ಕೊಚ್ಚಿಹೋದ ಮಂತ್ರಾಲಯ ಸಂಪರ್ಕ ಸೇತುವೆ
ರಾಯಚೂರು, ಜೂ.16: ಆಂಧ್ರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ತುಂಗಭದ್ರಾ ತಾತ್ಕಾಲಿಕ ಸೇತುವೆ ಎರಡನೆ ಭಾರಿ ಕೊಚ್ಚಿ ಹೋಗಿ ಸುಮಾರು ನಾಲ್ಕು ಲಕ್ಷ ರು. ನೀರಿನಲ್ಲಿ ಹೋಮ ಮಾಡಿದಂತಾಗಿದೆ. ನದಿಗೆ ಹೆಚ್ಚುವರಿಯಾಗಿ ನೀರು ಹರಿಸಿದ್ದರಿಂದ ಸೇತುವೆ ಕೊಚ್ಚಿ ಹೋಗಿದೆ ಎನ್ನಲಾಗಿದೆ.
ದುರಸ್ತಿ ಹೆಸರಿನಲ್ಲಿ ಒಂದೂವರೆ ಕೋಟಿ ಹಣ ಖರ್ಚಾಗಿದ್ದರೂ, ಸಂಪರ್ಕ ಸಾಧ್ಯವಾಗಿಲ್ಲ. ಧಾರ್ಮಿಕ ಕ್ಷೇತ್ರವಾಗಿರುವ ಮಂತ್ರಾಲಯ ಸೇರಿದಂತೆ ಆಂಧ್ರ ಸಂಪರ್ಕಿಸುವ ಸಂಚಾರ ಸ್ಥಗಿತಗೊಳ್ಳುವಂತಾಗಿದೆ. ಈಶಾನ್ಯ ರಾಜ್ಯ ಸಾರಿಗೆ ಸಂಸ್ಥೆಗೆ ಇದರಿಂದಾಗಿ 20 ಲಕ್ಷಕ್ಕೂ ಅಧಿಕ ನಷ್ಟವಾಗುವಂತಾಗಿದೆ. ಮಂತ್ರಾಲಯಕ್ಕೆ ತೆರಳುವ ಭಕ್ತರಿಗೆ ರೈಲು ಮಾತ್ರ ಲಭ್ಯವಾಗಲಿದೆ.
ಲೋಕೋಪಯೋಗಿ ಇಲಾಖೆ ಎರಡನೇ ಬಾರಿ ದುರಸ್ತಿ ಕೈಗೊಂಡು ನಾಲ್ಕು ಲಕ್ಷ ರು. ವೆಚ್ಚದಲ್ಲಿ ಪೈಪುಗಳ ಜೋಡಣೆ ಮತ್ತು ಮೇಲ್‌ರಸ್ತೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿತ್ತು. ಆದರೆ ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನದಿಯ ನೀರಿನ ಮಟ್ಟ ಹೆಚ್ಚಾಗಿ ನೀರಿನ ರಭಸಕ್ಕೆ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದೆ.
ಶಾಶ್ವತ ಸೇತುವೆ ನಿರ್ಮಾಣಕ್ಕೆ 40 ಕೋಟಿ ರು. ವೆಚ್ಚದಲ್ಲಿ ಲೋಕೊಪಯೋಗಿ ಇಲಾಖೆ ಟೆಂಡರ್ ಪ್ರಕ್ರಿಯೆ ಆರಂಭಿಸಿದ್ದು, ಗುತ್ತಿಗೆದಾರರ ನಿರಾಸಕ್ತಿಯಿಂದ ಟೆಂಡರ್ ಪ್ರಕ್ರಿಯೆ ಅಪೂರ್ಣವಾಗಿದೆ. ಮುಂಗಾರು ಆರಂಭ ಗೊಂಡಿದ್ದರಿಂದ ಮಳೆಗಾಲ ಪೂರ್ಣ ಗೊಳ್ಳುವವರೆಗೂ ಶಾಶ್ವತ ಸೇತುವೆ ನಿರ್ಮಾಣ ಕಾಮಗಾರಿ 3 ತಿಂಗಳು ಸ್ಥಗಿತಗೊಳ್ಳುವುದರಿಂದ ವಾಹನ ಸಂಚಾರ ಸ್ಥಗಿತಗೊಳ್ಳುವ ಆತಂಕ ಉದ್ಭವಿಸಿದೆ.












Click it and Unblock the Notifications