದ ಪೌಲ್ ಈಗ ಜಗತ್ತಿನಾದ್ಯಂತ ಬಹುಬೇಡಿಕೆ.











Click it and Unblock the Notifications