ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಾಯುಕ್ತ ರಾಜೀನಾಮೆ; ಶಿವಮೊಗ್ಗದಲ್ಲಿ ಪ್ರತಿಭಟನೆ

By * ಕೆಆರ್ ಸೋಮನಾಥ್, ಶಿವಮೊಗ್ಗ
|
Google Oneindia Kannada News

Protest in support of Lokayukta
ಶಿವಮೊಗ್ಗ, ಜೂ.24 : ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ರಾಜೀನಾಮೆಯನ್ನು ಅಂಗೀಕರಿಸದಿರುವಂತೆ ಒತ್ತಾಯಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಗುರುವಾರ ಇಲ್ಲಿನ ಲೋಕಾಯುಕ್ತ ಕಛೇರಿ ಎದುರು ಪ್ರತಿಭಟನೆ ನಡೆಸಿ, ಲೋಕಾಯುಕ್ತ ಎಸ್‌ಪಿಯವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಲೋಕಾಯುಕ್ತರಾಗಿ ನೇಮಕಗೊಂಡ ನಂತರ ರಾಜ್ಯದ ಹಲವು ಭಾಗಗಳಲ್ಲಿ ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ಮಾಡಿ ಆಸ್ತಿ-ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತಹ ಕೆಲಸ ಮಾಡಿದ್ದರು. ಪಕ್ಷಪಾತವಿಲ್ಲದೇ ರಾಜ್ಯದೆಲ್ಲೆಡೆ ಭ್ರಷ್ಟ ಅಧಿಕಾರಿಗಳನ್ನು ಸದೆಬಡಿಯಲು ಹೆಗ್ಡೆಯವರು ನಿಷ್ಪಕ್ಷವಾಗಿ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಿ, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇಂತಹ ಲೋಕಾಯುಕ್ತರಿಗೆ ಧಮಕಿ ಹಾಕುವಂತಹ ಕೆಲಸವನ್ನು ಭ್ರಷ್ಟ ಸರ್ಕಾರದ ಮಂತ್ರಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಂತೋಷ್ ಹೆಗ್ಡೆಯವರ ರಾಜೀನಾಮೆಯನ್ನು ಅಂಗೀಕರಿಸದೇ ಅವರಿಗೆ ಸಂಪೂರ್ಣ ಪರಮಾಧಿಕಾರ ನೀಡುವಂತೆ ಹಾಗೂ ಜನತೆಯನ್ನು ಭ್ರಷ್ಟರಿಂದ ಕಾಪಾಡಲು ಸಹಕರಿಸುವಂತೆ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಎನ್‌ಎಸ್‌ಯುಐನ ಜಿಲ್ಲಾಧ್ಯಕ್ಷ ದೇವೇಂದ್ರಪ್ಪ, ಕಾರ್ಯಾಧ್ಯಕ್ಷ ಮಧುಸೂಧನ್, ಚೇತನ್, ಮೋಹನ್, ಶಿವಕುಮಾರ್, ಶಂಕರ್, ಜಾಫರ್, ಮಂಜು, ಮುಖಂಡರಾದ ಎಲ್.ರಾಮೇಗೌಡ, ಸಿ.ಉಮಾಪತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಗೋಪಿವೃತ್ತದಲ್ಲಿ

ನಗರದ ಯೂತ್ ಕಾಂಗ್ರೆಸ್ (ಉತ್ತರ ಬ್ಲಾಕ್) ವತಿಯಿಂದ ಗೋಪಿವೃತ್ತದಲ್ಲಿ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಮುಖ್ಯಮಂತ್ರಿ ಯಡಿಯೂರಪ್ಪರವರ ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಸರ್ಕಾರ ಲೋಕಾಯುಕ್ತ ಸಂಸ್ಥೆಯ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿ, ಭ್ರಷ್ಟರ ವಿರುದ್ಧ ಸಮರ ಸಾರಿದ ನಿಷ್ಠಾವಂತ ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ಮಾನಸಿಕವಾಗಿ ಮನನೊಂದು ರಾಜೀನಾಮೆ ನೀಡಲು ಕಾರಣವಾಗಿದ್ದು, ಕೂಡಲೇ ಈ ಘಟನೆಯ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕೆಂದು ನಗರ ಯುವ ಕಾಂಗ್ರೆಸ್‌ನ ಕಾರ್ಯಕರ್ತರು ಆಗ್ರಹಿಸಿದರು.

ಸಂತೋಷ್ ಹೆಗ್ಡೆಯವರು ಲೋಕಾಯುಕ್ತರಾಗಿ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚಿನ ಭ್ರಷ್ಟಾಚಾರ ಹಾಗೂ ದುರಾಡಳಿತ ಘಟನೆಗಳು ದಾಖಲಾಗಿವೆ. ಸರ್ಕಾರದಲ್ಲಿರುವ ಆಡಳಿತ ಪಕ್ಷದ ಶಾಸಕರುಗಳು ಅಕ್ರಮ ಗಣಿಗಾರಿಕೆ, ಲಂಚ ಪ್ರಕರಣಗಳು ದಾಖಲಾಗಿದ್ದು, ಹೀಗೆ ತನಿಖೆ ಹಂತದಲ್ಲಿರುವಾಗ ಸರ್ಕಾರವೇ ಲೋಕಾಯುಕ್ತ ಇಲಾಖೆಯ ಬಗ್ಗೆ ಹಸ್ತಕ್ಷೇಪ ನಡೆಸುತ್ತಿದ್ದು, ಭ್ರಷ್ಟ ಅಧಿಕಾರಿಗಳಿಗೆ ಮನ್ನಣೆ ನೀಡುವ ಮೂಲಕ ಭ್ರಷ್ಟ ಅಧಿಕಾರಿಗಳಿಗೆ ಸರ್ಕಾರವೇ ಪ್ರೋತ್ಸಾಹ ನೀಡುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ನಗರಯುವ ಕಾಂಗ್ರೆಸ್ ಅಧ್ಯಕ್ಷ ಕೆ.ರಂಗನಾಥ್, ಉಪಾಧ್ಯಕ್ಷರಾದ ಟಿ.ವಿ.ರಂಜಿತ್, ಕಿರಣ್, ಈಶ್ವರ್, ಪ್ರವೀಣ್, ಕಾರ್ಯದರ್ಶಿಗಳಾದ ತಂಗರಾಜ್, ವಿನಯ್, ಗಿರೀಶ್,ಸಹಕಾರ್ಯದರ್ಶಿ ಶ್ರೀನಿವಾಸ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಗಾಂಧಿಪಾರ್ಕಿನಲ್ಲಿ

ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ)ಯ ಕಾರ್ಯಕರ್ತರು ಕೂಡ ಇಂದು ಗಾಂಧಿಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡದೇ ಪ್ರಾಮಾಣಿಕ ಅಧಿಕಾರಿಗಳ ಅಮಾನತು ಆದೇಶದ ಮೂಲಕ ಭ್ರಷ್ಟಾಚಾರಕ್ಕೆ ಬೆಂಬಲ ವ್ಯಕ್ತಪಡಿಸುತ್ತಾ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಪಿ.ಪ್ರಶಾಂತ್, ಜಿಲ್ಲಾ ವಕ್ತಾರ ಎನ್.ಎಂ.ಮುರಳಿ, ಉಪಾಧ್ಯಕ್ಷ ವೆಂಕಟೇಶ್ ಹೆಗ್ಡೆ, ಕೂಡ್ಲಿಗೆರೆ ಚಂದ್ರಶೇಖರ್, ಯಲ್ಲಪ್ಪ, ರವೀಂದ್ರ ಸಾಗರ್, ಕೃಷ್ಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X