ಲೋಕಾಯುಕ್ತ ಸಂತೋಷ್ ಹೆಗ್ಡೆ ರಾಜೀನಾಮೆ?

ರಾಜಕಾರಣಿಗಳ ಅನಾದಾರಣೆ, ಪರಿಶ್ರಮಕ್ಕೆ ಸಿಗದ ಪ್ರತಿಫಲ ಇವು ಲೋಕಾಯುಕ್ತರಿಗೆ ನೋವು ತಂದಿದೆ. ಗಣಿ ಧಣಿಗಳ ವಿರುದ್ಧ ನೀಡಿರುವ ಸಮಗ್ರ ವರದಿಯ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಭ್ರಷ್ಟಾಚಾರದ ಆರೋಪಿ ಶಾಸಕ ಸಂಪಂಗಿ ಕ್ಲೀನ್ ಚಿಟ್ ಪಡೆದು ಹೊರನಡೆದಿದ್ದು, ನೆರೆ ಸಂತ್ರಸ್ತರ ಪುನರ್ವಸತಿ ಕಾರ್ಯದಲ್ಲಿನ ಭ್ರಷ್ಟಾಚಾರ. .ಇತ್ಯಾದಿ ಪ್ರಕರಣಗಳಿಂದ ಲೋಕಾಯುಕ್ತ ನ್ಯಾಯಮೂರ್ತಿಗಳು ನೊಂದಿದ್ದಾರೆ ಎನ್ನಲಾಗಿದೆ.
ಲೋಕಾಯುಕ್ತರಿಗೆ ಪರಮಾಧಿಕಾರ ಎಂಬುದು ಬರೀ ಬಾಯಿ ಮಾತಿನ ಉಪಚಾರವಾಗಿದೆ. ರಾಜ್ಯ ಸರ್ಕಾರ ಲೋಕಾಯುಕ್ತರ ಕಾರ್ಯಕ್ಕೆ ಸರಿಯಾದ ಗೌರವಾದರಗಳನ್ನು ನೀಡದ ಕಾರಣ ಸಂತೋಷ್ ಹೆಗಡೆ ಅವರು ಬೇಸತ್ತಿದ್ದಾರೆ ಎಂದು ಅವರ ಕಚೇರಿ ಮೂಲಗಳಿಂದ ಸುದ್ದಿ ಬಂದಿದೆ.
ಇಂದು ಸಂಜೆ ರಾಜೀನಾಮೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುವ ಸಾಧ್ಯತೆಯಿದೆ. ಆದರೆ, ಕೇವಲ ಪರಮಾಧಿಕಾರ ನೀಡದ್ದಕ್ಕೆ ರಾಜೀನಾಮೆ ಸಲ್ಲಿಸುತ್ತಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎನ್ನಬಹುದು. ಎಲ್ಲದ್ದಕ್ಕೂ ಉತ್ತರ ಸಂಜೆ 5.30ರ ನಂತರ ಸಿಗುವ ಸಾಧ್ಯತೆಯಿದೆ.
ಜೆಡಿಎಸ್ ಹಾಗೂ ಬಿಜೆಪಿ ಟ್ವಿಂಟಿ20 ಅಧಿಕಾರದ ಸಂದರ್ಭದಲ್ಲಿ ನ್ಯಾ.ವೆಂಕಟಾಚಲ ಅವರಿಂದ ತೆರವಾಗಿದ್ದ ಸ್ಥಾನವನ್ನು ಎನ್. ಸಂತೋಷ್ ಹೆಗಡೆ ಅವರು ತುಂಬಿದ್ದರು. ಇನ್ನೂ 14 ತಿಂಗಳು ಹೆಗಡೆ ಅವರ ಅಧಿಕಾರದ ಅವಧಿಯಿದೆ. ಭ್ರಷ್ಟರಿಗೆ ಸಿಂಹಸ್ವಪ್ನರಾಗಿದ್ದ ಲೋಕಾಯುಕ್ತ ಈ ನಿರ್ಧಾರಕ್ಕೆ ಸ್ಪಷ್ಟ ಕಾರಣ ಇನ್ನೂ ತಿಳಿದಿಲ್ಲ.











Click it and Unblock the Notifications